ಬೆಂಗಳೂರು(ಜು.02): ಬೇರೆ ರಾಷ್ಟ್ರಗಳಲ್ಲಿ ತಬ್ಲಿಘಿಗಳು ಇರಲಿಲ್ವಾ? ಅಲ್ಲಿ ಕೊರೋನಾ ಸೋಂಕು ಹರಡಲಿಲ್ವಾ..? ಈಗ ಯಾವ ತಬ್ಲಿಘಿ ಸಮಾವೇಶಗಳು ಇಲ್ಲ, ಈಗ ದೇಶಾದ್ಯಂತ ಮಹಾಮಾರಿ ಕೊರೋನಾ ಸೋಂಕು ವೇಗವಾಗಿ ಜಾಸ್ತಿ ಆಗ್ತಿಲ್ವಾ..? ಎಂದು ಹೇಳುವ ಮೂಲಕ ಬಿಜೆಪಿ ವಿರುದ್ಧ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ತೀವ್ರವಾಗಿ ವಾಗ್ದಾಳಿ ನಡೆಸಿದ್ದಾರೆ. 

ಇಂದು(ಗುರುವಾರ) ನಗರದ ಕೆಪಿಸಿಸಿ ಕಚೇರಿಯಲ್ಲಿ ನಡೆದ ಡಿಕೆಶಿ ಪದಗ್ರಹಣ ಸಮಾರಂಭದಲ್ಲಿ ಮಾತನಾಡಿದ ಅವರು, ಗಡಿ ಸಮಸ್ಯೆಯಂತ ವಿಚಾರದಲ್ಲಿ ಪ್ರಧಾನಿ ಮೋದಿ ಅವರು ಸುಳ್ಳು ಹೇಳಿದ್ದಾರೆ. ದೇಶದ ಪ್ರಧಾನಿ ಆಗಲು ಮೋದಿ ಅವರು ಲಾಯಕ್ ಅಲ್ಲ, ಕೊರೋನಾ ಸಂದರ್ಭದಲ್ಲಿ ಪ್ರಧಾನಿ‌ ಮೋದಿ‌ ಅವರು ಮನೆ ಬಿಟ್ಟು ಹೊರಗಡೆ ಬಂದಿಲ್ಲ. ನಾವೆಲ್ಲ ಜನರ ಮಧ್ಯೆ ಇದ್ದು ಕೆಲಸ ಮಾಡುತ್ತೆದ್ದೇವೆ. ಆದ್ರೆ ಮೋದಿ ಅವರು ಜೀವಭಯದಲ್ಲಿ ಬದುಕುತ್ತಿದ್ದಾರೆ. ಇಂಥಹ ಸಂದರ್ಭದಲ್ಲಿ ಕಾಂಗ್ರೆಸ್ ಪಾತ್ರ ಮಹತ್ವದ್ದಿದೆ, ಇದೊಂದು ಸ್ವಾತಂತ್ರ್ಯ ಹೋರಾಟವಾಗಿದೆ. ಬಿಜೆಪಿಯಿಂದ ದೇಶವನ್ನ ಬಚಾವ್ ಮಾಡಬೇಕಿದೆ ಎಂದು ಹೇಳಿದ್ದಾರೆ. 

'ಪಿಎಂ ಕೇರ್‌ ಫಂಡ್‌ಗೆ ಚೀನಾ ಕಂಪನಿಯಿಂದ ಕೋಟಿ ಕೋಟಿ ಹಣ'

ಸದ್ಯದಲ್ಲೇ ಚುನಾವಣೆ ಬರುತ್ತೆ ಅಂತ ಡಿ.ಕೆ ಶಿವಕುಮಾರ್ ಉತ್ಸಾಹದಲ್ಲಿ ಹೇಳಿದ್ದಾರೆ. ಚುನಾವಣೆ ಬರಲ್ಲ, ಇಷ್ಟು ಬೇಗ ನಿಮಗೆ ಅವಕಾಶ ಮಾಡಿಕೊಡಲ್ಲ.ಆದ್ರೆ ಬೂತ್ ಮಟ್ಟದಲ್ಲಿ ಪಕ್ಷ ಕಟ್ಟಲು ಮುಂದಾಗಿದ್ದೀರಿ ನೀವು ಮುನ್ನೆಡೆಯಿರಿ. ಎಲ್ಲರೂ ಸೇರಿ ಪಕ್ಷ ಸಂಘಟನೆ ಮಾಡೋಣ. ಮುಂದಿನ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬರೋದನ್ನ ಯಾರು ತಪ್ಪಿಸಲು ಸಾಧ್ಯವಿಲ್ಲ. ಡಿಕೆಶಿ ಯುವನಾಯಕರಾಗಿದ್ದಾರೆ. ಈ ಉತ್ಸಾಹವನ್ನ ಹಾಗೆ ಇಟ್ಟುಕೊಂಡು ಕೆಲಸ ಮಾಡಿ ಎಂದು ಕಿವಿ ಮಾತು ಹೇಳಿದ್ದಾರೆ. 

ಸತೀಶ್ ಜಾರಕಿಹೊಳಿ, ಡಿಕೆಶಿಗೆ ತಮಾಷೆ ಮಾಡಿದ ಸಿದ್ದು

ಇನ್ನು ಇದೇ ವೇಳೆ ಸತೀಶ್ ಜಾರಕಿಹೊಳಿ ಹಾಗೂ ಡಿಕೆಶಿಗೆ ತಮಾಷೆ ಮಾಡಿದ ಸಿದ್ದರಾಮಯ್ಯ ಅವರು, ಡಿ.ಕೆ ಶಿವಕುಮಾರ್ ಗಿಂತ ನಿನ್ನ ವಯಸ್ಸು ಕಡಿಮೆ ಇದೆಯಾ ಹೆಚ್ಚಿದೆಯಾ ಎಂದು ಸತೀಶ್ ಜಾರಕಿಹೊಳಿಗೆ ಪ್ರಶ್ನಿಸುವ ಮೂಲಕ ತಮಾಷೆ ಮಾಡಿದ್ದಾರೆ. ಈಶ್ವರ್ ಖಂಡ್ರೆ ಹಾಗೂ ಸಲಿಂ ಅಹಮದ್ ಡಿಕೆಶಿಗಿಂತ ವಯಸ್ಸಲ್ಲಿ‌ ಚಿಕ್ಕವರು. ನಿಮಗಿನ್ನೂ ವಯಸ್ಸಿದೆ, ಪಕ್ಷ ಕಟ್ಟಿ ಅಧಿಕಾರಕ್ಕೆ ತನ್ನಿ ಎಂದು ಡಿ.ಕೆ ಶಿವಕುಮಾರ್ ಹಾಗೂ ಕಾರ್ಯಾಧ್ಯಕ್ಷರಿಗೆ ಸಿದ್ದರಾಮಯ್ಯ ಕರೆ ನೀಡಿದ್ದಾರೆ. 

ರಾಷ್ಟ್ರಗೀತೆ ಹಾಡುವ ಮೂಲಕ ಪದಗ್ರಹಣ ಕಾರ್ಯಕ್ರಮ ಮುಕ್ತಾಯವಾಗಿದೆ. ಸಭೆ ಬಳಿಕ ಮಾತನಾಡಿದ ಡಿಕೆ ಶಿವಕುಮಾರ್, ಇಡೀ ವಿಶ್ವವೇ ಕಾರ್ಯಕ್ರಮವನ್ನ ನೋಡಿದೆ. ಸಾಮಾಜಿಕ ಜಾಲತಾಣದಲ್ಲಿ 20 ಲಕ್ಷ ಜನ ಕಾರ್ಯಕ್ರಮವನ್ನ ವೀಕ್ಷಿಸಿದ್ದಾರೆ.  ನನಗೆ ರಾಹುಲ್ ಗಾಂಧಿ ಮತ್ತು ಪ್ರಿಯಾಂಕಾ ಗಾಂಧಿ ಕರೆ ಮಾಡಿ ಶಕ್ತಿ ತುಂಬಿದ್ದಾರೆ. ಇದು ದೊಡ್ಡ ಜವಾಬ್ದಾರಿ ಆಗಿ ಸ್ವೀಕರಿಸಿದ್ದೇನೆ. ವಿಧಾನ ಸೌಧದ ಮೂರನೇ ಮಹಡಿ ಹತ್ತುವವರಿಗೆ ಚಪ್ಪಡಿ ಆಗುತ್ತೇನೆ, ಚಪ್ಪಡಿ ತಿಳಿದುಕೊಂಡು ಮೂರನೇ ಮಹಡಿಗೆ ನಮ್ಮ ಶಾಸಕರು ಹೋಗಲಿ, ಮಹಾಮಾರಿ ಕೊರೋನಾ ಬಗ್ಗೆ ಕಾಂಗ್ರೆಸ್ ಹೋರಾಟದ ಬಗ್ಗೆ ಮುಂದಿನ ದಿನಗಳಲ್ಲಿ ಹೇಳುತ್ತೇವೆ ಎಂದು ತಿಳಿಸಿದ್ದಾರೆ. 

#NewsIn100Seconds | ಈ ಕ್ಷಣದ ಪ್ರಮುಖ ಹೆಡ್‌ಲೈನ್ಸ್

"