ಮಾಜಿ ಉಪಮುಖ್ಯಮಂತ್ರಿ ಕೆ.ಎಸ್. ಈಶ್ವರಪ್ಪ ಅವರಿಗೆ ವಿದೇಶದಿಂದ ಮತ್ತೊಮ್ಮೆ ಬೆದರಿಕೆ ಕರೆ ಬಂದಿದ್ದು, ಈ ಸಂಬಂಧ ಅವರು ಶಿವಮೊಗ್ಗ ಎಸ್‌ಪಿಗೆ ದೂರು ನೀಡಿದ್ದಾರೆ. ಈ ಹಿಂದೆ ಹಿಂಪಡೆದಿದ್ದ Y ಶ್ರೇಣಿಯ ಭದ್ರತೆಯನ್ನು ಮರುಸ್ಥಾಪಿಸುವಂತೆ ಅವರು ಸರ್ಕಾರವನ್ನು ಆಗ್ರಹಿಸಿದ್ದಾರೆ.
ಶಿವಮೊಗ್ಗ: ಮಾಜಿ ಉಪಮುಖ್ಯಮಂತ್ರಿ ಹಾಗೂ ಹಿರಿಯ ಬಿಜೆಪಿ ನಾಯಕ ಕೆ.ಎಸ್. ಈಶ್ವರಪ್ಪ ಅವರಿಗೆ ವಿದೇಶದಿಂದ ಮತ್ತೊಮ್ಮೆ ಬೆದರಿಕೆ ಕರೆ ಬಂದಿರುವುದು ಬೆಳಕಿಗೆ ಬಂದಿದೆ. ಈ ಸಂಬಂಧ ಅವರು ಶಿವಮೊಗ್ಗ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ (ಎಸ್‌ಪಿ) ನಿಖಿಲ್ ಅವರನ್ನು ಭೇಟಿ ಮಾಡಿ ಅಧಿಕೃತ ದೂರು ಸಲ್ಲಿಸಿದ್ದಾರೆ. ಜ.7ರಂದು ವಿದೇಶದಿಂದ ಈಶ್ವರಪ್ಪ ಅವರಿಗೆ ಬೆದರಿಕೆ ಕರೆ ಬಂದಿದ್ದು, ಇದರಿಂದ ಅವರ ಭದ್ರತೆ ಕುರಿತಾಗಿ ಮತ್ತೆ ಆತಂಕ ಉಂಟಾಗಿದೆ. ಈ ಹಿಂದೆ ಕೂಡ ಬೆದರಿಕೆ ಕರೆಗಳ ಹಿನ್ನೆಲೆಯಲ್ಲಿ ಈಶ್ವರಪ್ಪ ಅವರಿಗೆ ಪೊಲೀಸ್ ಭದ್ರತೆ ಹಾಗೂ ಎಸ್ಕಾರ್ಟ್ ವ್ಯವಸ್ಥೆ ಒದಗಿಸಲಾಗಿತ್ತು. ಆದರೆ ಇತ್ತೀಚೆಗೆ ರಾಜ್ಯ ಸರ್ಕಾರ ಎಸ್ಕಾರ್ಟ್ ಹಾಗೂ ಪೊಲೀಸ್ ಭದ್ರತೆಯನ್ನು ಹಿಂಪಡೆದಿತ್ತು ಎಂಬುದು ಗಮನಾರ್ಹ.
ಈ ಹಿಂದೆ ಹಲವು ಬಾರಿ ಬೆದರಿಕೆ
ಈಶ್ವರಪ್ಪ ಅವರಿಗೆ ಈ ಹಿಂದೆ 2020 ಹಾಗೂ 2023ರಲ್ಲೂ ವಿದೇಶಗಳಿಂದ ಬೆದರಿಕೆ ಕರೆಗಳು ಬಂದಿದ್ದವು. ಆ ಸಂದರ್ಭದಲ್ಲಿ, ಪಿಎಫ್‌ಐ ಕಾರ್ಯಕರ್ತರು ತನ್ನ ಹತ್ಯೆಗೆ ಸಂಚು ರೂಪಿಸಿದ್ದಾರೆ ಎಂಬ ಆರೋಪದೊಂದಿಗೆ ಅವರು ಪೊಲೀಸ್ ಇಲಾಖೆಗೆ ದೂರು ನೀಡಿದ್ದರು. ಅಲ್ಲದೆ, 2024ರಲ್ಲಿ ತಮ್ಮ ಬೆಂಬಲಿಗರಿಗೂ ಕೊಲೆ ಬೆದರಿಕೆ ಕರೆಗಳು ಬರುತ್ತಿವೆ ಎಂದು ಶಿವಮೊಗ್ಗ ಎಸ್‌ಪಿಗೆ ಈಶ್ವರಪ್ಪ ದೂರು ನೀಡಿದ್ದುದೂ ಇದೆ.
Y ಶ್ರೇಣಿಯ ಭದ್ರತೆಗೆ ಆಗ್ರಹ
ಈಗ ಮತ್ತೊಮ್ಮೆ ವಿದೇಶದಿಂದ ಬೆದರಿಕೆ ಕರೆ ಬಂದಿರುವ ಹಿನ್ನೆಲೆ, ಎಸ್‌ಪಿ ನಿಖಿಲ್ ಅವರನ್ನು ಭೇಟಿ ಮಾಡಿದ ಈಶ್ವರಪ್ಪ, ತನಗೆ ಬೆದರಿಕೆ ಹಾಕುತ್ತಿರುವವರು ಯಾವ ದೇಶದ್ರೋಹಿ ಸಂಘಟನೆಗೆ ಸೇರಿದವರು ಎಂಬುದನ್ನು ಪತ್ತೆಹಚ್ಚುವಂತೆ ಮನವಿ ಮಾಡಿದ್ದಾರೆ. ದೂರು ಸಲ್ಲಿಸಿದ ಬಳಿಕ ಶಿವಮೊಗ್ಗದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಮಾಜಿ ಸಚಿವ ಕೆ.ಎಸ್. ಈಶ್ವರಪ್ಪ, “ಈ ಹಿಂದೆ ನನಗೆ Y ಶ್ರೇಣಿಯ ಭದ್ರತೆ ನೀಡಲಾಗಿತ್ತು. ಆದರೆ ಸರ್ಕಾರ ಇದೀಗ ನನ್ನ ಭದ್ರತೆಯನ್ನು X ಶ್ರೇಣಿಗೆ ಇಳಿಸಿದೆ. ಈಗಲೂ ನನಗೆ ಜೀವ ಬೆದರಿಕೆ ಇರುವ ಹಿನ್ನೆಲೆ ಮತ್ತೆ Y ಶ್ರೇಣಿಯ ಭದ್ರತೆ ಒದಗಿಸಬೇಕು” ಎಂದು ಆಗ್ರಹಿಸಿದರು.
ಯಾವ ದೇಶದ್ರೋಹಿ ಸಂಘಟನೆ ಈ ಕೆಲಸ ಮಾಡುತ್ತಿದೆ?
“ಈ ಹಿಂದೆ ಕೂಡ ನನಗೆ ವಿದೇಶಗಳಿಂದ ನಿರಂತರವಾಗಿ ಬೆದರಿಕೆ ಕರೆಗಳು ಬಂದಿವೆ. ಯಾವ ದೇಶದ್ರೋಹಿ ಸಂಘಟನೆಯವರು ಈ ಕರೆಗಳನ್ನು ಮಾಡುತ್ತಿದ್ದಾರೆ ಎಂಬುದನ್ನು ಪತ್ತೆಹಚ್ಚಿ, ಸೂಕ್ತ ಕ್ರಮ ಕೈಗೊಳ್ಳುವಂತೆ ಶಿವಮೊಗ್ಗ ಎಸ್‌ಪಿಗೆ ಮನವಿ ಮಾಡಿದ್ದೇನೆ” ಎಂದು ಈಶ್ವರಪ್ಪ ಹೇಳಿದರು. ಮಾಜಿ ಉಪಮುಖ್ಯಮಂತ್ರಿಗೆ ಮತ್ತೆ ಬೆದರಿಕೆ ಕರೆ ಬಂದಿರುವ ಘಟನೆ ಶಿವಮೊಗ್ಗ ಜಿಲ್ಲೆಯಲ್ಲಿ ರಾಜಕೀಯ ವಲಯದಲ್ಲಿ ಚರ್ಚೆಗೆ ಕಾರಣವಾಗಿದ್ದು, ಪೊಲೀಸರು ಕರೆಗಳ ಮೂಲ ಪತ್ತೆ ಹಾಗೂ ಭದ್ರತೆ ಮರುಪರಿಶೀಲನೆ ಕುರಿತು ಕ್ರಮ ಕೈಗೊಳ್ಳುವ ಸಾಧ್ಯತೆ ಇದೆ.


