ಹುಬ್ಬಳ್ಳಿ[ಡಿ.25]: ರಾಷ್ಟ್ರದಲ್ಲಿ ಆಗುತ್ತಿರುವ ಪ್ರಸ್ತುತ ಬೆಳವಣಿಗೆಗಳು ಆಘಾತ ತರುವಂತಿವೆ. ಧರ್ಮದ ಆಧಾರದಲ್ಲಿ ಸಂವಿಧಾನ ತಿದ್ದುಪಡಿ ಮಾಡಲು ಅವಕಾಶ ಇಲ್ಲ. ಬಡವರು ಮತ್ತು ಶ್ರಮಜೀವಿಗಳನ್ನು ಅವಮಾನಿಸಲಾಗುತ್ತಿದೆ.ಜವಾಬ್ದಾರಿಯುತ ಸ್ಥಾನದಲ್ಲಿರುವವರು ಪ್ರಚೋದನಕಾರಿ ಹೇಳಿಕೆ ನೀಡುವುದು ಸರಿಯಲ್ಲ ಎಂದು ಮಾಜಿ ಸಚಿವ ಹೆಚ್. ಕೆ ಪಾಟೀಲ ಹೇಳಿದ್ದಾರೆ.

ಬುಧವಾರ ನಗರದಲ್ಲಿ ಮಾಧ್ಯಮಗಳ ಜತೆ ಮಾತನಾಡಿದ ಅವರು, ನಾಗರಿಕತ್ವ ನೀಡುವುದು ರಾಷ್ಟ್ರೀಯ ವಿಚಾರವಾಗಿದೆ. ಇದನ್ನು  ಸರ್ವಸಮ್ಮತಿಯಿಂದ ತೀರ್ಮಾನವಾಗಬೇಕು .ಸರ್ವಪಕ್ಷಗಳ ಸಭೆ ಕರೆದು ಸಮಾಲೋಚನೆ ನಡೆಸಬೇಕು. ಸಮಸ್ಯೆಯನ್ನ ರಾಷ್ಟ್ರದ ಹಿತದೃಷ್ಟಿಯಿಂದ ಬಗೆಹರಿಸಬೇಕು ಎಂದು ತಿಳಿಸಿದ್ದಾರೆ. 

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ 

ಮಹಾರಾಷ್ಟ್ರ ಸಿಎಂ ಉದ್ಧವ್ ಠಾಕ್ರೆ ಗಡಿ ವಿವಾದ ಕೆದಕುತ್ತಿದ್ದಾರೆ. ಕಾನೂನು ಹೋರಾಟ ಮತ್ತು ರಾಜಕೀಯ ಮಾಡಲು ಇಬ್ಬರು ಸಚಿವರನ್ನು ನೇಮಕ ಮಾಡಿದ್ದಾರೆ. ಬೆಳಗಾವಿ, ಕಾರವಾರ ನಿಪ್ಪಾಣಿಗಳು ಕರ್ನಾಟಕ ಅಕ್ರಮಿತ ಪ್ರದೇಶಗಳು ಎನ್ನುವ ಮೂಲಕ ವಿವಾದ ಸೃಷ್ಟಿಸಿದ್ದಾರೆ. ಈ ರೀತಿ ಹೇಳಿಕೆ ನೀಡಿ ಕರ್ನಾಟಕಕ್ಕೆ ಅವಮಾನ ಮಾಡಿದ್ದಾರೆ. ಮಹಾತ್ಮಾ ಗಾಂಧೀಜಿ, ಇಂದಿರಾ ಗಾಂಧಿಯವರು ಬೆಳಗಾವಿ ಕರ್ನಾಟಕದ್ದು ಎಂದಿದ್ದರು. ‌ಗಡಿ ವಿಚಾರವನ್ನು ರಾಜಕೀಯಕ್ಕಾಗಿ ಬಳಸಿಕೊಳ್ಳುತ್ತಿರುವುದು ಸರಿಯಲ್ಲ. ಮಹಾರಾಷ್ಟ್ರ ಸಿಎಂ ಇಷ್ಟೆಲ್ಲಾ ಹೇಳಿಕೆ ನೀಡಿದ್ರೂ ನಮ್ಮ ಮುಖ್ಯಮಂತ್ರಿ ಯಡಿಯೂರಪ್ಪ ಹಾಗೂ ಸಚಿವರು ಏಕೆ ಮಾತನಾಡುತ್ತಿಲ್ಲಾ? ನಾನು‌ ಯಡಿಯೂರಪ್ಪನವರನ್ನು ಎಚ್ಚರಿಸುತ್ತೇನೆ, ಗಡಿ ವಿಚಾರದಲ್ಲಿ ಏಕೆ ಶಾಂತ ಆಗಿದ್ದೀರಿ? ಸರ್ವ ಪಕ್ಷಗಳ ಸಭೆ ಕರೆದು ಚರ್ಚಿಸಿ, ಮಹಾರಾಷ್ಟ್ರಕ್ಕೆ ತಕ್ಕ ಉತ್ತರ ನೀಡಿ ಎಂದು ಆಗ್ರಹಿಸಿದ್ದಾರೆ. 

ಕೇಂದ್ರ ಸಚಿವ ಜಾವಡೆಕರ್ ರಾಜ್ಯದ ಗೃಹ ಸಚಿವರಿಗೆ ಪತ್ರ ಬರೆದ ವಿಚಾರದ ಬಗ್ಗೆ ಪ್ರತಿಕ್ರಿಯೆ ನೀಡಿದ ಅವರು, ಮಹಾದಾಯಿ ವಿಚಾರದಲ್ಲಿ ಕೇಂದ್ರ ಸರ್ಕಾರ, ರಾಜ್ಯ‌ಕ್ಕೆ ಮೋಸ ಮಾಡುತ್ತಿದೆ. ಈ ಪತ್ರ ನೋಡಿದ ಬಿಜೆಪಿ ನಾಯಕರು ಸಂತಸಗೊಂಡಿದ್ದಾರೆ. ಆದ್ರೆ ಈ ಪತ್ರದಲ್ಲಿ ಯಾವುದೇ ಹುರುಳಿಲ್ಲ. ಕೇಂದ್ರ ಸರ್ಕಾರ ಗೆಜೆಟ್ ಅಧಿಸೂಚನೆ ಯಾಕೆ ಹೊರಡಿಸುತ್ತಿಲ್ಲ? ಕೇಂದ್ರ ಸಚಿವ ಪ್ರಕಾಶ್ ಜಾವಡೆಕರ್ ಕರ್ನಾಟಕದ ಜನರನ್ನು ಏನೆಂದು ತಿಳಿದಿದ್ದಾರೆ? ಈ ಹಿಂದೆ ಯಡಿಯೂರಪ್ಪ  ಯಾವುದೋ ಪತ್ರ ಓದಿ ಮೋಸ ಮಾಡಿದ್ರು, ಚುನಾವಣಾ ಸಂದರ್ಭದಲ್ಲಿ ಮೋದಿ ಮೂರು ರಾಜ್ಯಗಳ ಸಿಎಂಗಳ ಸಭೆ ಕರೆದು ಸಮಸ್ಯೆ ಪರಿಹರಿಸುವುದಾಗಿ ಹೇಳಿದ್ದರು. ಆದ್ರೆ ಇದುವರೆಗೆ ಪ್ರಧಾನಿ ನರೇಂದ್ರ ಮೋದಿ ಮೌನವಹಿಸಿದ್ದು ಯಾಕೆ? ಗೋವಾ ಸರ್ಕಾರಕ್ಕೆ ನೀಡಿದ ಪತ್ರವನ್ನ‌ ಮೊದಲು ವಾಪಸ್ ಪಡೆಯಲಿ. ಅದು ಬಿಟ್ಟು ಮತ್ತೊಂದು ಪತ್ರ ಬರೆದು ಕರ್ನಾಟಕಕ್ಕೆ ಯಾಕೆ ಮೋಸ ಮಾಡ್ತೀರಾ ಎಂದು ಕೇಂದ್ರಸ ವಿರುದ್ಧ ಕಿಡಿಕಾರಿದ್ದಾರೆ.

ಮಂಗಳೂರು ಗಲಭೆ ವಿಚಾರದ ಬಗ್ಗೆ ಮಾತನಾಡಿದ ಪಾಟೀಲ, ತನಿಖೆಯ ನಂತರ ಸತ್ಯಾಸತ್ಯತೆ ಹೊರಬರುತ್ತದೆ. ರಾಜ್ಯದಲ್ಲಿ ಅಶಾಂತಿಯನ್ನು ಮೂಡಿಸುವ ಕೆಲಸವನ್ನು ರಾಜ್ಯ ಸರ್ಕಾರ ಮಾಡುತ್ತಿದೆ. ಸಿಸಿಟಿವಿ ವಿಡಿಯೋಗಳನ್ನು ಬಿಡುಗಡೆ ಮಾಡಿರುವುದು ಗಲಭೆಗಳನ್ನು ಪ್ರಚೋದಿಸುವ ಸುಲುವಾಗಿ. ಕೇರಳದವರು ಬಂದಿದ್ದಾರೆಂದು ಹೇಳುತ್ತಾರೆ. ಗುಪ್ತಚರ ಮಾಹಿತಿ ಇರಲಿಲ್ಲವೆ? ಸರ್ಕಾರದ ಅಧೀನದಲ್ಲಿರುವ ಇಲಾಖೆಗಳಿಂದ ತನಿಖೆ ಮಾಡುವುದು ಬೇಡ. ಸ್ವತಂತ್ರ ನ್ಯಾಯಾಂಗ ತನಿಖೆ ಆಗಬೇಕು. ಈ ಗಲಾಟೆಯಲ್ಲಿ ನೆರೆ ಸಮಸ್ಯೆ ಕೊಚ್ಚಿ ಹೋಗಿದೆ ಎಂದು ತಿಳಿಸಿದ್ದಾರೆ.