ಧಾರವಾಡ(ಫೆ.09): ಕಾಂಗ್ರೆಸ್‌ನಿಂದ ಇನ್ನೂ ಬೇಕಾದ್ರೇ ಹತ್ತು ಜನ ಶಾಸಕರನ್ನು ತಗೋರಿ, ಆದ್ರೆ ಪಾಪ ಬಿ.ಎಸ್‌. ಯಡಿಯೂರಪ್ಪಗೆ ಮಾತ್ರ ತೊಂದರೆ ಕೊಡಬೇಡಿ ಎಂದು ಕಾಂಗ್ರೆಸ್‌ನ ಮಾಜಿ ಸಚಿವ ಆರ್‌.ಬಿ. ತಿಮ್ಮಾಪುರ ವ್ಯಂಗ್ಯವಾಡಿದ್ದಾರೆ. 

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿ ಹೈಕಮಾಂಡ್‌ಗೆ ಯಡಿಯೂರಪ್ಪ ಬೇಡವಾದರೆ ಕಿತ್ತು ಹಾಕಲಿ, ಆದರೆ ಪಾಪ ಅವರನ್ನು ಆಟವಾಡಿಸುವುದು ಬೇಡ ಎಂದು ಹೇಳಿದ್ದಾರೆ. 

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ 

ಯಡಿಯೂರಪ್ಪ ಬೇಡವಾದರೆ ಈಗಲೇ ತೆಗೆದು ಹಾಕಲಿ, ನಮ್ಮ ಕಾಂಗ್ರೆಸ್‌ನ ಇನ್ನು ಹತ್ತು ಜನರನ್ನು ಬೇಕಾದ್ರೆ ತೆಗೆದುಕೊಳ್ಳಲಿ, ನಮ್ಮವರ ರಾಜೀನಾಮೆ ಕೊಡಿಸೋದಾದ್ರೆ ಕೊಡಿಸಲಿ ಎಂದ ತಿಮ್ಮಾಪುರ, ಯಡಿಯೂರಪ್ಪನವರನ್ನು ಆಟವಾಡಿಸುವ ಕೆಲಸ ಮಾಡಬೇಡಿ ಎಂದು ಬಿಜೆಪಿ ಹೈಕಮಾಂಡ್‌ಗೆ ಮನವಿ ಮಾಡಿದ್ದಾರೆ.

ಇನ್ನು ಈ ದೇಶದ ಪ್ರಧಾನಿ ಮೋದಿ ಅವರು ಬಿಎಸ್‌ವೈಗೆ ಅವಮರ್ಯಾದೆ ಮಾಡುವ ಕೆಲಸ ಮಾಡುತ್ತಿದ್ದಾರೆ ಎಂದು ಆರೋಪಿಸಿರುವ ತಿಮ್ಮಾಪುರ, ಸಿಎಂ ಯಡಿಯೂರಪ್ಪಗೆ ಅವಮಾನ ಮಾಡಿದ್ರೆ ರಾಜ್ಯದ ಜನತೆಗೆ ಅವಮಾನ ಮಾಡಿದಂತೆ, ಯಡಿಯೂರಪ್ಪ ರಾಜ್ಯದ ಸಿಎಂ ಆಗಿ ಶಾ, ಮೋದಿ ಮುಂದೆ ತಗ್ಗಿ ಬಗ್ಗಿ ನಡೆಯುವುದು ಸರಿಯಲ್ಲ. ಇದು ರಾಜ್ಯದ ಜನರಿಗೆ ಮಾಡುವ ಅವಮಾನ ಎಂದ ಅವರು, ಕುಮಾರಸ್ವಾಮಿ ಕಿಂಗ್‌ ಆಗುವುದಕ್ಕೆ ಸಾಧ್ಯವಿಲ್ಲ, ಹೀಗಾಗಿ ಅವರು ಕಿಂಗ್‌ ಮೇಕರ್‌ನೇ ಆಗಬೇಕು. ಕೆಪಿಸಿಸಿಗೆ ಡಿಕೆಶಿ ಅಧ್ಯಕ್ಷರಾಗ್ತಾರೋ ಇಲ್ವೋ ಗೊತ್ತಿಲ್ಲ, ಎಐಸಿಸಿ ಈ ವಿಷಯದಲ್ಲಿ ಗುಟ್ಟು ಬಿಟ್ಟು ಕೊಡುತ್ತಿಲ್ಲ ಎಂದರು.

ಲಕ್ಷ್ಮಣ ಸವದಿ ಎಂಎಲ್‌ಸಿ ಚುನಾವಣೆ ವಿಚಾರದ ಕುರಿತು ಪ್ರತಿಕ್ರಿಯೆ ನೀಡಿದ ಅವರು, ಬಿಜೆಪಿಯ ಕೆಲ ಶಾಸಕರೇ ಅಭ್ಯರ್ಥಿ ಹಾಕಿ ಅಂತಾ ಹೇಳಿದ್ದಾರೆ, ಅದಕ್ಕಾಗಿಯೇ ಎಂಎಲ್‌ಸಿ ಚುನಾವಣೆಗೆ ಪಕ್ಷೇತರ ಅಭ್ಯರ್ಥಿ ಸ್ಪರ್ಧಿಸಿದ್ದಾರೆ, ಪವರ್‌ ಗೇಮ್‌ನಲ್ಲಿ ಸವದಿ ಸೋಲಬಹುದು ಎಂದರು.

ಸರ್ಕಾರ ನಮ್ಮ ಭಾವನೆ ವಿರುದ್ಧ ನಡೀತಾ ಇದೆ ಅಂತಾ ಬಿಜೆಪಿಯ ಒಳಗಡೆ ಕೆಲವರಿಗೆ ಅನಿಸಿದೆ, ಅಲ್ಲಿಯೂ ಬೇಗುದಿ ಇದೆ, ಪಕ್ಷೇತರ ಅಭ್ಯರ್ಥಿ ಬಿಜೆಪಿಯ ಅತೃಪ್ತರ ಜೊತೆ ಮಾತನಾಡಿಯೇ ಸ್ಪರ್ಧಿಸಿರಬೇಕು ಎಂದರು.