ಕನ್ನಡ ಭಾಷೆಯ ಮೇಲೆ ಅಪಾರ ಗೌರವ ಇದೆ: ಮಾಜಿ ಸಚಿವ ಪ್ರಭು ಚವ್ಹಾಣ್
ಬೇರೆ ಭಾಷೆಗಳನ್ನು ಗೌರವಿಸುವುದು ತಪ್ಪಲ್ಲ. ಆದರೆ ಕನ್ನಡವನ್ನು ಮಾತನಾಡಬೇಕು. ನಿತ್ಯಜೀವನದಲ್ಲಿ ಕನ್ನಡ ಭಾಷೆಯನ್ನು ಹೆಚ್ಚಾಗಿ ಬಳಕೆ ಮಾಡಬೇಕು. ಎಲ್ಲ ಸರ್ಕಾರಿ ಮತ್ತು ಖಾಸಗಿ ಕಛೇರಿಗಳು, ಅಂಗಡಿಗಳು, ಸಂಘ ಸಂಸ್ಥೆಗಳ ನಾಮಫಲಕಗಳಲ್ಲಿ ಕನ್ನಡ ಭಾಷೆ ಕಾಣುವಂತಾಗಬೇಕು. ನಾಡಿನೆಲ್ಲೆಡೆಯೂ ಕನ್ನಡಮಯ ವಾತಾವರಣ ನಿರ್ಮಿಸಲು ನಾವೆಲ್ಲರೂ ಮುಂದಾಗಬೇಕು ಎಂದ ಪ್ರಭು ಚವ್ಹಾಣ್
ವರದಿ - ಲಿಂಗೇಶ್ ಮರಕಲೆ, ಏಷ್ಯಾನೆಟ್ ಸುವರ್ಣ ನ್ಯೂಸ್, ಬೀದರ್
ಬೀದರ್(ನ.01): ಕನ್ನಡ ಭಾಷೆ ಪುರಾತನ ಭಾಷೆಗಳಲ್ಲಿ ಒಂದಾಗಿದ್ದು, ಅತ್ಯಂತ ಸುಂದರ ಭಾಷೆಯಾಗಿದೆ. ನಾಡಿನಲ್ಲಿರುವ ಎಲ್ಲರೂ ನಮ್ಮ ಕನ್ನಡದ ಬಗ್ಗೆ ಅಭಿಮಾನವನ್ನು ಬೆಳೆಸಿಕೊಳ್ಳಬೇಕು. ಈ ಭಾಷೆಯನ್ನು ಉಳಿಸಿ ಬೆಳೆಸಲು ಪ್ರಯತ್ನಿಸಬೇಕಿದೆ ಎಂದು ಮಾಜಿ ಸಚಿವ, ಶಾಸಕ ಪ್ರಭು ಚವ್ಹಾಣ್ ತಿಳಿಸಿದರು.
ಔರಾದ್ ಪಟ್ಟಣದ ಮಿನಿ ವಿಧಾನಸೌಧದಲ್ಲಿ ನಡೆದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಭಾಗಿಯಾದ ಚವ್ಹಾಣ್ ಭಾಷಣದ ವೇಳೆ ಮಾತನಾಡುತ್ತಾ ಬೇರೆ ಭಾಷೆಗಳನ್ನು ಗೌರವಿಸುವುದು ತಪ್ಪಲ್ಲ. ಆದರೆ ಕನ್ನಡವನ್ನು ಮಾತನಾಡಬೇಕು. ನಿತ್ಯಜೀವನದಲ್ಲಿ ಕನ್ನಡ ಭಾಷೆಯನ್ನು ಹೆಚ್ಚಾಗಿ ಬಳಕೆ ಮಾಡಬೇಕು. ಎಲ್ಲ ಸರ್ಕಾರಿ ಮತ್ತು ಖಾಸಗಿ ಕಛೇರಿಗಳು, ಅಂಗಡಿಗಳು, ಸಂಘ ಸಂಸ್ಥೆಗಳ ನಾಮಫಲಕಗಳಲ್ಲಿ ಕನ್ನಡ ಭಾಷೆ ಕಾಣುವಂತಾಗಬೇಕು. ನಾಡಿನೆಲ್ಲೆಡೆಯೂ ಕನ್ನಡಮಯ ವಾತಾವರಣ ನಿರ್ಮಿಸಲು ನಾವೆಲ್ಲರೂ ಮುಂದಾಗಬೇಕು ಎಂದರು.
ನಮ್ಮಲ್ಲಿ ಯಾವುದೇ ಬಣ ಇಲ್ಲ, ಕಾಂಗ್ರೆಸ್ ಬಣ ಅಷ್ಟೇ: ಜಮೀರ್‌ಗೆ ಭೋಸರಾಜ್ ತಿರುಗೇಟು
ನಾಡನ್ನು ಕಟ್ಟಿ ಬೆಳೆಸುವಲ್ಲಿ ಅನೇಕ ಹೋರಾಟಗಾರರ ತ್ಯಾಗ ಪರಿಶ್ರಮ ಅಡಗಿದೆ. ಅಂತಹ ಮಹನೀಯರ ಬಗ್ಗೆ ಮುಂದಿನ ಪೀಳಿಗೆಗೆ ತಿಳಿಸಬೇಕಿದೆ. ಶಾಲೆಯಲ್ಲಿ ಮಕ್ಕಳಿಗೆ ನಾಡಿನ ಕಲೆ ಮತ್ತು ಸಂಸ್ಕೃತಿಯ ಬಗ್ಗೆ ಇನ್ನಷ್ಟು ಬೋಧಿಸಬೇಕು. ಭಾಷೆಯ ಜೊತೆಗೆ ನಮ್ಮ ನೆಲ, ಜಲ, ಕಲೆ, ಸಂಸ್ಕೃತಿ ಮತ್ತು ಪರಂಪರೆಯನ್ನು ಸಂರಕ್ಷಿಸುವ ಹೊಣೆಗಾರಿಕೆಯೂ ಎಲ್ಲರ ಮೇಲಿದೆ ಎಂದು ಹೇಳಿದರು.
ಕನ್ನಡ ಭಾಷೆಯ ಬಗ್ಗೆ ಅಪಾರ ಗೌರವ ಹೊಂದಿರುವ ನಾನು ಸದಾ ಕನ್ನಡಪರ ಕೆಲಸಗಳನ್ನು ಮಾಡುತ್ತಾ ಬಂದಿದ್ದೇನೆ. ಔರಾದ್‌ನಲ್ಲಿ ಹಿಂದೆಯೇ ಕನ್ನಡ ಭವನ ನಿರ್ಮಿಸಲಾಗಿದೆ. ಹಿಂದೆ ಸಚಿವನಾಗಿದ್ದಾಗ ಬೀದರ್‌ನಲ್ಲಿ ಜಿಲ್ಲಾ ಕನ್ನಡ ಭವನ ಮಂಜೂರು ಮಾಡಿಸಿ ಅನುದಾನ ಬಿಡುಗಡೆ ಮಾಡಿಸಿದ್ದೇನೆ. ಕನ್ನಡದ ಸೇವೆ ಸಲ್ಲಿಸುತ್ತಿರುವ ಸಾಹಿತಿ, ಕಲಾವಿದರನ್ನು ಗೌರವಿಸುವುದು ಒಳಗೊಂಡು ಕನ್ನಡಪರ ಕೆಲಸಗಳು ನಿರಂತರವಾಗಿ ನಡೆಯಲಿವೆ ಎಂದು ಚವ್ಹಾಣ್ ಹೇಳಿದರು.