ಹುಬ್ಬಳ್ಳಿ(ಜ.09): ಬಿಜೆಪಿಯವರು ಸಂವಿಧಾನಕ್ಕೆ ವಿರುದ್ಧವಾದ ಸಿಎಎ ಕಾನೂನು ಮಾಡಿದ್ದಾರೆ. ಬಿಜೆಪಿಯವರು ಸುಳ್ಳು ಹೇಳುವುದನ್ನು ಜನರಿಗೆ ನಾವು ತಿಳಿಸುತ್ತಿದ್ದೇವೆ. ದೇಶದಲ್ಲಿ ಪ್ರಜಾಪ್ರಭುತ್ವ ಇಲ್ಲ, ವಾಕ್‌ ಸ್ವಾತಂತ್ರ ಹತ್ತಿಕ್ಕಿದ್ದಾರೆ ಎಂದು ಮಾಜಿ ಸಿಎಂ ಸಿದ್ದುರಾಮಯ್ಯ ಹೇಳಿದ್ದಾರೆ. 

"

ಬೆಂಗಳೂರಿನ ಜ್ಯೋತಿ ನಿವಾಸ ಕಾಲೇಜಿನ ಗಲಾಟೆ ವಿಚಾರದ ಬಗ್ಗೆ ಗುರುವಾರ ನಗರದಲ್ಲಿ ಮಾಧ್ಯಮವರ ಜತೆ ಮಾತನಾಡಿದ ಅವರು, ಜ್ಯೋತಿನಿವಾಸದಲ್ಲಿ ಕಾಲೇಜು ವಿದ್ಯಾರ್ಥಿಗಳ ಮೇಲೆ ದಬ್ಬಾಳಿಕೆ ಮಾಡಿದ್ದಾರೆ.ದೇಶದಲ್ಲಿ ಅಭಿವ್ಯಕ್ತಿ ಸ್ವಾತಂತ್ರ ಇಲ್ಲ, ಯಾರೂ ಅಭಿಪ್ರಾಯ ಹೇಳುವ ಹಾಗಿಲ್ಲ. ಹೆದರಿಸಿ ಭಯದ ವಾತಾವರಣ ಸೃಷ್ಟಿ ಮಾಡುತ್ತಿದ್ದಾರೆ. ಜೆಎನ್‌ಯುನಲ್ಲಿ ನಡೆದದ್ದು ಸರ್ಕಾರಿ ಪ್ರಯೋಜಿತ ದಾಳಿಯಾಗಿದೆ. ಇದುವರೆಗೆ ಒಬ್ಬರನ್ನೂ ಅರೆಸ್ಟ್ ಮಾಡಿಸಿಲ್ಲ ಎಂದು ಬಿಜೆಪಿ ವಿರುದ್ಧ ಹರಿಹಾಯ್ದಿದ್ದಾರೆ. 

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ 

ದೆಹಲಿ ಪೊಲೀಸರು ಕೇಂದ್ರ ಗೃಹ ಸಚಿವ ಅಮಿತ್ ಶಾ ಕೈಕೆಳಗೆ ಕೆಲಸ ಮಾಡುತ್ತಿದ್ದಾರೆ. ದೆಹಲಿ ಪೊಲೀಸರು ಗೃಹ ಸಚಿವರು ಹೇಳಿದಂತೆ ಕೇಳುತ್ತಿದ್ದಾರೆ. ಘಟನೆ ನಡೆದು 72 ಗಂಟೆಗಳಾದರೂ ಪೊಲೀಸರು ಏನು ಮಾಡುತ್ತಿದ್ದಾರೆ ದೇಶದಲ್ಲಿ ಸರ್ವಾಧಿಕಾರ ನಡೆಯುತ್ತಿದೆ. ಸಿಎಎ ವಿರುದ್ಧ ನಾವು ನೇರವಾಗಿ ಪ್ರತಿಭಟನೆಗೆ ಇಳಿದಿಲ್ಲ. ಕಾಂಗ್ರೆಸ್ ಸ್ಪಷ್ಟವಾಗಿ ಸಿಎಎ ಕಾಯ್ದೆಯನ್ನ ವಿರೋಧಿಸುತ್ತದೆ ಎಂದು ಹೇಳಿದ್ದಾರೆ. 

ಕೆಪಿಸಿಸಿ ಅಧ್ಯಕ್ಷರ‌ ಆಯ್ಕೆ ಕುರಿತು ಪ್ರತಿಕ್ರಿಯೆ ನೀಡಿದ ಸಿದ್ದರಾಮಯ್ಯ, ಈ ಬಗ್ಗೆ ಹೈಕಮಾಂಡ್ ತೀರ್ಮಾನ ಮಾಡುತ್ತದೆ. ಕೇಂದ್ರ ಸರ್ಕಾರ ಕೊಟ್ಟಿರುವ ನೆರೆ ಪರಿಹಾರ ಯಾವುದಕ್ಕೂ ಸಾಲಲ್ಲಾ, ಆನೆ ಹೊಟ್ಟೆಗೆ ಅರೆಕಾಸಿನ ಮಜ್ಜಿಗೆ ಕೊಟ್ಟಿದ್ದಾರೆ. ಬರಗಾಲದ ಪರಿಹಾರ ಇನ್ನೂ ಬಂದಿಲ್ಲ. ಕೇಂದ್ರ ಸರ್ಕಾರ ಆರ್ಥಿಕವಾಗಿ ದಿವಾಳಿಯಾಗಿದೆ. ಜಿಎಸ್‌ಟಿ, ಕುಡಿಯುವ ನೀರು, ಕೇಂದ್ರ ಪ್ರಾಯೋಜಿತ ಯೋಜನೆಗಳ ಹಣ ರಾಜ್ಯಕ್ಕೆ ಬಂದಿಲ್ಲ‌. ಕೇಂದ್ರದವರು ರಾಜ್ಯಗಳನ್ನೂ ಸಹ ದಿವಾಳಿ ಮಾಡುತ್ತಿದ್ದಾರೆ ಎಂದು ಹೇಳಿದ್ದಾರೆ.

ಐದು ಸಾವಿರ ಕೋಟಿ ರಾಜ್ಯಕ್ಕೆ ಬರಬೇಕಾದ ಶೇರ್ ಬರ್ತಾಯಿಲ್ಲಾ. ಸಿಎಂ ಯಡಿಯೂರಪ್ಪ ಏನು ಕಡಿದು ಕಟ್ಟೆ ಹಾಕ್ತಾರೆ ನೋಡ್ತಿದ್ದೀವಿ. ಆಮೇಲೆ ರಸ್ತೆಗಿಳಿದು ಹೋರಾಟ ಮಾಡುತ್ತೇವೆ. ಯಡಿಯೂರಪ್ಪ ಬಿಜೆಪಿ ಸಂಸದರನ್ನು ಕರೆದುಕೊಂಡು ಪ್ರಧಾನಿ ಬಳಿ ಹೋಗಲಿ. ಮಹದಾಯಿ ವಿಚಾರದಲ್ಲಿ ಬಿಜೆಪಿಯವರು ಕೇಂದ್ರವನ್ನು ಡಿಪೆಂಡ್ ಮಾಡ್ಕೋತಾರೆ ಎಂದು ಹೇಳಿದ್ದಾರೆ. 

ಪ್ರಧಾನಿಗಳ ಮಧ್ಯಸ್ಥಿಕೆಯಲ್ಲಿ ಪರಸ್ಪರ ಮಾತುಕತೆಗೆ ಕುಳಿತು ಮಹದಾಯಿ ವಿವಾದ ಬಗೆ ಪರಿಹರಿಸಿಕೊಳ್ಳಬಹುದು. ಪ್ರಧಾನಿ ಮೂರು ರಾಜ್ಯದವರನ್ನು ಕರೆದು ಇತ್ಯರ್ಥ ಮಾಡಬೇಕಿತ್ತು, ನಮ್ಮ ರಾಜ್ಯದ ಹಿತ ನಮಗೆ ಮುಖ್ಯವಾಗಿದೆ. ಗೋವಾ ಕಾಂಗ್ರೆಸ್‌‌ನವರಿಗೆ ಅವರ ರಾಜ್ಯದ ಹಿತ ಮುಖ್ಯವಾಗಿರುತ್ತದೆ ಎಂದು ತಿಳಿಸಿದ್ದಾರೆ. 

ಇದುವರೆಗೆ ಯಡಿಯೂರಪ್ಪ ಹೇಳಿದ್ದು ಒಂದೂ ಆಗಿಲ್ಲ. ಹುಬ್ಬಳ್ಳಿಯಲ್ಲಿ ಪತ್ರ ಓದಿದ್ದರೂ ಎಲ್ಲಿ ನೀರು ಹರೀತು? ರಾಜ್ಯದ ಜಲವಿವಾದ ವಿಚಾರದಲ್ಲಿ ಎಲ್ಲರೂ ಒಗ್ಗಟ್ಟಾಗಿ ಹೋರಾಟ ಮಾಡಬೇಕು‌. ಮಹದಾಯಿ ಕುರಿತು ಸರ್ವಪಕ್ಷಗಳ ಸಭೆಯಲ್ಲಿ ಅಜೆಂಡಾ ನೋಡಿಕೊಂಡು ಭಾಗವಹಿಸುತ್ತೇನೆ. ಮಹದಾಯಿ ವಿಚಾರದಲ್ಲಿ ಶೆಟ್ಟರ್ ಭಾಷಣ ಮಾಡುತ್ತಾರೆ, ಜೋಶಿ ತಮಟೆ ಬಾರಿಸುತ್ತಾರೆ ಎಂದು ವ್ಯಂಗ್ಯವಾಡಿದ್ದಾರೆ.