ಗದಗ(ಜೂ.29): ರಾಜ್ಯದಲ್ಲಿ ದಿನೇ ದಿನೇ ಕೊರೋನಾ ಹೆಚ್ಚಾಗುತ್ತಿದೆ. ಕೊರೋನಾ ಚಿಕಿತ್ಸೆಗೆ ಮೈದಾನ, ಕ್ರೀಡಾಂಗಣ ಸೇರಿದಂತೆ ಬಯಲು ಪ್ರದೇಶಗಳಲ್ಲಿ ವ್ಯವಸ್ಥೆ ಮಾಡಲು ಜನರನ್ನು ಜಾನುವಾರುಗಳು ಎಂದು ತಿಳಿದಿದ್ದೀರಾ? ಎಂದು ಶಾಸಕ ಎಚ್‌.ಕೆ. ಪಾಟೀಲ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸರ್ಕಾರ ಯುದ್ಧೋಪಾದಿಯಲ್ಲಿ ಮಾಡಬೇಕಾದ ಕೆಲಸಗಳನ್ನು ಬಿಟ್ಟು ಬೇರೆಲ್ಲವನ್ನೂ ಮಾಡುತ್ತಿದೆ. ಸಾರ್ವಜನಿಕರಿಗೆ ಗುಣಮಟ್ಟದ ಸೇವೆ ಲಭ್ಯವಾಗುತ್ತಿಲ್ಲ. ಎಲ್ಲೆಡೆ ಕೋವಿಡ್‌ ಆಸ್ಪತ್ರೆಗಳು ದಿನ ಕಳೆದಂತೆ ಭರ್ತಿಯಾಗುತ್ತಿವೆ. ಹೆಚ್ಚಿನ ಬೆಡ್‌ಗಳ ವ್ಯವಸ್ಥೆ ಮಾಡಲು ಸರ್ಕಾರ ಗಂಭೀರ ಚಿಂತನೆ ಮಾಡುತ್ತಿಲ್ಲ. ಮೈದಾನ, ಕ್ರೀಡಾಂಗಣಗಳ ಬಗ್ಗೆ ಚಿಂತನೆ ಮಾಡಿರುವುದನ್ನು ಬಿಟ್ಟು ಮೊದಲು ಪಂಚತಾರಾ ಹೊಟೇಲ್‌ಗಳನ್ನು ವಶಕ್ಕೆ ಪಡೆದು ಕೋವಿಡ್‌ -19 ಕಾಳಜಿ ಕೇಂದ್ರ ಮಾಡಲಿ ಎಂದು ಆಗ್ರಹಿಸಿದರು.

ಲಕ್ಷ್ಮೇಶ್ವರ: ಗ್ರಾಮೀಣ ಭಾಗಕ್ಕೂ ಆವರಿಸಿದ ಮಹಾಮಾರಿ ಕೊರೋನಾ..!

ರೋಗಿಗಳನ್ನು ಮೈದಾನದಲ್ಲಿ ಮಲಗಿಸಿ ಚಿಕಿತ್ಸೆ ನೀಡಲು ಸಾಧ್ಯವೇ? ಇದರ ಬಗ್ಗೆ ಕನಿಷ್ಠ ಚಿಂತನೆಯಾದರೂ ಬೇಡವೇ ಎಂದು ಆಕ್ರೋಶ ವ್ಯಕ್ತಪಡಿಸಿದ ಅವರು, ಸರ್ಕಾರ ಸಾರ್ವಜನಿಕರ ಜೀವನ ಎಂದರೆ ಏನೆಂದುಕೊಂಡಿದ್ದಾರೆ? ಎಂದು ಆಕ್ರೋಶ ವ್ಯಕ್ತಪಡಿಸಿದ ಅವರು, ಅಂತ್ಯಕ್ರಿಯೆಗೆ ಜಮೀನು ಸ್ಥಳ ಹುಡುಕುತ್ತೇವೆ ಎಂದು ಹೇಳುತ್ತಿದ್ದಾರೆ. ಇವರಿಗೆ ನಾಚಿಕೆ ಬರಬೇಕು. ಶ್ರೀಮಂತರಿಗೆ ಜಮೀನು ಕೊಡಿಸಲು ಸುಗ್ರೀವಾಜ್ಞೆ ಮೂಲಕ ಕಾನೂನು ಜಾರಿಗೆ ತರುತ್ತೀರಿ, ಉಳುವವನ ಊರುಗೋಲು ಭೂಮಿ ಕಿತ್ತುಕೊಳ್ಳಲು ನಿರಂತರ ಪ್ರಯತ್ನ ಮಾಡುತ್ತಿದ್ದೀರಿ. ಆದರೆ, ಜನರ ಅಂತ್ಯಸಂಸ್ಕಾರಕ್ಕೆ ಭೂಮಿ ಹುಡುಕಲು ಹಿಂದೇಟು ಹಾಕುತ್ತಾರಾ ಎಂದು ಸರ್ಕಾರದ ವಿರುದ್ಧ ಗುಡುಗಿದ ಅವರು, ಇದನ್ನೆಲ್ಲಾ ರಾಜ್ಯದ ಜನತೆ ಗಮನಿಸುತ್ತಿದ್ದಾರೆ. ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ನಿಗದಿಪಡಿಸಿದ ದರಕ್ಕೆ ಆಕ್ಷೇಪ ವ್ಯಕ್ತವಾದ ಹಿನ್ನೆಲೆಯಲ್ಲಿ ಖಾಸಗಿ ವೈದ್ಯರ ಜತೆ ರಾಜಿಸಂಧಾನ ಮಾಡಬೇಕು. ಕೋವಿಡ್‌ -19 ತುರ್ತು ಸೇವೆಗೆ ನೇಮಕಾತಿ ಪ್ರಾರಂಭಿಸಿ ಕೇಂದ್ರಕ್ಕೆ 33 ಸಾವಿರ ವೆಂಟಿಲೇಟರ್‌ ಬೇಕು ಎಂದು ಸರ್ಕಾರ ಪತ್ರ ಬರೆದಿತ್ತು. ಎಷ್ಟುಬಂದಿವೆ ? ಬಂದಿದ್ದು ಕೇವಲ 90. ಇದರ ಮೇಲೆ ನಿಮ್ಮ ಸಾಮರ್ಥ್ಯ ಎಷ್ಟುಅಂತ ಗೊತ್ತಾಗುತ್ತದೆ ಎಂದು ವ್ಯಂಗ್ಯವಾಡಿದರು.

ಪಿಪಿಇ ಕಿಟ್‌, ಮಾಸ್ಕ್‌ ಇಲ್ಲದ್ದಕ್ಕೆ ರಾಜ್ಯದಲ್ಲಿನ ವೈದ್ಯರಿಗೆ ಸೋಂಕು ಹರಡುತ್ತಿದೆ ಎಚ್ಚರವಿರಲಿ. ಎಸ್‌ಡಿಆರ್‌ಎಫ್‌, ಎನ್‌ಡಿಆರ್‌ಎಫ್‌, ಎನ್‌ಎಚ್‌ಎಂನಿಂದ ನಯಾಪೈಸೆ ಬರದಿರುವುದು ವಿಪರ್ಯಾಸ ಎಂದರು.

ಸುದ್ದಿಗೋಷ್ಠಿಯಲ್ಲಿ ಶಹರ ಕಾಂಗ್ರೆಸ್‌ ಅಧ್ಯಕ್ಷ ಗುರಣ್ಣ ಬಳಗಾನೂರ, ಜಿಲ್ಲಾ ಯುವ ಕಾಂಗ್ರೆಸ್‌ ಅಧ್ಯಕ್ಷ ಅಶೋಕ ಮಂದಾಲಿ, ನಗರಾಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಪ್ರಭು ಬುರಬುರೆ ಮುಂತಾದವರಿದ್ದರು.