ವಿಜಯಪುರ(ಜ.26): ಕೆಪಿಸಿಸಿ ಅಧ್ಯಕ್ಷ ಸ್ಥಾನ ಹೈಕಮಾಂಡ್ ಅಂಗಳದಲ್ಲಿದೆ. ಹೈಕಮಾಂಡ್ ಅಳೆದು ತೂಗಿ ಒಂದು ತೀರ್ಮಾನ ತೆಗೆದುಕೊಳ್ಳುತ್ತೆ ಎಂಬ ವಿಶ್ವಾಸವಿದೆ. ನಾನು ಕೆಪಿಸಿಸಿ ಅಧ್ಯಕ್ಷ ಗಾದಿಗಾಗಿ ಲಾಬಿ ಮಾಡಿಲ್ಲ. ಮಧುಸೂಧನ ಮಿಸ್ತ್ರಿ ಬಂದಾಗಲು  ಪಕ್ಷ ಅಧಿಕಾರಕ್ಕೆ ಬರಲು ಏನು ಮಾಡಬೇಕು ಅನ್ನುವುದನ್ನ ಹೇಳಿದ್ದೇನೆ ಎಂದು ಮಾಜಿ ಸಚಿವ ಎಂ. ಬಿ. ಪಾಟೀಲ ಹೇಳಿದ್ದಾರೆ. 

"

ಭಾನುವಾರ ನಗರದಲ್ಲಿ ಮಾಧ್ಯಮವರ ಜೊತೆ ಮಾತನಾಡಿದ ಅವರು, ಸೋನಿಯಾ ಗಾಂಧಿ ಅವರನ್ನ ಭೇಟಿ ಮಾಡಿದಾಗಲು ನಾನು ನನ್ನ ಸಲುವಾಗಿ ಏನು ಪ್ರತಿಪಾದನೆ ಮಾಡಿಲ್ಲ, ಪಕ್ಷ ಅಧಿಕಾರಕ್ಕೆ ಬರಲು ಏನು ಮಾಡಬೇಕು ಅನ್ನುವುದನ್ನ ಮಾತ್ರ ಹೇಳಿದ್ದೇನೆ ಎಂದು ತಿಳಿಸಿದ್ದಾರೆ.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ 

ಪಕ್ಷದ ಲೆಕ್ಕಚಾರದಲ್ಲಿ ನನ್ನನ್ನು ಪರಿಗಣಿಸಿದ್ದಾರೆ. ನನಗೆ ಕೆಪಿಸಿಸಿ ಅಧ್ಯಕ್ಷ ಸ್ಥಾನ ನೀಡುವಂತೆಯೂ ಕೇಳಿಲ್ಲ. ಪಕ್ಷ ನನಗೆ ಜವಾಬ್ದಾರಿ ಕೊಟ್ಟರೂ ನಿಭಾಯಿಸುವ ಶಕ್ತಿ ನನ್ನ ಬಳಿ ಇದೆ ಎಂದಿದ್ದಾರೆ. ಉತ್ತರ ಕರ್ನಾಟಕಕ್ಕೆ ಕೆಪಿಸಿಸಿ ಸ್ಥಾನ ವಿಚಾರದ ಬಗ್ಗೆ ಮಾತನಾಡಿದ ಅವರು, ವಿರೋಧ ಪಕ್ಷದ ನಾಯಕ ದಕ್ಷಿಣದವರು ಹೀಗಾಗಿ ಕೆಪಿಸಿಸಿ ಸ್ಥಾನ ಉತ್ತರ ಕರ್ನಾಟಕಕ್ಕೆ ಕೊಡಬೇಕು ಎಂಬ ಬೇಡಿಕೆ ಇದೆ. ಉತ್ತರ ಕರ್ನಾಟಕದಲ್ಲಿ ಯಾವ ಜಾತಿಗೆ ಕೊಡಬೇಕು ಅನ್ನೋದು ಪಕ್ಷದ ಹೈಕಮಾಂಡ್‌ಗೆ ಬಿಟ್ಟ ವಿಚಾರವಾಗಿದೆ ಎಂದು ತಿಳಿಸಿದ್ದಾರೆ.

ಹೈಕಮಾಂಡ್ ಎದುರು ಮಾಜಿ ಸಿಎಂ ಸಿದ್ದರಾಮಯ್ಯ ಅವರಿಂದ ಎಂ ಬಿ ಪಾಟೀಲ್ ಹೆಸರು ಪ್ರಸ್ತಾಪ ವಿಚಾರದ ಬಗ್ಗೆ ಪ್ರತಿಕ್ರಿಯೆ ನೀಡಿದ ಅವರು, ಸಿದ್ದರಾಮಯ್ಯರಿಗೆ ನನ್ನ ಹೆಸರು ಹೇಳಿ ಅಂತಾ ಹೇಳಿಲ್ಲ, ಹೈಕಮಾಂಡ್ ಎದುರು ನನ್ನ ಪರ ಲಾಬಿ ಮಾಡುವಂತೆಯೂ ಹೇಳಿಲ್ಲ, ಕೆಲ ಲೆಕ್ಕಾಚಾರದ ಪ್ರಕಾರ ಉತ್ತರಕ್ಕೆ ಕೆಪಿಸಿಸಿ ಅಧ್ಯಕ್ಷ ಸ್ಥಾನ ಕೊಡಬೇಕು ಅಂತಾ ಬಂದಾಗ ಸಿದ್ದರಾಮಯ್ಯ ನನ್ನ ಹೆಸರು ಪ್ರಸ್ತಾಪ ಮಾಡಿರಬೇಕು ಅಷ್ಟೇ ಎಂದು ಹೇಳಿದ್ದಾರೆ. 

ಜಾತಿ ಆಧಾರದ ಮೇಲೆ ಕಾರ್ಯಾಧ್ಯಕ್ಷ ಹುದ್ದೆ ನಿರ್ಮಾಣ ವಿಚಾರದ ಬಗ್ಗೆ ಮಾತನಾಡಿದ ಅವರು, ಇದೆಲ್ಲ ಕೇವಲ ಮಾಧ್ಯಮಗಳ ಸೃಷ್ಟಿಯಾಗಿದೆ. ಸಿದ್ದರಾಮಯ್ಯ ಕಾರ್ಯಾಧ್ಯಕ್ಷರು ಇರಬೇಕು ಎಂದಿದ್ದಾರೆ. ಆದ್ರೆ ನಾಲ್ಕು, ಎರಡು, ಮೂರು ಅನ್ನೋದೆಲ್ಲ ಮಾಧ್ಯಮಗಳ ಸೃಷ್ಟಿಯಾಗಿದೆ. ನಾಲ್ಕು, ಮೂರು ಆಗಬೇಕು ಅಂತಾ ಎಲ್ಲಿಯೂ ಹೇಳಿಲ್ಲ ಎಂದು ಹೇಳಿದ್ದಾರೆ. 

ಮಂಗಳೂರು ಏರ್ಪೋರ್ಟ್‌ನಲ್ಲಿ ಬಾಂಬ್ ಇಟ್ಟ ವಿಚಾರದ ಸಂಬಂಧ ಗೃಹ ಸಚಿವ ಬೊಮ್ಮಾಯಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ ಪಾಟೀಲ ಅವರು, ಬಾಂಬ್ ಇಟ್ಟವ ಹಿಂದೂ ಎಂದಾಕ್ಷಣ ಗೃಹ ಸಚಿವರು ಮಾನಸಿಕ ಅಸ್ವಸ್ಥ ಎನ್ನುತ್ತಿದ್ದಾರೆ. ಅದೇ ಅಲ್ಪ ಸಂಖ್ಯಾತ ಆಗಿದ್ರೆ ಇದೆ ರೀತಿಯ ಸಹಾನುಭೂತಿಯ ಉತ್ತರ ಬರುತ್ತಿತ್ತಾ? ಅದೇ ಮುಸ್ಲಿಂ ಸಿಕ್ಕಿದ್ದರೇ ಹೀಗೆ ಮಾತನಾಡುತ್ತಿದ್ದರಾ ಎಂದು ಪ್ರಶ್ನೆ ಮಾಡಿದ್ದಾರೆ.  

ವಿರೋಧ ಪಕ್ಷ ಸ್ಥಾನಕ್ಕೆ ಸಿದ್ದರಾಮಯ್ಯನವರು ಸಮರ್ಥರಿದ್ದಾರೆ. ಅವರಲ್ಲಿ ಆ ಸ್ಥಾನಕ್ಕೆ ಗತ್ತು ಇದೆ. ಬಹುತೇಕ ಕಾಂಗ್ರೆಸ್ ನಾಯಕರು ಸಿದ್ದರಾಮಯ್ಯ ಪರವಾಗಿದ್ದಾರೆ. ಸರ್ಕಾರವನ್ನ ತರಾಟೆ ತೆಗೆದುಕೊಳ್ಳಲು ಸಮರ್ಥರಿದ್ದಾರೆ. ಆರ್ಥಿಕತೆ ವಿಚಾರದಲ್ಲಿ ಸರ್ಕಾರ ಗಂಭೀರ ಸ್ಥಿತಿಯಲ್ಲಿದೆ. ಇದನ್ನ ಬಯಲು ಮಾಡಲು ಸಿದ್ದರಾಮಯ್ಯ ಸಮರ್ಥರಿದ್ದಾರೆ ಎಂದು ಹೇಳಿದ್ದಾರೆ.

ಸರ್ಕಾರ ಉರುಳಲಿದೆ ಎಂದು ಸಿದ್ದರಾಮಯ್ಯ ಹೇಳಿಕೆ ವಿಚಾರದ ಬಗ್ಗೆ ಮಾತನಾಡಿದ ಅವರು, ನಾವಾಗೆ ಸರ್ಕಾರ ಕೆಡುವುದಿಲ್ಲ, ಸರ್ಕಾರ ಅಸ್ಥಿರಗೊಳಿಸಲು ಹೋಗಲ್ಲ, ತಾನಾಗೆ ಬಿದ್ರೆ ಗೊತ್ತಿಲ್ಲ ಎಂದಿದ್ದಾರೆ.