ಗೋಕಾಕ್(ಡಿ.01): ಉಪಚುನಾವಣೆಯಲ್ಲಿ ಕಡಿಮೆ ಸ್ಥಾನ ಬಂದರೆ ಜೆಡಿಎಸ್ ಜೊತೆ ಮತ್ತೆ ಮಾತುಕತೆ ಆಗುತ್ತೆ ಎಂದು ಹೇಳುವ ಮೂಲಕ ರಾಜ್ಯದಲ್ಲಿ ಕಾಂಗ್ರೆಸ್- ಜೆಡಿಎಸ್ ಸಮ್ಮಿಶ್ರ ಸರ್ಕಾರ ಮತ್ತೆ ಅಧಿಕಾರಕ್ಕೆ ಬರುತ್ತೆ ಎಂದು ಮಾಜಿ ಸಚಿವ ಸತೀಶ ಜಾರಕಿಹೊಳಿ ಅವರು ಪರೋಕ್ಷವಾಗಿ ಹೇಳಿದ್ದಾರೆ. 

ಭಾನುವಾರ ನಗರದಲ್ಲಿ ಸುದ್ದಿಗಾರೊಂದಿಗೆ ಮಾತನಾಡಿದ ಅವರು, ಅಧಿಕಾರ ಬಿಟ್ಟುಕೊಟ್ಟು ಕೂರಲು ಯಾರೂ ತಯಾರಿಲ್ಲ.ಬಹುಶಃ ಈಗಾಗಲೇ ಬಿಟ್ಟು ಕೊಟ್ಟಿದ್ದೇ ತಪ್ಪಾಗಿದೆ ಅನಿಸಿರಬಹುದು ಎಂದು ಹೇಳಿದ್ದಾರೆ.  

8 ಕ್ಕಿಂತ ಕಡಿಮೆ ಸ್ಥಾನ ಬಿಜೆಪಿಗೆ ಬಂದ್ರೆ ಮತ್ತೇ ಸಮ್ಮಿಶ್ರ ಸಕಾ೯ರ ಆಗಬಹುದು. ಎಲ್ಲೋ ಒಂದು ಕಡೆಗೆ ಕಾಂಗ್ರೆಸ್ ಜೆಡಿಎಸ್ ನಾಯಕರ ಮಧ್ಯೆ ಮಾತುಕತೆ ನಡೆದಿದೆ ಅನ್ನೋ ಮಾತುಗಳು ಕೂಡ ಕೇಳಿಬರುತ್ತಿವೆ. ಉಪಚುನಾವಣೆಯ ಫಲಿತಾಂಶ ಹೊರ ಬರುತ್ತಲೇ ಅದಕ್ಕೊಂದು ಅಂತಿಮ ರೂಪ ಬರುತ್ತದೆ. 

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ 

ನಿನ್ನೆಯಷ್ಟೇ ಜೆಡಿಎಸ್ ಅಭ್ಯರ್ಥಿ ಗೆದ್ದರೆ ಮಂತ್ರಿ‌ ಮಾಡ್ತೀನಿ ಅಂತ ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ ಹೊಸ ಸರ್ಕಾರದ ಸುಳಿವು ನೀಡಿದ್ದರು. ಈ ಹೇಳಿಕೆ ಬೆನ್ನಲ್ಲೆ ಮೈತ್ರಿ ಸರ್ಕಾರ ರಚನೆ ಸಂಬಂಧ ಸತೀಶ ಜಾರಕಿಹೊಳಿ ನೀಡಿರುವ ಹೇಳಿಕೆ ಹಲವಾರು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ.

ಸಾಹುಕಾರಿಕೆ ದೌಲತ್ ಮತ್ತು ಗೂಂಡಾಗಳಿಗೆ ಓಟ್ ಹಾಕಬೇಡಿ ಎಂದ ಮಾಜಿ ಸಿಎಂ ಕುಮಾರಸ್ವಾಮಿ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಸತೀಶ ಜಾರಕಿಹೊಳಿ ಅವರು, ಜಾರಕಿಹೊಳಿ ಫ್ಯಾಮಿಲಿಯಲ್ಲಿ ಯಾರೂ ಗೂಂಡಾಗಳಿಲ್ಲ, ಎಲ್ಲರೂ ಕಬ್ಬಿನ ಬಾಕಿ ಬಿಲ್ ಇಟ್ಟವರಿಲ್ಲ. ಡಿಫರೆಂಟ್ ಇದ್ದೇವೆ, ಎಲ್ಲರನ್ನೂ ಮಿಕ್ಸ್ ಮಾಡಲಿಕ್ಕೆ ಹೋಗಬೇಡಿ. 5 ಜನ ಜಾರಕಿಹೊಳಿ ಸಹೋದರರ ಪ್ರಿನ್ಸಿಪಲ್ ಬೇರೆ ಬೇರೇನೆ ಇದೆ ಎಂದು ಹೇಳಿದ್ದಾರೆ. 

ಅದ್ರಲ್ಲಿ ಎಲ್ಲರೂ ಇದ್ದಾರೆ, ಆದ್ರೆ ಕುಮಾರಸ್ವಾಮಿ ಹೇಳಿದ್ದೇನು ಸಂಪೂರ್ಣ ತಪ್ಪು ಅಂತ ನಾನು ಹೇಳೋದಿಲ್ಲ, ಅದು ಇಡೀ ಕುಟುಂಬಕ್ಕೆ ಹೇಳಿದ ಮಾತಲ್ಲ, ಗೂಂಡಾ ಮಾತು ರಮೇಶ್ ಗೆ ಮಾತ್ರ ಅಪ್ಲಾಯ್ ಆಗುತ್ತದೆ ಎಂದು ತಿಳಿಸಿದ್ದಾರೆ. 
ಸಿಎಂ ಯಡಿಯೂರಪ್ಪ ಅವರು ಬೆಳಗಾವಿಯಲ್ಲಿ ಕೊನೆಯ ಮೂರು ದಿನ ಬೀಡುಬಿಟ್ಟಿರುವ ವಿಚಾರದ ಬಗ್ಗೆ ಮಾತನಾಡಿದ ಅವರು, ರಮೇಶಗೆ ಸೋಲಾಗುತ್ತೇ ಅನ್ನೋ ಆತಂಕ ಬಿಜೆಪಿ ಪಕ್ಷಕ್ಕೆ ಇದೆ. ಬೆಳಗಾವಿ ಜಿಲ್ಲೆಯಲ್ಲಿ 3 ಸ್ಥಾನಗಳಿವೆ, ಹೀಗಾಗಿ ಸಿಎಂ ಇನ್ನು ಮೂರು ದಿನ ಇಲ್ಲೇ ಇರ್ತಾರೆ. ಅವರ ರಿಪೋರ್ಟ್ ಪ್ರಕಾರ ಮೂರು ಅಭ್ಯರ್ಥಿಗಳಿಗೆ ವಿರೋಧ ಇದೆ ಅಂತ ಬಹುಶಃ ಸಿಎಂ ಯಡಿಯೂರಪ್ಪಗೆ ಗೊತ್ತಾಗಿದೆ. ಹೀಗಾಗಿ ಇಲ್ಲೆ ಇದ್ದು ಗೆಲ್ಲಿಸೋ ಪ್ರಯತ್ನ ಮಾಡುತ್ತಿದ್ದಾರೆ ಎಂದು ಹೇಳಿದ್ದಾರೆ. 

ಈಗಾಗಲೇ ಗೋಕಾಕ್ ಮತಕ್ಷೇತ್ರದಾದ್ಯಂತ ಸುತ್ತಿ ಪ್ರಚಾರ ಮಾಡಿದ್ದೀವಿ, ಇಲ್ಲಿ ಅಭಿವೃದ್ಧಿ ಆಗದೇ ಇರುವ ಬಗ್ಗೆ ಜನರ ಗಮನಕ್ಕೆ ತಂದಿದ್ದೇವೆ. 25 ವರ್ಷಗಳಿಂದ ರಮೇಶ್ ಜಾರಕಿಹೊಳಿ ಆಡಳಿತ ಮಾಡಿದ್ದಾರೆ. ಆದ್ರೆ ಇನ್ಮುಂದೆ ಅವರಿಗೆ ಅಭಿವೃದ್ಧಿ ಮಾಡೋಕೆ ಆಗಲ್ಲ. ಅಧಿಕಾರಕ್ಕಾಗಿ ಹೋಗಿದ್ದಾರೆ ಇದನ್ನ ಜನರಿಗೆ ತಿಳಿಸಿ ಓಟ್ ಕೇಳ್ತೀವಿ ಎಂದು ಹೇಳಿದ್ದಾರೆ.

ಡಿಸೆಂಬರ್ 5ರಂದು ಕರ್ನಾಟಕದಲ್ಲಿ 15 ವಿಧಾನಸಭಾ ಕ್ಷೇತ್ರಗಳಿಗೆ ಉಪಚುನಾವಣೆ ನಡೆಯಲಿದ್ದು, 9ರಂದು ಫಲಿತಾಂಶ ಪ್ರಕಟವಾಗಲಿದೆ.