ಇಲ್ಲಿನ ಸಂಸದೆ ಎಲ್ಲಿ? ಶಾಸಕರು ಎಲ್ಲಿ ಹೀಗೆಂದು ಮಾಜಿ ಸಚಿವೆಯೋರ್ವರು ಪ್ರವಾಹ ಪೀಡಿತ ಪ್ರದೇಶದಲ್ಲಿ ಕ್ಲಾಸ್ ತೆಗೆದುಕೊಂಡರು. ನೊಂದವರ ಬೆನ್ನಿಗೆ ನಿಂತು ಮೊದಲು ಸಾಂತ್ವನ ಹೇಳಲಿ ಎಂದರು. 

ಚಿಕ್ಕಮಗಳೂರು [ಆ.19]: ನರೇಂದ್ರ ಮೋದಿ ಮುಖ ನೋಡಿ ವೋಟ್‌ ಕೊಡಿ ಎಂದು ಹೇಳಿ ಗೆದ್ದುಹೋದ ಸಂಸದೆ ಶೋಭಾ ಕರಂದ್ಲಾಜೆ ಈಗ ಎಲ್ಲಿಗೆ ಹೋದ್ರು? ಮೂಡಿಗೆರೆ ಕ್ಷೇತ್ರದ ಶಾಸಕ ಎಂ.ಪಿ. ಕುಮಾರಸ್ವಾಮಿ ಎಲ್ಲಿಗೆ ಹೋಗಿದ್ದಾರೆ ಎಂದು ಮಾಜಿ ಸಚಿವೆ ಮೋಟಮ್ಮ ಪ್ರಶ್ನೆ ಮಾಡಿದ್ದಾರೆ.

ಅತಿವೃಷ್ಟಿಪೀಡಿತ ಆಲೇಖಾನ್‌ ಹೊರಟ್ಟಿಗ್ರಾಮದ ರಸ್ತೆ, ಚಾರ್ಮಾಡಿ ಘಾಟ್‌ ರಸ್ತೆಯನ್ನು ಭಾನುವಾರ ಪರಿಶೀಲಿಸಿದ ಸಂದರ್ಭದಲ್ಲಿ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು.

ಜಿಲ್ಲೆಯ ಮಲೆನಾಡಿನಲ್ಲಿ ವಿಪತ್ತು ಆಗಿದೆ. ಈ ಸಂದರ್ಭದಲ್ಲಿ ಕುಗ್ರಾಮಗಳಿಗೆ ಭೇಟಿ ನೀಡಿ ತಮ್ಮ ಅನುದಾನವನ್ನು ನೀಡಬೇಕಾದ ಅವಶ್ಯಕತೆ ಇದೆ. ಈ ಕ್ಷೇತ್ರದ ಎಂಎಲ್‌ಎ ಅಲೇಖಾನ್‌ ಹೊರಟ್ಟಿಗ್ರಾಮದ ಕಡೆ ತಿರುಗಿ ನೋಡಿಲ್ಲ. ಮೋದಿ ಮುಖ ತೋರಿಸಿ ವೋಟ್‌ ಪಡೆದಿರುವವರು ಜನರಿಗೆ ಸಮಾಧಾನ ಹೇಳಲು ಬರಬೇಕು. ರಾಜ್ಯದಲ್ಲಿ ಸಿಎಂ ಯಡಿಯೂರಪ್ಪ ಒಬ್ಬರು ಮಾತ್ರ ಇದ್ದಾರೆ. ಸಚಿವರು ಇಲ್ಲಾ, ಇಂತಹ ಸಂದರ್ಭದಲ್ಲಿ ಕೇಂದ್ರದ ಸಚಿವರು ಈ ಜಿಲ್ಲೆಗೆ ಭೇಟಿ ನೀಡಬೇಕಾಗಿತ್ತು ಎಂದರು.

ಶೋಭಾ ಕರಂದ್ಲಾಜೆ ಪ್ರಭಾವಿ ವ್ಯಕ್ತಿ ಎಂದು ಹೇಳುತ್ತಾರೆ. ಅವರ ಸುಳಿವು ಈ ಗ್ರಾಮಕ್ಕಿಲ್ಲ, ಯಾರೋ ಎಂ.ಪಿ.ಯವರಿಗೆ ಪೋನ್‌ ಮಾಡಿದಾಗ ಮದುಗುಂಡಿ ಗ್ರಾಮ ಎಲ್ಲಿದೆ ಎಂದು ಕೇಳಿದರಂತೆ, ಶೋಭಾಯವರೇ ದಯವಿಟ್ಟು ಈ ಭಾಗಕ್ಕೆ ಬಗ್ಗೆ ನೊಂದ ಜನರನ್ನು ಸಂತಾಯಿಸಿ, ಮನೆ, ಜಮೀನು ಕಳೆದುಕೊಂಡಿರುವ ಜನರಲ್ಲಿ ವಿಶ್ವಾಸ ತುಂಬಿ ಎಂದು ಹೇಳಿದರು.

ಕುಂದೂರು ಮತ್ತು ತತ್ಕೋಳ ಮೀಸಲು ಅರಣ್ಯದ ಜನರನ್ನು ಸುಪ್ರೀಂಕೋರ್ಟ್‌ ಆದೇಶದ ಮೇರೆಗೆ 20 ದಿನಗಳೊಳಗೆ ಸ್ಥಳಾಂತರ ಮಾಡಲಾಗಿತ್ತು. ತಲಾ 1 ಕುಟುಂಬಕ್ಕೆ 2 ಎಕರೆ ಜಮೀನು ನೀಡಲಾಯಿತು ಎಂದ ಮೋಟಮ್ಮ, ಈ ಭಾಗದ ಜನರ ಪುನರ್ವಸತಿಗೆ ವಿಶೇಷ ಪ್ಯಾಕೇಜ್‌ ನೀಡಬೇಕು. ಚಿಕ್ಕಮಗಳೂರು ಸೇರಿದಂತೆ ರಾಜ್ಯದ ಹಲವೆಡೆ ನೆರೆ ಬಂದು ಜನರು ಆಸ್ತಿ, ಮನೆಗಳನ್ನು ಕಳೆದುಕೊಂಡಿದ್ದಾರೆ. ಅವರ ನೆರವಿಗೆ ಕೇಂದ್ರ ಮತ್ತು ರಾಜ್ಯ ಸರ್ಕಾರ ಬರಬೇಕು. ಕರ್ನಾಟಕವನ್ನು ರಾಷ್ಟ್ರೀಯ ವಿಪತ್ತು ರಾಜ್ಯವೆಂದು ಘೋಷಿಸಬೇಕು ಎಂದು ಆಗ್ರಹಿಸಿದರು.

ಜನಪ್ರತಿನಿಧಿಗಳಿಗೆ ತಾಳ್ಮೆ ಇರಬೇಕು. ಬಾಯಿಗೆ ಬಂದಂತೆ ಕೆಟ್ಟಭಾಷೆಯಲ್ಲಿ ಮಾತನಾಡುವುದು ಸರಿಯಲ್ಲ, ಶಾಸಕ ಎಂ.ಪಿ. ಕುಮಾರಸ್ವಾಮಿಯವರು ನನಗಿಂತ ಕಿರಿಯರು ಅವರು ತಾಳ್ಮೆ ಮತ್ತು ಸಹನೆಯನ್ನು ರೂಢಿಸಿಕೊಳ್ಳಬೇಕು ಎಂದು ಹೇಳಿದರು.

ಈ ಸಂದರ್ಭದಲ್ಲಿ ಕರ್ನಾಟಕ ಬೆಳೆಗಾರರ ಸಂಘದ ಮಾಜಿ ಅಧ್ಯಕ್ಷ ಜಯರಾಂ ಹಾಜರಿದ್ದರು.