Asianet Suvarna News Asianet Suvarna News

ನನ್ನ ಸರ್ಕಾರ ನುಡಿದಂತೆ ನಡೆದಿದೆ: ಮಾಜಿ ಸಿಎಂ ಸಿದ್ದರಾಮಯ್ಯ

ಈರುಳ್ಳಿ ಕೆಜಿಗೆ ರು.150 ರಂತೆ ಮಾರಾಟವಾಗುತ್ತಿರುವದರಿಂದ ಗ್ರಾಹಕರ ಕಣ್ಣಲ್ಲಿ ನೀರು ಬರುತ್ತಿದೆ| ರೈತರಿಗೂ ಇದರ ಲಾಭ ತಟ್ಟುತ್ತಿಲ್ಲ ಮಧ್ಯವರ್ತಿಗಳೇ ಲೂಟಿ ಹೊಡೆಯುತ್ತಿದ್ದಾರೆ| ಸಿಂಧನೂರು ಕ್ಷೇತ್ರದ ಜನರ ಋಣ ತೀರಿಸಲು ಪ್ರಯತ್ನಿಸಿದ್ದೇನೆ ಎಂದ ಸಿದ್ದರಾಮಯ್ಯ|

Former CM Siddaramaiah Talks Over Impliment of Irrigation Project in Sindhanur
Author
Bengaluru, First Published Dec 7, 2019, 12:26 PM IST

ಸಿಂಧನೂರು(ಡಿ.07): ನೀರಿನ ಲಭ್ಯತೆ ಬಳಸಿಕೊಂಡು ರೈತರ ಜಮೀನಿಗೆ ನೀರು ಒದಗಿಸುವ ಪ್ರಯತ್ನಕ್ಕೆ ಸರ್ಕಾರಗಳು ಬದ್ಧವಾಗಿದ್ದರೆ ನೀರಾವರಿ ಸೌಕರ್ಯ ಹೆಚ್ಚುವ ಮೂಲಕ ಬಡತನ ನಿರ್ಮೂಲನೆ ಮಾಡಲು ಸಾಧ್ಯವಿದೆ. ತಮ್ಮ ಅವಧಿಯಲ್ಲಿ ಬೃಹತ್ ನೀರಾವರಿ, ಏತನೀರಾವರಿ, ಕೆರೆ ತುಂಬುವ ಕೆಲಸಗಳಿಗೆ ಐದು ವರ್ಷದಲ್ಲಿ ಒಟ್ಟು 55 ಸಾವಿರ ಕೋಟಿ ಖರ್ಚು ಮಾಡವ ಮೂಲಕ ನುಡಿದಂತೆ ನಡೆದಿದ್ದೇವೆ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ. 

ತಾಲೂಕಿನ ವಳಬಳ್ಳಾರಿ ಗ್ರಾಮದಲ್ಲಿ ವಳ ಬಳ್ಳಾರಿ ಏತನೀರಾವರಿ ಯೋಜನೆಗೊಳಪಡುವ ಆರ್.ಎಚ್.ನಂ.5, ಹರೇಟನೂರು, ಬಾದರ್ಲಿ, ಗಿಣಿವಾರ ಮತ್ತು ಅಲಬನೂರು ಗ್ರಾಮದ ರೈತರು ಶುಕ್ರವಾರ ಸಾಯಂಕಾಲ ಏರ್ಪಡಿಸಿದ್ದ ಅಭಿನಂದನಾ ಸಮಾರಂಭದಲ್ಲಿ ಅವರು ಮಾತನಾಡಿ, 2013 ಕ್ಕಿಂತ ಪೂರ್ವದಲ್ಲಿ ಕಾಂಗ್ರೆಸ್ ಪಕ್ಷದಿಂದ ಹೊಸಪೇಟೆಯಿಂದ ಕೂಡಲಸಂಗಮದವರೆಗೆ ಪಾದಯಾತ್ರೆ ಮಾಡಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದರೆ ಐದು ವರ್ಷದಲ್ಲಿ ರು. 50 ಸಾವಿರ ಕೋಟಿ ಖರ್ಚು ಮಾಡಿ ನೀರಾವರಿ ಸೌಕರ್ಯ ಒದಗಿಸುವುದಾಗಿ ಭರವಸೆ ಕೊಡಲಾಗಿತ್ತು ಎಂದರು. ಆಗ ನೀರಾವರಿ ಸಚಿವರಾಗಿದ್ದ ಎಂ.ಬಿ. ಪಾಟೀಲ್ ಅವರಿಗೆ ಸಂಪೂರ್ಣ ಸ್ವಾತಂತ್ರ್ಯ ನೀಡುವ ಮೂಲಕ ನೀರಾವರಿ ಯೋಜನೆಗಳಿಗೆ ಆದ್ಯತೆ ನೀಡಲಾಗಿತ್ತು. ಅದೇ ಸಂದರ್ಭದಲ್ಲಿ ಹಂಪನಗೌಡ ಬಾದರ್ಲಿ ಅವರು ವಳಬಳ್ಳಾರಿ, ತಿಮ್ಮಾಪುರ, ಶಿರನಗುಡಿ ಮತ್ತು ಗೊರೇಬಾಳ ಪಿಕಪ್ ಡ್ಯಾಂಗಳನ್ನು ಮಂಜೂರು ಮಾಡಿಸಿಕೊಂಡರು. 

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ 

ಅವರು ಹೇಳಿದ ಯಾವುದೇ ಕೆಲಸಗಳಿಗೆ ತಾವು ನಿರಾಕರಣೆ ಮಾಡಿಲ್ಲವೆಂದು ಹೇಳಿದ ಸಿದ್ದರಾಮಯ್ಯ 1991ರಲ್ಲಿ ನಡೆದ ಲೋಕಸಭೆ ಚುನಾವಣೆಗೆ ಕೊಪ್ಪಳ ಕ್ಷೇತ್ರದಿಂದ ಸ್ಪರ್ಧಿಸಿದ ಸಮಯದಲ್ಲಿ ಹಂಪನಗೌಡ ಮತ್ತು ವಿರೂಪಾಕ್ಷಪ್ಪ ಮಾಡಿರುವ ಉಪಕಾರ ಜೀವನದಲ್ಲಿ ಮರೆಯುದಿಲ್ಲ. ಆ ಕಾರಣಕ್ಕಾಗಿಯೇ ಸಿಂಧನೂರು ಕ್ಷೇತ್ರದ ಜನರ ಋಣ ತೀರಿಸಲು ಪ್ರಯತ್ನಿಸಿದ್ದಾಗಿ ಹೇಳಿದರು. 

ಈರುಳ್ಳಿ ಕೆಜಿಗೆ ರು.150 ರಂತೆ ಮಾರಾಟವಾಗುತ್ತಿರುವದರಿಂದ ಗ್ರಾಹಕರ ಕಣ್ಣಲ್ಲಿ ನೀರು ಬರುತ್ತಿದೆ. ರೈತರಿಗೂ ಇದರ ಲಾಭ ತಟ್ಟುತ್ತಿಲ್ಲ. ಮಧ್ಯವರ್ತಿಗಳೇ ಲೂಟಿ ಹೊಡೆಯುತ್ತಿದ್ದಾರೆ. ಇಂತಹ ಸಂದಿಗ್ಧ ಪರಿಸ್ಥಿತಿಯಲ್ಲಿ ಕೇಂದ್ರದ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ತಾವು ಈರುಳ್ಳಿ, ಬೆಳ್ಳುಳ್ಳಿ ತಿನ್ನುವುದಿಲ್ಲವಂತೆ, ಹಿಂಗೂ ಮಾತ್ರ ತಿನ್ನುತ್ತಾರಂತೆ. ದೇಶದ ಶೇ.97 ರಷ್ಟು ಜನ ಈರುಳ್ಳಿ, ಬೆಳ್ಳುಳ್ಳಿ  ತಿನ್ನುತ್ತಿರುವುದು ಅವರಿಗೆ ಗೊತ್ತಾಗದಿರುವುದು ದುರದೃಷ್ಟಕರ ಎಂದು ಸಿದ್ದರಾಮಯ್ಯ ಟೀಕಿಸಿದರು. 

ಮಾಜಿ ಸಂಸದ ಕೆ. ವಿರೂಪಾಕ್ಷಪ್ಪ ಅಧ್ಯಕ್ಷತೆ ವಹಿಸಿದ್ದರು. ಮಾಜಿ ಶಾಸಕ ಹಂಪನಗೌಡ ಬಾದರ್ಲಿ, ವಿಧಾನ ಪರಿಷತ್ ಸದಸ್ಯ ಎನ್. ಎಸ್.ಬೋಸರಾಜು, ಮಾಜಿ ಸಚಿವ ಶಿವರಾಜ ತಂಗಡಗಿ, ಮುಖಂಡ ಎ.ವಸಂತಕುಮಾರ, ಶಾಸಕ ಬಸನಗೌಡ ದದ್ದಲ, ಮಾಜಿ ಸಂಸದ ಬಿ.ವಿ. ನಾಯಕ, ಮಾಜಿ ಶಾಸಕ ಹಂಪಯ್ಯ ನಾಯಕ, ಜಿಪಂ ಸದಸ್ಯರಾದ ದುರುಗಪ್ಪ ಗುಡಗಲದಿನ್ನಿ, ಬಸವರಾಜ ಹಿರೇಗೌಡರ್, ತಾಪಂ ಅಧ್ಯಕ್ಷೆ ಲಕ್ಷ್ಮಿದೇವಿ ಗುರಿಕಾರ, ಜಾಫರಅಲಿ ಜಾಗೀರದಾರ್ ಇದ್ದರು.
 

Follow Us:
Download App:
  • android
  • ios