ಮಾಜಿ ಸಿಎಂ ಸಿದ್ದರಾಮಯ್ಯ ತಮಗೆ 100 ವರ್ಷ ಬದುಕುವ ಆಸೆಯಿದೆ, ಆದರೆ ವೀರಪ್ಪ ಮೊಯ್ಲಿ ಅವರು 125 ವರ್ಷ ಬದುಕಿ ಜ್ಞಾನಪೀಠ ಪ್ರಶಸ್ತಿ ಪಡೆಯಲಿ ಎಂದು ಮೈಸೂರಿನಲ್ಲಿ ಹಾರೈಸಿದರು. ಇದೇ ವೇಳೆ ರಾಜ್ಯದಲ್ಲಿ ಕನ್ನಡ ಭಾಷೆಗಾಗಿ ಕಾವಲು ಸಮಿತಿ ಇರುವ ಬಗ್ಗೆ ಅವರು ತೀವ್ರ ಬೇಸರ ವ್ಯಕ್ತಪಡಿಸಿದ್ದಾರೆ.

ಮೈಸೂರು (ನ.1): 'ನಾನು 100 ವರ್ಷ ಬದುಕುತ್ತೇನೆ, ನನಗೆ 100 ವರ್ಷ ಬದುಕುವ ಆಸೆ ಇದೆ!. ಆದರೆ, ವೀರಪ್ಪ ಮೊಯ್ಲಿ ಅವರು 125 ವರ್ಷಗಳು ಬದುಕಲಿ, ಅವರಿಗೆ ಜ್ಞಾನಪೀಠ ಪ್ರಶಸ್ತಿ ಸಿಗಲಿ ಎಂದು ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.

ಮೈಸೂರಿನಲ್ಲಿ ಆಯೋಜಿಸಲಾಗಿದ್ದ ಮಾಜಿ ಸಿಎಂ ವೀರಪ್ಪ ಮೊಯ್ಲಿ ಅವರ ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಸಿದ್ದರಾಮಯ್ಯ, ತಮ್ಮ ಆಯುಷ್ಯದ ಬಗ್ಗೆ ಮತ್ತು ಕನ್ನಡ ಭಾಷೆ ಹಾಗೂ ಸಾಹಿತ್ಯದ ಕುರಿತು ಕೆಲ ಸ್ವಾರಸ್ಯಕರ ಹಾಗೂ ಗಂಭೀರ ವಿಚಾರಗಳನ್ನು ಹಂಚಿಕೊಂಡಿದ್ದಾರೆ.

"ನೂರಲ್ಲ, ವೀರಪ್ಪ ಮೊಯ್ಲಿ 125 ವರ್ಷ ಬದುಕಲಿ"

ವೀರಪ್ಪ ಮೊಯ್ಲಿ ಅವರು ನೂರಲ್ಲ, 125 ವರ್ಷಗಳ ಕಾಲ ಆರೋಗ್ಯವಾಗಿ ಬದುಕಲಿ. ಜೊತೆಗೆ ಅವರಿಗೆ ಅತ್ಯುನ್ನತ 'ಜ್ಞಾನಪೀಠ' ಗೌರವ ಸಿಗಬೇಕು. ಇನ್ನು ನನಗೆ 100 ವರ್ಷ ಬದುಕುವ ಆಸೆ ಇದೆ, ನಾನೂ ನೂರು ವರ್ಷ ಬದುಕುತ್ತೇನೆ. ಆದರೆ ಆಯಸ್ಸು ಎನ್ನುವುದು ನಮ್ಮ ಕೈಯಲ್ಲಿ ಇಲ್ಲ ಬಿಡಿ, ಹೇಳೋದಕ್ಕೆ ಬರುವುದಿಲ್ಲ' ಎಂದು ನಗುಮುಖದಲ್ಲೇ ತಿಳಿಸಿದರು. ತಾನು ಯಾವುದೇ ಸಾಹಿತಿಯಲ್ಲ, ಕೇವಲ ಒಬ್ಬ ಸಾಹಿತ್ಯಾಭಿಮಾನಿಷ್ಟೇ ಎಂದೂ ಸ್ಪಷ್ಟಪಡಿಸಿದರು.

ಕನ್ನಡ ಕಾವಲು ಸಮಿತಿ ಬಗ್ಗೆ ಸಿದ್ದರಾಮಯ್ಯ ಬೇಸರ

ಇದೇ ವೇಳೆ ರಾಜ್ಯದಲ್ಲಿ ಕನ್ನಡ ಭಾಷೆಯ ಪರಿಸ್ಥಿತಿಯ ಬಗ್ಗೆ ಮಾತನಾಡಿದ ಅವರು ತೀವ್ರ ಅಸಮಾಧಾನ ವ್ಯಕ್ತಪಡಿಸಿದರು. 'ಕನ್ನಡ ನಾಡಿನಲ್ಲಿ ಕನ್ನಡವನ್ನು ಕಾಯುವ ಕೆಲಸ ಮಾಡಬೇಕಾದ ಪರಿಸ್ಥಿತಿ ಇದೆಯಲ್ಲ, ಅದೇ ನಮ್ಮ ಅತಿ ದೊಡ್ಡ ದುರ್ದೈವ. ತಮಿಳುನಾಡು ಅಥವಾ ಆಂಧ್ರಪ್ರದೇಶದಂತಹ ಯಾವುದೇ ಬೇರೆ ರಾಜ್ಯಗಳಲ್ಲಿ ಆಯಾ ಭಾಷೆಯ ರಕ್ಷಣೆಗಾಗಿ ಪ್ರತ್ಯೇಕ 'ಕಾವಲು ಸಮಿತಿ'ಗಳು ಇಲ್ಲ. ಆದರೆ ಕರ್ನಾಟಕದಲ್ಲಿ ಮಾತ್ರ ಕಾವಲು ಸಮಿತಿ ಇರುವುದು ಬೇಸರದ ವಿಚಾರ' ಎಂದರು.

ತಮ್ಮ ರಾಜಕೀಯ ಆರಂಭದ ದಿನಗಳನ್ನು ನೆನಪಿಸಿಕೊಂಡು, 'ನಾನು ಮೊದಲ ಬಾರಿ ಶಾಸಕನಾದಾಗ ನನಗೆ ಬೇಡ ಎಂದರೂ ಒತ್ತಾಯಪೂರ್ವಕವಾಗಿ ಕನ್ನಡ ಕಾವಲು ಸಮಿತಿಯ ಮೊದಲ ಅಧ್ಯಕ್ಷ ಸ್ಥಾನವನ್ನು ನೀಡಿದರು. ಆ ಸಮಿತಿಯ ಮೊದಲ ಅಧ್ಯಕ್ಷ ನಾನೇ ಆಗಿದ್ದೆ' ಎಂದು ಹಳೆಯ ನೆನಪುಗಳನ್ನು ಮೆಲುಕು ಹಾಕಿದರು.