ಹುಬ್ಬಳ್ಳಿ(ಅ.5): ನೆರೆ ಪರಿಹಾರ ವಿಚಾರದಲ್ಲಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಟಾಕಿಂಗ್‌ ‘ನಾನ್‌ಸೆನ್ಸ್‌ ಥಿಂಗ್ಸ್‌’ ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ವಾಗ್ದಾಳಿ ನಡೆಸಿದ್ದಾರೆ.

ನಗರದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಸಿದ್ದರಾಮಯ್ಯ ಮುಖ್ಯಮಂತ್ರಿ ಹಾಗೂ ದೀರ್ಘಾವಧಿ ಹಣಕಾಸು ಸಚಿವರಾಗಿದ್ದವರು. ಅವರು ಕೇಂದ್ರದ ಪರಿಹಾರದ ಬಗ್ಗೆ ಬಾಯಿಗೆ ಬಂದಂತೆ ಮಾತನಾಡಬಾರದು ಎಂದು ಹೇಳಿದ್ದಾರೆ. 

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ 

ಕೇಂದ್ರ ಸರ್ಕಾರ ಬಿಡುಗಡೆ ಮಾಡಿದ್ದು ಮಧ್ಯಂತರ ಪರಿಹಾರ. ಎನ್‌ಡಿಆರ್‌ಎಫ್‌ ನಿಯಮಾವಳಿ ಪ್ರಕಾರ ಸದ್ಯ 1200 ಕೋಟಿ ನೀಡಲಾಗಿದೆ. ಇದು ನಾವು ಕೇಳಿದ ಆಧಾರದ ಮೇಲೆ ನೀಡಿದ್ದಾರೆ. ಮುಂದೆಯೂ ಬರುತ್ತೆ. ಜವಾಬ್ದಾರಿ ಇಲ್ಲದೆ ಆರೋಪ ಮಾಡುವುದು ಸರಿಯಲ್ಲ ಎಂದರು.

ರಾಜಕಾರಣಕ್ಕಾಗಿ ಈ ರೀತಿ ಮಾತನಾಡುತ್ತಿದ್ದಾರೆ ಎಂದೆನಿಸುತ್ತಿದೆ ಎಂದ ಅವರು, ಚುನಾವಣೆ ಇನ್ನು ದೂರವಿದೆ. ಆವಾಗ ರಾಜಕೀಯ ಮಾತನಾಡೋಣ. ರಾಜಕೀಯ ಮಾಡೋಣ. ಆದರೆ ಈಗ ಬೇಡ. ಇದನ್ನು ಸಿದ್ದರಾಮಯ್ಯ ಅರಿತುಕೊಳ್ಳಬೇಕು ಎಂದರು.

ಯುಪಿಎ ಅವಧಿಯಲ್ಲಿ ಹೆಚ್ಚಿನ ಪರಿಹಾರ ಬಂದಿತ್ತು ಎಂದು ಕಾಂಗ್ರೆಸ್‌ ನಾಯಕರು ಹೇಳುತ್ತಿರುವುದು ಬೋಗಸ್‌. ಕಳೆದ ಐದು ವರ್ಷಗಳ ಅವಧಿಯಲ್ಲಿ ನಮ್ಮ ಸರ್ಕಾರ ಹೆಚ್ಚು ಪರಿಹಾರ ಹಣ ನೀಡಿದೆ. ಯುಪಿಎ ಸರ್ಕಾರದ ಹತ್ತು ವರ್ಷದ ಅವಧಿಗಿಂತಲೂ ನಮ್ಮ ಸರ್ಕಾರ ಹೆಚ್ಚು ನೀಡಿದೆ. ಯುಪಿಎ ಸರ್ಕಾರ 10 ವರ್ಷಗಳಲ್ಲಿ ನೀಡಿದ್ದು ಬರೀ .907 ಕೋಟಿ ಆದರೆ ರಾಜ್ಯ ಸರ್ಕಾರ ಆಗ .15929 ಕೋಟಿ ಕೇಳಿತ್ತು. ನಾವು ಕೇವಲ ಐದು ವರ್ಷಗಳಲ್ಲಿ .6 ಸಾವಿರ ಕೋಟಿ ನೀಡಿದ್ದೇವೆ. ಯುಪಿಎ ಸರ್ಕಾರ ಹೆಚ್ಚು ಪರಿಹಾರ ನೀಡಿತ್ತು ಎನ್ನುವ ಕೈ ನಾಯಕರ ಹೇಳಿಕೆ ಬೋಗಸ್‌ ಎಂದು ಕಿಡಿಕಾರಿದರು.

ಯತ್ನಾಳಗೆ ನೋಟಿಸ್‌:

ಬಿಜೆಪಿ ಶಾಸಕ ಬಸವನಗೌಡ ಪಾಟೀಲ ಯತ್ನಾಳ ಅವರಿಗೆ ಶೋಕಾಸ್‌ ನೋಟಿಸ್‌ ನೀಡಿದ್ದಕ್ಕೂ ಪರಿಹಾರದ ವಿಷಯಕ್ಕೂ ಯಾವುದೇ ಸಂಬಂಧವಿಲ್ಲ. ಯತ್ನಾಳ ಅವರು ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರನ್ನು ಕೇಂದ್ರದ ನಾಯಕರು ಕಡೆಗಣಿಸುತ್ತಿದ್ದಾರೆ ಎಂದು ಹೇಳಿಕೆ ನೀಡಿದ್ದರು. ಈ ಕಾರಣಕ್ಕಾಗಿ ಅವರಿಗೆ ಶೋಕಾಸ್‌ ನೋಟಿಸ್‌ ನೀಡಿದ್ದಾರೆ. ನೋಟಿಸ್‌ಗೆ ಯತ್ನಾಳ ಸೂಕ್ತ ಉತ್ತರ ನೀಡುತ್ತಾರೆ ಎಂದುಕೊಂಡಿದ್ದೇನೆ ಎಂದು ನುಡಿದರು.