ಬಿಜೆಪಿಯವರು ಎಲ್ಲ ಕಡೆ ತಿನ್ನುತ್ತಾರೆ| ಗ್ರಾಪಂ ಸದಸ್ಯರ ಸನ್ಮಾನ ಸಮಾರಂಭದಲ್ಲಿ ರಾಯರಡ್ಡಿ ಮಾತನಾಡಿದ ವಿಡಿಯೋ ವೈರಲ್| ಈ ಸರ್ಕಾರ ಯಾವಾಗ ಬೇಕಾದರೂ ಬೀಳಬಹುದು. ಹೀಗಾಗಿ ಎಲ್ಲರೂ ರೆಡಿಯಾಗಿರಿ, ಮತ್ತೆ ಚುನಾವಣೆ ಎದುರಿಸಲು ಸಜ್ಜಾಗಿ|
ಕೊಪ್ಪಳ(ಜ.18): ಬಿಜೆಪಿಯವರು ಲಫಂಗರು, ಢಕಾಯಿತರು. ಮನೆ ಕಟ್ಟಿಸಿದವರು ಡೈನಿಂಗ್ ಹಾಲ್‌ನಲ್ಲಿ ಊಟ ಮಾಡುತ್ತಾರೆ, ಅಬ್ಬಾಬ್ಬ ಎಂದರೆ ಬೆಡ್‌ರೂಮ್‌ನಲ್ಲಿ ಊಟ ಮಾಡುತ್ತಾರೆ. ಆದರೆ, ಬಿಜೆಪಿಯವರು ಎಲ್ಲಕಡೆ ತಿನ್ನುತ್ತಾರೆ... ಯಲಬುರ್ಗಾದಲ್ಲಿ ಗ್ರಾಮ ಪಂಚಾಯಿತಿ ಚುನಾಯಿತ ಸದಸ್ಯರ ಸನ್ಮಾನ ಸಮಾರಂಭದಲ್ಲಿ ಭಾಗವಹಿಸಿ ಮಾಜಿ ಸಚಿವ ಬಸವರಾಜ ರಾಯರಡ್ಡಿ ಮಾತನಾಡಿದ ಅವರ ವೀಡಿಯೋ ಈಗ ಸೋಶಿಯಲ್ ಮಿಡಿಯಾದಲ್ಲಿ ವೈರಲ್ ಆಗಿದೆ.
ಇಂಥ ಗಲೀಜ್ ಪಾರ್ಟಿ ನೋಡಿಲ್ಲ, ಮಂತ್ರಿಯಾಗಲಿಲ್ಲ ಎನ್ನುವ ಕಾರಣಕ್ಕೆ ಯಾವ ರೀತಿ ಮಾತನಾಡುತ್ತಿದ್ದಾರೆ. ಅವನ್ಯಾವನ್ ಮಂತ್ರಿಯಾಗಿಲ್ಲವಂತೆ ಬಾಯಿಗೆ ಬಂದಂತೆ ಮಾತನಾಡುತ್ತಾನೆ. ಇದನ್ನು ಒಪ್ಪುತ್ತೀರಾ? ಮಾನ-ಮರ್ಯಾದೆ ಇಲ್ಲ ಇವರಿಗೆ. ಎಲ್ಲರೂ ಒಂದೇ ಕಡೆ, ಎಲ್ಲರೂ ರೊಕ್ಕಾ ಕೊಟ್ಟು ಮಂತ್ರಿಯಾಗ್ಯಾರ. ಇಂಥ ಸರ್ಕಾರದಿಂದ ಏನೂ ಪ್ರಯೋಜನ ಇಲ್ಲ. ಹೀಗಾಗಿ, ಸರ್ಕಾರ ಯಾವಾಗ ಬೇಕಾದರೂ ಬೀಳಬಹುದು. ಆರೆಂಟು ತಿಂಗಳಲ್ಲಿಯೇ ಬೀಳಬಹುದು. ಎಲ್ಲವನ್ನು ಹೇಳಾಕಗಲ್ಲ, ಪರಿಸ್ಥಿತಿ ಸರಿಯಿಲ್ಲ ಎಂದರು.
ಸತ್ಯವಾದ ಮಾತು ಹೇಳುತ್ತೇನೆ. ಒಂದು ಮನೆ ಕಟ್ಟಿರುತ್ತಾರೆ ಎಂದರೆ ಒಂದು ಡೈನಿಂಗ್ ಹಾಲ್ ಕಟ್ಟಿರುತ್ತಾರೆ, ಬೆಡ್‌ರೂಮ್ ಕಟ್ಟಿರುತ್ತಾರೆ. ಸಂಡಾಸ್ ರೂಮ್ ಕಟ್ಟಿರುತ್ತಾರೆ. ತಿನ್ನುವುದನ್ನು ಡೈನಿಂಗ್ ಹಾಲ್‌ನಲ್ಲಿ ಮಾಡಬೇಕು. ಅಬ್ಬಾಬ್ಬ ಎಂದರೆ ಬೆಡ್ ರೂಮ್‌ನಲ್ಲಿ ತಿನ್ನಲಿ. ಅದು ಬಿಟ್ಟು, ಈ ಬಿಜೆಪಿಯವರು ಎಲ್ಲೆಡೆ ತಿನ್ನಾಕ್ ಶುರು ಮಾಡಿದ್ದಾರೆ. ಮನೆಯವರೆಲ್ಲಾ ರಾಜಕೀಯ ಮಾಡುತ್ತಾರೆ ಮತ್ತು ಎಲ್ಲ ಕಡೆಗೂ ತಿನ್ನುತ್ತಾರೆ ಎಂದು ಆರೋಪಿಸಿದರು.
'ಸಿಎಂ ಯಡಿಯೂರಪ್ಪ ವಚನಭ್ರಷ್ಟ ಆಗ್ತಾರೆ ಅನ್ನೋ ಅನುಮಾನ ಇದೆ'
ಈಗ ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆಗೆ ಖರೀದಿ ನಡೆದಿದೆ. 40 ಸಾವಿರ, 50 ಸಾವಿರ ಕೊಟ್ಟು ಕರ್ಕಂಡ್ ಹೋಗ್ಯಾರ ಅಂತಾರ. ನೀವು ಯಾರು ಹಂಗ್ ಮಾಡಬ್ಯಾಡ್ರಿ, ಮಾರಾಟಕ್ಕೆ ತುತ್ತಾಗಬೇಡಿ. ಹಾಗೊಂದು ವೇಳೆ ನೀವು ಮಾರಾಟ ಆಗುವುದಾದರೆ ಆಗಿ, ನನಗೇನು ಬೇಜಾರು ಇಲ್ಲ. ರೊಕ್ಕಾ ತೆಗೆದುಕೊಂಡು ಹೋಗಿ. ನನಗೇನು ವೋಟಿನಲ್ಲಿ ಲಾಸ್ ಆಗುವುದಿಲ್ಲ. ನನಗೆ ಹಾಕುವವರು ಹಾಕ್ತಾರೆ. ನಾಳೆ ಜನ ತೀರ್ಮಾನ ಮಾಡ್ತಾರೆ. ಯಾರನ್ನು ಆಯ್ಕೆ ಮಾಡಬೇಕು ಎಂದು. ನಮ್ಮನ್ನು ಬ್ಯಾಡ ಎಂದರೆ ತೆಗೆದು ಹಾಕಲಿ, ನನಗೇನೂ ಲಾಸ್ ಇಲ್ಲ. ನೀವು ಪ್ರಾಮಾಣಿಕ ಕಾರ್ಯಕರ್ತರು ಇದ್ದೀರಿ, ನೀವು ಗಟ್ಟಿಯಾಗಿ ನಿಲ್ಲಲಿ. ಕ್ಯಾಟಿಗರಿ ಮಾಡುವುದನ್ನು ಎಂಎಲ್‌ಎ ಮಾಡುವುದಿಲ್ಲ. ಅನೇಕರು ನನಗೆ ಕರೆ ಮಾಡಿದ್ದರು. ಅವರಿಗೆ ಹೇಳಿದ್ದೆ, ನಾನಾ ಎಂಎಲ್‌ಎ, ಮಂತ್ರಿ ಮಾಡಲ್ಲ ಅಂತ. ಈಗ ಏನಾಗಿದೆ? ಲಾಟರಿ ಮೂಲಕ ಕ್ಯಾಟಗಿರಿ ಆಯ್ಕೆ ಮಾಡುತ್ತಿದ್ದಾರೆ.
ಈ ಸರ್ಕಾರ ಯಾವಾಗ ಬೇಕಾದರೂ ಬೀಳಬಹುದು. ಹೀಗಾಗಿ ಎಲ್ಲರೂ ರೆಡಿಯಾಗಿರಿ, ಮತ್ತೆ ಚುನಾವಣೆಯನ್ನು ಎದುರಿಸಲು ಸಜ್ಜಾಗಿ. ಬಿಜೆಪಿಯಲ್ಲಿ ಎಲ್ಲರೂ ರಾಜಕೀಯ ಮಾಡ್ತಾರೆ. ಮನೆಯವರೆಲ್ಲರೂ ರಾಜಕೀಯದಲ್ಲಿಯೇ ಇರುತ್ತಾರೆ. ಯಲಬುರ್ಗಾ, ಕೊಪ್ಪಳದಲ್ಲಿಯೂ ಅದನ್ನೇ ಮಾಡ್ತಾರಾ ಎಂದು ಶಾಸಕ ಹಾಲಪ್ಪ ಆಚಾರ್ ಅವರ ಹೆಸರು ಹೇಳದೆ ಆರೋಪಿಸಿದರು.
Read Exclusive COVID-19 Coronavirus News updates, from Karnataka, India and World at Asianet News Kannada.
ವರ್ಚುಯಲ್ ಬೋಟ್ ರೇಸಿಂಗ್ ಗೇಮ್ ಆಡಿ ಮತ್ತು ನಿಮಗೆ ನೀವೇ ಸವಾಲು ಹಾಕಿಕೊಳ್ಳಿ ಈಗಲೇ ಆಡಲು ಕ್ಲಿಕ್ಕಿಸಿ
Last Updated Jan 18, 2021, 10:31 AM IST