ವಿಜಯಪುರ(ಅ. 2): ಸಚಿವ ಕೆ.ಎಸ್‌. ಈಶ್ವರಪ್ಪ ಹಾಗೂ ಸಂಸದ ತೇಜಸ್ವಿ ಸೂರ್ಯ ಅವರನ್ನು ಪ್ರವಾಹದ ಸಂದರ್ಭದಲ್ಲಿ ನಡುಗಡ್ಡೆ ಪ್ರದೇಶದಲ್ಲಿ ಬಿಡಬೇಕು. ಆಗ ಅವರಿಗೆ ಸಂತ್ರಸ್ತರ ನೋವು ಅರಿವಾಗುತ್ತದೆ ಎಂದು ಮಾಜಿ ಸಚಿವ ಡಾ.ಎಂ.ಬಿ. ಪಾಟೀಲ ಆಕ್ರೋಶ ವ್ಯಕ್ತಪಡಿಸಿದ್ದಾರೆ. 

ಸುದ್ದಿಗಾರರ ಜತೆ ಮಾತನಾಡಿದ ಅವರು, ಬಿಜೆಪಿ ಸರ್ಕಾರ ಪ್ರವಾಹ ಸಂತ್ರಸ್ತರ ಸಂಕಷ್ಟವನ್ನು ಗಂಭೀರವಾಗಿ ಪರಿಗಣಿಸಿಯೇ ಇಲ್ಲ. ಸರ್ಕಾರಕ್ಕೆ ಪ್ರವಾಹ ಸಂತ್ರಸ್ತರ ಶಾಪ ತಟ್ಟಲಿದೆ ಎಂದರು. ಜನರ ಸಮಸ್ಯೆಗಳಿಗೆ ಸ್ಪಂದಿಸಲು ಆಗದಿದ್ದರೆ ಯಡಿಯೂರಪ್ಪ ಮುಖ್ಯಮಂತ್ರಿ ಸ್ಥಾನದಲ್ಲಿದ್ದು ಏನು ಪ್ರಯೋಜನ? ಸಿಎಂ ಸ್ಥಾನದಲ್ಲಿ ನಾನಿದ್ದರೆ ಇಷ್ಟೊತ್ತಿಗೆ ರಾಜೀನಾಮೆ ಬಿಸಾಕುತ್ತಿದ್ದೆ ಎಂದು ವಾಗ್ದಾಳಿ ನಡೆಸಿದರು.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ  

ಸಂತ್ರಸ್ತರಿಗೆ ತಾತ್ಕಾಲಿಕ ಶೆಡ್‌ ನಿರ್ಮಿಸಲು ಸಾಧ್ಯವಾಗದ ಬಿಜೆಪಿಯವರಿಗೆ ಶಾಶ್ವತ ಸೂರು ಒದಗಿಸಲು ಹೇಗೆ ಸಾಧ್ಯ?. ಅಧಿಕಾರ ಹೋಗುವ ಹೆದರಿಕೆಯಿಂದ ಸಚಿವ ಸಂಪುಟದಲ್ಲಿ ಇರುವವರು ನೆರೆ ಸಂತ್ರಸ್ತರ ಪರ ದನಿ ಎತ್ತುತ್ತಿಲ್ಲ ಎಂದು ಹೇಳಿದ್ದಾರೆ. 

ಧೈರ್ಯವಿಲ್ಲ:

ಪ್ರವಾಹ ಸಂತ್ರಸ್ತರಿಗೆ ಪರಿಹಾರ ನೀಡಲು ಬಿಜೆಪಿ ಸರ್ಕಾರದ ಬಳಿ ಹಣವಿಲ್ಲ. 2 ಇಲ್ಲವೆ 3 ಸಾವಿರ ರುಪಾಯಿ ಪರಿಹಾರ ನೀಡಿ ಕೈ ತೊಳೆದುಕೊಳ್ಳುತ್ತಿದ್ದಾರೆ. ಪ್ರಧಾನಿ ಮೋದಿ ಬಳಿ ತೆರಳಿ ಪರಿಹಾರ ಕೇಳುವ ಧೈರ್ಯ ಸಿಎಂ ಯಡಿಯೂರಪ್ಪ ಅವರಿಗೆ ಇಲ್ಲ. ಉತ್ತರ ಕರ್ನಾಟಕ ಬಲ ನೀಡಿದೆ ಎಂದು ಮುಖ್ಯಮಂತ್ರಿ ಹೇಳುತ್ತಾರೆ. ಆದರೆ ಪ್ರವಾಹ ಸಂತ್ರಸ್ತರಿಗೆ ಅವರು ಸ್ಪಂದಿಸುತ್ತಿಲ್ಲ ಎಂದು ದೂರಿದರು.