ವಿಜಯಪುರ(ಏ.13): ಬೇಸಿಗೆಯಲ್ಲಿ ಕುಡಿಯುವ ನೀರಿಗೆ ತೊಂದರೆಯಾಗದಂತೆ ವಿಜಯಪುರ ಜಿಲ್ಲೆಯ ಎಲ್ಲ ಕಾಲುವೆಗಳಿಗೆ ನೀರು ಹರಿಸಬೇಕು ಎಂದು ಮಾಜಿ ಸಚಿವ, ಬಬಲೇಶ್ವರ ಶಾಸಕ ಎಂ.ಬಿ.ಪಾಟೀಲ ಪ್ರಾದೇಶಿಕ ಆಯುಕ್ತ ಅಮ್ಲಾನ್‌ ಆದಿತ್ಯ ಬಿಸ್ವಾಸ್‌ ಅವರಿಗೆ ದೂರವಾಣಿ ಮೂಲಕ ಮನವಿ ಮಾಡಿದ್ದಾರೆ. 

ಶಾಸಕ ಪಾಟೀಲರ ಮನವಿಯನ್ನು ಪುರಸ್ಕರಿಸಿದ ಪ್ರಾದೇಶಿಕ ಆಯುಕ್ತರು ಸೋಮವಾರ ಬೆಳಿಗ್ಗೆ ಆಲಮಟ್ಟಿ ವಲಯ ಮುಖ್ಯ ಅಭಿಯಂತರರಿಗೆ ಕರೆ ಮಾಡಿ ಮಾಹಿತಿ ಪಡೆದು, ಕ್ರಮ ಜರುಗಿಸುವುದಾಗಿ ತಿಳಿಸಿದ್ದಾರೆ.

ಲಾಕ್‌ಡೌನ್‌ ಎಫೆಕ್ಟ್‌: ತುತ್ತು ಅನ್ನಕ್ಕೆ ಗೋವಾ ಕನ್ನಡಿಗರ ಪರದಾಟ, ಎಂ.ಬಿ ಪಾಟೀಲ್‌ ನೆರವು

ಈ ಕುರಿತು ಪ್ರಕಟಣೆ ನೀಡಿರುವ ಎಂ.ಬಿ. ಪಾಟೀಲ ಅವರು, ಮುಳವಾಡ ಏತನೀರಾವರಿ ಯೋಜನೆ, ವಿಜಯಪುರ ಮುಖ್ಯ ಕಾಲುವೆಗೆ ಅಡಚಣೆಯಾಗಿದ್ದ ಕೂಡಗಿ ಹತ್ತಿರದ ರೈಲ್ವೆ ಕ್ರಾಸಿಂಗ್‌ ಕಾಮಗಾರಿ ಎರಡು ದಿನಗಳಲ್ಲಿ ಮುಕ್ತಾಯಗೊಳ್ಳಲಿದ್ದು, ನೀರು ಹರಿಸಲು ಯಾವುದೇ ಅಡಚಣೆ ಆಗುವುದಿಲ್ಲ. ಆರಂಭದ 15 ದಿನಗಳಲ್ಲಿ ವಿಜಯಪುರ ಮುಖ್ಯಕಾಲುವೆಯಿಂದ ಹೂವಿನಹಿಪ್ಪರಗಿ, ಬಸವನಬಾಗೇವಾಡಿ ಮತ್ತು ತಿಡಗುಂದಿ ಶಾಖಾ ಕಾಲುವೆಗಳಿಗೆ ಅಲ್ಲದೇ ಮಲಘಾಣ ಪಶ್ಚಿಮ ಕಾಲುವೆ ಮತ್ತು ಬಬಲೇಶ್ವರ ಶಾಖಾ ಕಾಲುವೆಗೆ ನೀರು ಹರಿಸುವಂತೆ ಕೋರಿದ್ದು, ನಂತರದಲ್ಲಿ ಉಳಿದ ಭಾಗದ ಕಾಲುವೆಗಳಿಗೆ ಹಂತ-ಹಂತವಾಗಿ ನೀರು ಹರಿಸಲು ವಿನಂತಿಸಲಾಗಿದೆ ಎಂದರು.

ವಿಜಯಪುರ ನಗರ ಹೊರವಲಯದ ಭೂತನಾಳ ಕೆರೆಯಲ್ಲಿ 3 ಅಡಿ ನೀರು ಕಡಿಮೆಯಾಗಿದ್ದು, ಇದೇ ಪ್ರಥಮ ಬಾರಿಗೆ ತಿಡಗುಂದಿ ಅಕ್ವಾಡಕ್ಟ್ ಮೇಲೆ ನೀರು ಹರಿಸಿ ಭೂತನಾಳ ಕೆರೆಯನ್ನು ಸಹ ತುಂಬಿಸುವಂತೆ ಯೋಜಿಸಲಾಗಿದೆ. ಈ ಕುರಿತು ನಿರಂತರವಾಗಿ ಜಿಲ್ಲಾಡಳಿತದೊಂದಿಗೆ ಹಾಗೂ ಜಲಸಂಪನ್ಮೂಲ ಅಧಿಕಾರಿಗಳೊಂದಿಗೆ ನಾನು ಸಂಪರ್ಕದಲ್ಲಿದ್ದೇನೆ. ಕೊರೋನಾ ಹಿನ್ನಲೆಯಲ್ಲಿ ಲಾಕ್‌ಡೌನ್‌ ಆಗಿದ್ದು, ಜನರಿಗೆ ಕುಡಿಯುವ ನೀರಿನ ತೊಂದರೆಯಾಗಬಾರದು ಮತ್ತು ದೇವರಹಿಪ್ಪರಗಿ ನಂತರದ ಟೆಲ್‌ ಎಂಡ್‌ ಪ್ರದೇಶಗಳಿಗೆ ನೀರು ಹರಿಸುವದು ಮುಂದೂಡಿದರೆ ಜನರಿಗೆ ತೊಂದರೆಯಾಗುತ್ತದೆ. ಆದ್ದರಿಂದ ಕೂಡಲೇ ನೀರು ಹರಿಸಬೇಕು ಎಂದು ಪ್ರಾದೇಶಿಕ ಆಯುಕ್ತರಿಗೆ ತಿಳಿಸಿದಾಗ ಅವರು, ಸೋಮವಾರ ಬೆಳಗ್ಗೆ ಆಲಮಟ್ಟಿ ವಲಯ ಮುಖ್ಯ ಅಭಿಯಂತರರಿಂದ ಮಾಹಿತಿ ಪಡೆದು ಸೂಕ್ತ ಕ್ರಮ ಕೈಗೊಳ್ಳುವುದಾಗಿ ಶಾಸಕ ಎಂ.ಬಿ.ಪಾಟೀಲ ತಿಳಿಸಿದ್ದಾರೆ.