ಹುಬ್ಬಳ್ಳಿ(ನ.22): ಹಿಂದಿನ ಗುಟ್ಟು, ಇಂದಿನ ಗುಟ್ಟು, ಮುಂದಿನ ವಿಚಾರವನ್ನು ಸಮಯ ಬಂದಾಗ ಜನರ ಬಳಿ ಹೇಳಿಕೊಳ್ಳುತ್ತೇನೆ. ಬಂಧನಕ್ಕೆ ಒಳಗಾದಾಗ ಹುಬ್ಬಳ್ಳಿ, ಬೆಂಗಳೂರಿನಲ್ಲಿ ಯಾರಾರ‍ಯರು ಏನೇನು ಮಾತನಾಡಿದ್ದಾರೆ ಎಂಬುದು ಕಿವಿಗೆ ಬಿದ್ದಿದ್ದು, ಅವರಿಗೆಲ್ಲ ದಾಖಲೆ ಸಮೇತ ಉತ್ತರಿಸುತ್ತೇನೆ ಎಂದು ಮಾಜಿ ಸಚಿವ ಡಿ.ಕೆ. ಶಿವಕುಮಾರ ಅವರು ಹೇಳಿದ್ದಾರೆ.

ನಗರದಲ್ಲಿ ನಡೆದ ಕಾಂಗ್ರೆಸ್‌ ಕಾರ್ಯಕರ್ತರ ಬಹಿರಂಗ ಸಮಾವೇಶದಲ್ಲಿ ಮಾತನಾಡಿದ ಅವರು, ಸಿ.ಎಸ್‌. ಶಿವಳ್ಳಿ ನೆನೆದು ಕಣ್ಣೀರಿಟ್ಟಾಗ, ತಂದೆಯ ಶ್ರಾದ್ಧ ಮಾಡಲಾಗದ್ದಕ್ಕೆ ಅತ್ತಿದ್ದನ್ನೂ ವಿಭಿನ್ನವಾಗಿ ವಿಶ್ಲೇಷಣೆ ಮಾಡಲಾಯಿತು. ಜೈಲಿನಿಂದ ಹೊರ ಬಂದಾಗ ಕೆಲವರು ಯುದ್ಧ ಗೆದ್ದು ಬಂದಂತೆ ಸ್ವಾಗತಿಸುತ್ತಿದ್ದಾರೆ, ಇಷ್ಟೆಲ್ಲ ಸಂಭ್ರಮವೇಕೆ ಎಂದು ಪ್ರಶ್ನಿಸಿದರು. ಆದರೆ ಇವರಿಗೆಲ್ಲ ಮುಂದೆ ಉತ್ತರ ನೀಡುತ್ತೇನೆ ಎಂದರು.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ 

ಸೋನಿಯಾ ಗಾಂಧಿ ನೇತೃತ್ವದಲ್ಲಿ ಕೆಲಸ ಮಾಡುತ್ತಿದ್ದೇವೆ. ಅವರು ಪ್ರಧಾನಿ ಮಂತ್ರಿಸ್ಥಾನವನ್ನು ಎರಡು ಬಾರಿ ತ್ಯಾಗ ಮಾಡಿದ್ದಾರೆ. ರಾಷ್ಟ್ರಪತಿ ಅಬ್ದುಲ್‌ ಕಲಾಂ ಸ್ವತಃ ಪತ್ರ ಬರೆದು ಆಹ್ವಾನ ನೀಡಿದರೂ ಪ್ರಧಾನಿ ಮಂತ್ರಿ ಸ್ಥಾನಕ್ಕೆ ಹೋಗದೆ ಆರ್ಥಿಕ ತಜ್ಞರು ದೇಶದ ಪ್ರಧಾನಿಯಾಗಲಿ ಎಂದು ಸ್ಥಾನ ನೀಡಿದರು. ಇಂದಿರಾ ಗಾಂಧಿ ಅವರು ರಾಷ್ಟ್ರಕ್ಕೆ ಸಾಕಷ್ಟುಕೊಡುಗೆ ನೀಡಿದ್ದಾರೆ. ಕಾಂಗ್ರೆಸ್‌ ಈ ದೇಶಕ್ಕೆ ಏನೂ ಮಾಡಿಯೇ ಇಲ್ಲವೆ? ರಸ್ತೆ, ಕೆರೆಕಟ್ಟೆ ನಿರ್ಮಿಸಿದವರು ಯಾರು? ಈಗ ದೇಶದಲ್ಲಿ ನಿರುದ್ಯೋಗ ಸಮಸ್ಯೆಯಿದೆ. ನೆರೆ ಸಂತ್ರಸ್ತರಿಗೆ ಪರಿಹಾರ ನೀಡಿಲ್ಲ ಎಂದು ದೂರಿದರು.

ಕಾಂಗ್ರೆಸ್‌ ಕಾರ್ಯಕರ್ತರು ನಿನ್ನೆ ಮೊನ್ನೆ ಹುಟ್ಟಿದ ಪಕ್ಷದ ಜೊತೆಗಿದ್ದವರಲ್ಲ. ಕತ್ತಲಾಗುತ್ತದೆ, ಬೆಳಕು ಮತ್ತೆ ಮೂಡಲಿದೆ. ಕಾರ್ಯಕರ್ತರು ಸಾಮಾನ್ಯ ಜನರ ಜತೆ ಗುರುತಿಸಿಕೊಳ್ಳಿ. ಡಿಸಿ ಕಚೇರಿ, ಜಿಲ್ಲಾ ಪಂಚಾಯಿತಿ ಕಚೇರಿ, ಜಾತಿ ಧರ್ಮವನ್ನೆಲ್ಲ ಒಂದು ಕಡೆ ಇಡಿ, ಜನರ ಸೇವೆ ಮಾಡಿ. ಅದು ಬಿಟ್ಟು ವಿಸಿಟಿಂಗ್‌ ಕಾರ್ಡ್‌ ಇಟ್ಟುಕೊಂಡು ತಿರುಗಾಡಿದರೆ ಪ್ರಯೋಜನವಿಲ್ಲ. ಜನತೆಯ ಪ್ರೀತಿಗೆ, ಕಷ್ಟಕ್ಕೆ ಭಾಗಿಯಾಗಬೇಕು. ನಮ್ಮ ಆಸ್ತಿಯನ್ನು ಅವರಿಗೆ ಕೊಡಲು ಸಾಧ್ಯವಿಲ್ಲ. ಆದರೆ, ಅವರ ಭಾವನೆಗೆ ಸ್ಪಂದಿಸುವ ಕೆಲಸ ಆಗಬೇಕು ಎಂದು ಕಾರ್ಯಕರ್ತರಿಗೆ ಕರೆ ನೀಡಿದರು.

ವಿಪ ಸದಸ್ಯ ಶ್ರೀನಿವಾಸ ಮಾನೆ, ಬಿಜೆಪಿ ಬ್ರಿಟಿಷರ ವಿಷದ ಬೀಜವಿದ್ದಂತೆ. ಅಮಿತ್‌ ಶಾ ಪಿತೂರಿಗೆ ವಿರುದ್ಧವಾಗಿ ಡಿಕೆಶಿ ಗುಜರಾತ್‌ ಶಾಸಕರಿಗೆ ರಕ್ಷಣೆ ನೀಡಿದ್ದಕ್ಕಾಗಿ ಅವರಿಗೆ ಬಿಜೆಪಿಗರು ಒತ್ತಡ, ತೊಂದರೆ ನೀಡಿದ್ದಾರೆ. ಈ ಬಗ್ಗೆ ಜನ ಜಾಗೃತರಾಗಬೇಕಿದೆ ಎಂದರು.

ಸಮಾವೇಶದಲ್ಲಿ ಶಾಸಕರಾದ ಕುಸುಮಾವತಿ ಶಿವಳ್ಳಿ, ಪ್ರಸಾದ ಅಬ್ಬಯ್ಯ, ಪ್ರಕಾಶಗೌಡ ಪಾಟೀಲ, ಮಾಜಿ ಸಭಾಪತಿ ಈರಣ್ಣ ಮತ್ತಿಕಟ್ಟಿ, ಮಾಜಿ ಸಚಿವ ಎ.ಎಂ. ಹಿಂಡಸಗೇರಿ, ಮಹಾನಗರ ಜಿಲ್ಲಾ ಕಾಂಗ್ರೆಸ್‌ ಅಧ್ಯಕ್ಷ ಅಲ್ತಾಫ್‌ ಹಳ್ಳೂರ, ಗ್ರಾಮೀಣ ಜಿಲ್ಲಾ ಕಾಂಗ್ರೆಸ್‌ ಅಧ್ಯಕ್ಷ ಅನೀಲಕುಮಾರ ಪಾಟೀಲ್‌, ಜಿಪಂ ಅಧ್ಯಕ್ಷೆ ವಿಜಯಲಕ್ಷ್ಮೇ ಪಾಟೀಲ್‌, ನಾಗರಾಜ ಚಬ್ಬಿ, ಸತೀಷ ಮೆಹೆರವಾಡೆ, ಇಸ್ಮಾಯಿಲ್‌ ತಮಟಗಾರ, ವಿನೋದ ಅಸೂಟಿ, ಎಫ್‌.ಎಚ್‌. ಜಕ್ಕಪ್ಪನವರ, ಇಮ್ರಾನ್‌ ಯಲಿಗಾರ, ಅಲ್ತಾಫ್‌ ಕಿತ್ತೂರ ಸೇರಿ ಹಲವರಿದ್ದರು.

ಸಂಜೆ ನಗರದ ಸಿದ್ಧಾರೂಢ ಮಠ ಮತ್ತು ಸಯ್ಯದ ಫತೇಷಾವಲಿ ದರ್ಗಾಕ್ಕೆ ಡಿ.ಕೆ. ಶಿವಕುಮಾರ ಭೇಟಿ ನೀಡಿದರು.