ಹುಬ್ಬಳ್ಳಿ(ಅ.5): ಕೇಂದ್ರ ಸರ್ಕಾರ ರಾಜ್ಯದ ನೆರೆ ಪರಿಹಾರಕ್ಕಾಗಿ ನೀಡಿರುವ 1200 ಕೋಟಿ ತೀರಾ ಕಡಿಮೆಯಾಗಿದ್ದು, ಕನಿಷ್ಠ 5 ಸಾವಿರ ಕೋಟಿಯನ್ನಾದರೂ ಬಿಡುಗಡೆ ಮಾಡಬೇಕಿತ್ತು ಎಂದು ಕಾಂಗ್ರೆಸ್‌ನ ಹಿರಿಯ ಮುಖಂಡ ಆರ್‌.ವಿ. ದೇಶಪಾಂಡೆ ಅವರು ಹೇಳಿದ್ದಾರೆ. 

ನಗರದ ವಿಮಾನ ನಿಲ್ದಾ​ಣ​ದಲ್ಲಿ ಸುದ್ದಿ​ಗಾ​ರ​ರೊಂದಿಗೆ ಮಾತ​ನಾ​ಡಿದ ಅವರು, ರಾಜ್ಯದಲ್ಲಿ ನೆರೆ ಹಾನಿ ಸಂಭವಿಸಿ ರೈತರು, ಸಾಮಾನ್ಯ ಜನತೆ ಸಾಕಷ್ಟು ನೋವು, ಕಷ್ಟ, ನಷ್ಟ ಅನುಭವಿಸಿದ್ದಾರೆ. ಕೇಂದ್ರ ಸರ್ಕಾರವೇನು ದಾನ ಕೊಡುತ್ತಿಲ್ಲ. ರಾಜ್ಯ ಸರ್ಕಾರ ಕೇಂದ್ರದಿಂದ ಸೂಕ್ತ ಪರಿಹಾರ ತರುವುದಲ್ಲಿ ವಿಫಲವಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು. 

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ 

ಉತ್ತರ ಕರ್ನಾಟಕ ಭಾಗದಲ್ಲಿ ಪ್ರವಾಹದಿಂದ ಜನರು ಬೀದಿ ಪಾಲಾಗಿದ್ದಾರೆ. ಜನತೆ ಬೇರೆಡೆ ಗುಳೆ ಹೋಗಲು ಆರಂಭಿಸಿದ್ದಾರೆ. ಆದರೆ, ಸರ್ಕಾರ ಮಾತ್ರ ಕೈಕಟ್ಟಿಕುಳಿತಿರುವುದು ಸರಿಯಲ್ಲ. ರಾಜ್ಯ ಸರ್ಕಾರ ಇನ್ನಾದರೂ ಕ್ರಿಯಾಶೀಲವಾಗಬೇಕು. ನೆರೆ ಪರಿಹಾರ ಬಿಡುಗಡೆ ವಿಷಯಕ್ಕೆ ಸಂಬಂಧಿಸಿ ಯಾರೂ ರಾಜಕೀಯ ಮಾಡಬಾರದು ಎಂದು ತಿಳಿಸಿದ್ದಾರೆ.