ಶಿರಸಿ(ಡಿ.19): ಬಿಜೆಪಿ ಸರ್ಕಾರದ ಅವಧಿಯಲ್ಲಿ ಅಭಿವೃದ್ಧಿ ಕಾರ್ಯಗಳು ನಿಂತುಹೋಗಿವೆ. ಜಿಲ್ಲಾ ಉಸ್ತುವಾರಿ ಸಚಿವ ಶಿವರಾಮ ಹೆಬ್ಬಾರ ಎಷ್ಟು ಹಣವನ್ನು ಜಿಲ್ಲೆಗೆ ತಂದಿದ್ದೇನೆ ಎಂಬ ಬಗ್ಗೆ ಶ್ವೇತ ಪತ್ರ ಹೊರಡಿಸಲಿ ಎಂದು ಮಾಜಿ ಸಚಿವ, ಶಾಸಕ ಆರ್‌.ವಿ. ದೇಶಪಾಂಡೆ ಆಗ್ರಹಿಸಿದ್ದಾರೆ. 

ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಶುಕ್ರವಾರ ಮಾತನಾಡಿ, ರಾಜ್ಯದಲ್ಲಿ ಬಿಜೆಪಿ ಸರಕಾರ ವಿಫಲವಾಗಿದ್ದು, ಬಂಡವಾಳ ಹೂಡಿಕೆಯಿಲ್ಲದೇ ನಿರುದ್ಯೋಗ ಸೃಷ್ಟಿಯಾಗುತ್ತಿದೆ. ಹೊಸ ಕೈಗಾರಿಕಾ ನೀತಿಯಿಂದ ಈಗಾಗಲೇ ಇದ್ದ ಕೈಗಾರಿಕೆಗಳು ಮುಚ್ಚಿ ಹೋಗುತ್ತಿವೆ. ನಾವು ತಂದಿದ್ದ ಟೋಯೋಟಾ​ದಂತಹ ಕಂಪನಿಗಳೂ ರಾಜ್ಯದಿಂದ ಕಾಲು ಕೀಳಲು ಚಿಂತಿಸುತ್ತಿವೆ. ಇದರಿಂದ ಈ ಕಂಪನಿಯನ್ನೇ ನಂಬಿ ಬದುಕುತ್ತಿರುವ ಸಾವಿರಾರು ಕಾರ್ಮಿಕರು ಬೀದಿ ಪಾಲಾಗುತ್ತಿದ್ದಾರೆ ಎಂದರು.

ಕಾರವಾರ: ನೌಕಾಪಡೆಯ ಹಿರಿಯ ಅಧಿಕಾರಿ ಶ್ರೀಕಾಂತ್‌ ಕೊರೋನಾಗೆ ಬಲಿ

ರಾಮಕೃಷ್ಣ ಹೆಗಡೆಯವರ ಕಾಲದಲ್ಲಿ ನಾವು ಚುರುಮುರಿ ತಿಂದು ಕಷ್ಟಪಟ್ಟು ರಾಜಕೀಯ ಮಾಡಿ ಗೆದ್ದು ಬಂದಿದ್ದೇವೆ. ಆದರೆ, ಇಂದಿನ ರಾಜಕೀಯ ಸ್ಥಿತಿ ನೋಡಿದರೆ ಬೇಸರವಾಗುತ್ತದೆ. ಹಣ, ಹೆಂಡ ನೀಡಿ ರಾಜಕೀಯ ಮಾಡಿ ಗೆದ್ದು ಬರುತ್ತಿದ್ದಾರೆ. ಚುನಾವಣೆ ಎಂದರೆ ವ್ಯಾಪಾರ, ದಂಧೆಯಾಗಿದೆ. ಇದನ್ನು ತಡೆಯಲು ಚುನಾವಣಾ ಆಯೋಗ ಹದ್ದಿನ ಕಣ್ಣಿಡಬೇಕು. ಆಯೋಗದ ಪ್ರತಿಯೊಂದು ಅಕ್ಷರಕ್ಕೂ ಬೆಲೆ ನೀಡಿದಾಗ ಮಾತ್ರ ಚುನಾವಣೆ ಪ್ರಜಾಪ್ರಭುತ್ವದ ಆಶಯದಂತೆ ನಡೆಯಲು ಸಾದ್ಯ ಎಂದರು.

ಯಾವುದೇ ಚುನಾವಣೆಯಾದರೂ ಪ್ರಜಾಪ್ರಭುತ್ವದ ಮೌಲ್ಯ ಉಳಿಯಬೇಕಾದರೆ ಚುನಾವಣಾ ಆಯೋಗದ ಮಾರ್ಗ ಸೂಚಿಯಂತೆ ಚುನಾವಣೆ ನಡೆಯಬೇಕು. ಗ್ರಾಮ ಸ್ವರಾಜ್ಯವನ್ನು ಗಟ್ಟಿಗೊಳಿಸುವ ಗ್ರಾಪಂ ಚುನಾವಣೆಯಲ್ಲಿ ಬಡವರ ಕೂಗನ್ನು ಆಲಿಸುವವರಿಗೆ, ಅಭಿವೃದ್ಧಿ ಪರ ಚಿಂತಕನನ್ನು ಅಭ್ಯರ್ಥಿಯನ್ನಾಗಿಸಿ ಗೆಲ್ಲಿಸಬೇಕು. ಈ ಚುನಾವಣೆ ಯಾವ ಪಕ್ಷದ ಚಿಹ್ನೆಯ ಮೇಲೆ ನಡೆಯುವುದಿಲ್ಲ. ಆದ್ದರಿಂದ ಒಮ್ಮತದ ಅಭ್ಯರ್ಥಿಯನ್ನು ಗ್ರಾಮದ ಮುಖ್ಯಸ್ಥರು, ಕಾರ್ಯಕರ್ತರು ನೀಡಬೇಕು ಎಂದು ಸಲಹೆ ನೀಡಿದ ಅವರು, ಅಭ್ಯರ್ಥಿಯನ್ನು ಆಯ್ಕೆ ಮಾಡಲು ಪಕ್ಷದ ಮುಖಂಡರು ಕೈ ಹಾಕಿದರೆ ಕಾರ್ಯಕರ್ತರ ಅಸಮಾಧಾನಕ್ಕೆ ಕಾರಣವಾಗಬಹುದು ಎಂದರು. ಕಾರ್ಯಕರ್ತರನ್ನು ಗೆಲ್ಲಿಸಲು ಪಕ್ಷದ ಮುಖಂಡರು ಆರು ಕ್ಷೇತ್ರಗಳಲ್ಲಿ ಸಭೆ ಮಾಡಿದ್ದಾ​ರೆ. ರಾದ್ಯಾಧ್ಯಕ್ಷರೂ​ ಭೇಟಿ ನೀಡಿ ಕಾರ್ಯಕರ್ತರ ಸಭೆ ನಡೆಸಿದ್ದಾರೆ ಎಂದರು. ಸುದ್ದಿಗೋಷ್ಠಿಯಲ್ಲಿ ಡಿಸಿಸಿ ಅಧ್ಯಕ್ಷ ಭೀಮಣ್ಣ ಟಿ. ನಾಯ್ಕ, ಪ್ರಮುಖರಾದ ನಿವೇದಿತಾ ಆಳ್ವಾ ಉಪಸ್ಥಿತರಿದ್ದರು.