ಹೊಸನಗರ(ಏ.23): ಕೊರೋನಾ ನಿ​ಧಿ ಹೆಸರಿನಲ್ಲಿ ಬಿಜೆಪಿ ಕಾರ್ಯಕರ್ತರು, ಮುಖಂಡರು ಅಕ್ರಮವಾಗಿ ದೇಣಿಗೆ ಸಂಗ್ರಹಿಸುತ್ತಿರುವುದು ತರವಲ್ಲ ಎಂದು ಶಾಸಕ ಕಿಮ್ಮನೆ ರತ್ನಾಕರ ಹೇಳಿದ್ದಾರೆ. 

ಹೊಸನಗರದ ಕಾಂಗ್ರೆಸ್‌ ಘಟಕದಿಂದ ಆಶಾ ಕಾರ್ಯಕರ್ತೆರಿಗೆ ಆಹಾರದ ಕಿಟ್‌ ವಿತರಿಸಿ ಅವರು ಮಾತನಾಡಿದರು. ಕೊರೋನಾ ವಿರುದ್ಧ ಯುದ್ದಕ್ಕೆ ‘ಮನೆಯಲ್ಲಿಯೇ ಇರಬೇಕು’ ಎಂಬುದು ಪ್ರಧಾನಿ ಸೂಚನೆ ಇದೆ. ಆದರೆ ಪ್ರತಿ ಬಿಜೆಪಿ ಕಾರ್ಯಕರ್ತರು 40 ಜನರಿಂದ ದೇಣಿಗೆ ಸಂಗ್ರಹಿಸಿ ಕೊರೋನಾ ನಿ​ಧಿಗೆ ನೀಡಬೇಕು ಎಂಬುದು ಬಿಜೆಪಿ ಆದೇಶ. ಎರಡು ವಿರುದ್ಧ ಹೇಳಿಕೆಗಳು ಸಾರ್ವಜನಿಕರನ್ನು ಗೊಂದಲಕ್ಕೀಡು ಮಾಡಿದೆ ಎಂದರು.

ಬಿಜೆಪಿ ಕಾರ್ಯಕರ್ತರು, ಮುಖಂಡರು ತಮ್ಮ ನಾಯಕರ ಜತೆ ಯಾವುದೇ ಮಾಸ್ಕ್‌, ಸಾಮಾಜಿಕ ಅಂತರ, ಅಡೆತಡೆ ಇಲ್ಲದೆ ಅಂಗಡಿ ಮಾಲೀಕರಿಂದ, ಅ​ಧಿಕಾರಿಗಳಿಂದ ಹಣ ಎತ್ತುವಳಿ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.

ಮಂಗನ ಕಾಯಿಲೆ ಹರಡದಂತೆ ಗಮನಿಸಲು ಜಿಲ್ಲಾಡಳಿತಕ್ಕೆ ಸೂಚಿಸಿದ ಸಚಿವ ಈಶ್ವರಪ್ಪ

ಸ್ವಂತ ಹಣದಲ್ಲಿ ದೇಣಿಗೆ:

ತಮ್ಮ ವಿಧಾನ ಸಭಾ ಕ್ಷೇತ್ರದಲ್ಲಿ ಇರುವ ಸುಮಾರು 400ಕ್ಕೂ ಹೆಚ್ಚು ಆಶಾ ಕಾರ್ಯಕರ್ತೆರಿಗೆ ತಮ್ಮ ಸ್ವಂತ ಹಣದಲ್ಲಿ ರು.1000 ದೇಣಿಗೆ ನೀಡುವುದಾಗಿ ಅವರು ಪ್ರಕಟಿಸಿದರು. ವಿಶ್ವವನ್ನು ಕಾಡುತ್ತಿರುವ ಕೊರೋನಾ ವೈರಾಣು ವಿರುದ್ದ ಹೋರಾಟಕ್ಕೆ ತಮ್ಮ ಬೆಂಬಲ ಇದೆ. ಆದರೆ ಇದು ಒಂದು ಪಕ್ಷದ ಪ್ರಚಾರಕ್ಕೆ ಸೀಮಿತ ಆಗಬಾರದು. ವಿರೋಧ ಪಕ್ಷದವರನ್ನು ಮಹತ್ವದ ಸಭೆಗೆ ಆಹ್ವಾನಿಸುವ ಪರಿಪಾಠ ಕಲಿತುಕೊಳ್ಳುವುದು ಒಳಿತು ಎಂದು ಕಿವಿಮಾತು ಹೇಳಿದರು.

ಈ ವೇಳೆಯಲ್ಲಿ ಜಿ.ಪಂ. ಸದಸ್ಯರಾದ ಕಲಗೋಡು ರತ್ನಾಕರ, ಶ್ವೇತಾ ಬಂಡಿ, ತಾ.ಪಂ. ಸದಸ್ಯರಾದ ಚಂದ್ರಮೌಳಿ, ಏರಗಿ ಉಮೇಶ, ಎಪಿಎಂಸಿ ಅಧ್ಯಕ್ಷ ಈಶ್ವರಪ್ಪ ಗೌಡ, ಸದಸ್ಯ ಬಿ.ಪಿ.ರತ್ನಾಕರ, ತಾಲೂಕು ಬಿಜೆಪಿ ಅಧ್ಯಕ್ಷ ಬಿ.ಜಿ.ನಾಗರಾಜ, ಕಾರ್ಯದರ್ಶಿ ಸದಾಶಿವ ಶ್ರೇಷ್ಠಿ, ಪ್ರಭಾಕರ್‌ ಇದ್ದರು.