Asianet Suvarna News Asianet Suvarna News

ಕೇಂದ್ರ ಸರ್ಕಾರದಿಂದ ಉತ್ತರ ಕರ್ನಾಟಕಕ್ಕೆ ಅನ್ಯಾಯ: ಎಚ್‌ಡಿಕೆ

*   ಕ್ರಾಂತಿಕಾರಿ ಬದಲಾವಣೆಗಳು ಉತ್ತಮ ಆಡಳಿತದಿಂದ ಸಾಧ್ಯವೇ ಹೊರತು ಬಂದೂಕಿನಿಂದಲ್ಲ
*  ಕೋವಿಡ್‌ ನಿಯಮ ಉಲ್ಲಂಘಿಸುತ್ತಿರುವ ಜನಪ್ರತಿನಿಧಿಗಳು
*  ನೀರಾವರಿ ಯೋಜನೆಗಳಿಗೆ ಕೇಂದ್ರ ಬದ್ಧತೆ ತೋರಿಸಲಿ 

Former CM HD Kumarawamy Talks Over Central Government grg
Author
Bengaluru, First Published Aug 24, 2021, 8:37 AM IST

ಹುಬ್ಬಳ್ಳಿ(ಆ.24): ರಾಜ್ಯದ ಕೃಷ್ಣಾ ಮೇಲ್ದಂಡೆ ಯೋಜನೆ (ಯುಕೆಪಿ), ಮಹದಾಯಿ, ಎತ್ತಿನಹೊಳೆ ಹಾಗೂ ಮೇಕೆದಾಟು ನೀರಾವರಿ ಯೋಜನೆಗಳ ಜಾರಿಗೆ ಕೇಂದ್ರ ಸರ್ಕಾರ ಧೈರ್ಯ ಪ್ರದರ್ಶಿಸಬೇಕು. ಯಾವುದೇ ರಾಜ್ಯಗಳ ಒತ್ತಡಕ್ಕೆ ಮಣಿಯದೆ ಸಮಸ್ಯೆ ಬಗೆಹರಿಸುವ ಬದ್ಧತೆ ತೋರಿಸಬೇಕು ಎಂದು ಮಾಜಿ ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ಆಗ್ರಹಿಸಿದ್ದಾರೆ. 

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾವೇರಿ ನೀರು ಹಂಚಿಕೆಗೆ ಸಂಬಂಧಿಸಿದಂತೆ ಸುಪ್ರೀಂಕೋರ್ಟ್‌ನಲ್ಲಿ ವಿಚಾರಣೆ ನಡೆಯುತ್ತಿದ್ದರೂ, ತಮಿಳುನಾಡಿನ ಒತ್ತಡಕ್ಕೆ ಮಣಿದು ಕೇಂದ್ರ ಗೆಜೆಟ್‌ ನೋಟಿಫಿಕೇಶನ್‌ ಹೊರಡಿಸಿತು. ಆದರೆ, ಮಹದಾಯಿ ಮತ್ತು ಕೃಷ್ಣಾ ವಿಷಯದಲ್ಲಿ ಮೌನವಾಯಿತು. ಇದು ಕೇಂದ್ರದ ಇಬ್ಬಗೆಯ ನೀತಿಗೆ ಸಾಕ್ಷಿ ಎಂದು ಕಿಡಿಕಾರಿದರು.

ಮಹದಾಯಿ ವಿಷಯದಲ್ಲಿ ಗೆಜೆಟ್‌ ಅಧಿಸೂಚನೆಯಾಗಿದ್ದರೂ, ಕೆಲ ಷರತ್ತು ಹಾಕಿಕೊಂಡರು. ಅದಕ್ಕಾಗಿ ಪರಿಸರ, ಅರಣ್ಯ ಇಲಾಖೆ ಸಮ್ಮತಿ ಕಾರಣ ಕೊಟ್ಟರು. ನೀರಿನ ಬಳಕೆಯಲ್ಲಿ ಉಲ್ಲಂಘನೆಯಾಗಿದೆ ಎಂದು ಆರೋಪಿಸಿ ಗೋವಾ ದೂರು ಸಲ್ಲಿಸಿತ್ತು. ಆ ಕುರಿತು ವರದಿ ನೀಡಲು ನೇಮಿಸಿದ್ದ ಕರ್ನಾಟಕ, ಮಹಾರಾಷ್ಟ್ರ ಹಾಗೂ ಗೋವಾದ ಅಧೀಕ್ಷಕ ಎಂಜಿನಿಯರ್‌ಗಳ ನೇತೃತ್ವದ ಸಮಿತಿ ಇಂದಿಗೂ ವರದಿ ನೀಡಿಲ್ಲ. ಗೋವಾ ಒತ್ತಡಕ್ಕೆ ಮಣಿದು ಮಹದಾಯಿ ಯೋಜನೆ ಜಾರಿ ವಿಷಯದಲ್ಲಿ ರಾಜ್ಯಕ್ಕೆ ಕೇಂದ್ರ ಸರ್ಕಾರ ಅನ್ಯಾಯ ಮಾಡುತ್ತಿದೆ. ಈ ಬಗ್ಗೆ ಬಿಜೆಪಿ ಸಂಸದರು ತುಟಿ ಬಿಚ್ಚುತ್ತಿಲ್ಲ ಎಂದರು. ಯುಕೆಪಿ ವಿಷಯದಲ್ಲೂ ಕೇಂದ್ರ ಸರ್ಕಾರ ಉತ್ತರ ಕರ್ನಾಟಕಕ್ಕೆ ಅನ್ಯಾಯ ಎಸಗುತ್ತಿದೆ.

ಜಾತಿಗಣತಿ ವರದಿ: ಕುಮಾರಸ್ವಾಮಿ ವಿರುದ್ಧ ಸಿದ್ದರಾಮಯ್ಯ ವಾಗ್ದಾಳಿ

ಪಾದಯಾತ್ರೆ:

ನೀರಾವರಿ ಯೋಜನೆಗಳ ವಿಷಯದಲ್ಲಿ ಆಗುತ್ತಿರುವ ಅನ್ಯಾಯದ ವಿರುದ್ಧ ಪಕ್ಷ ರಾಜ್ಯದಲ್ಲಿ ಪಾದಯಾತ್ರೆ ಹಮ್ಮಿಕೊಳ್ಳಲಿದೆ. ಮಹದಾಯಿಗೆ ಸಂಬಂಧಿಸಿದಂತೆ ಬೆಳಗಾವಿಯಿಂದ, ಕೃಷ್ಣಾ ಯೋಜನೆ ಕುರಿತು ಆಲಮಟ್ಟಿ, ಮೇಕೆದಾಟುಗಾಗಿ ತಲಕಾವೇರಿ ಹಾಗೂ ಎತ್ತಿನಹೊಳೆಗಾಗಿ ಸಕಲೇಶಪುರದಿಂದ ಪಾದಯಾತ್ರೆ ನಡೆಸಿ ಜನರಲ್ಲಿ ಜಾಗೃತಿ ಮೂಡಿಲಾಗುವುದು. ಬಳಿಕ ಬೆಂಗಳೂರಿನಲ್ಲಿ ದೊಡ್ಡ ಸಮಾವೇಶ ಹಮ್ಮಿಕೊಳ್ಳಲಾಗುವುದು. ಕೋವಿಡ್‌ ಸ್ಥಿತಿಯನ್ನು ನೋಡಿಕೊಂಡು ವಿಜಯದಶಮಿ ದಿನಂದು ಪಾದಯಾತ್ರೆ ಆರಂಭಿಸುವ ಚಿಂತನೆ ಇದೆ ಎಂದರು

ನಿಯಮ ಉಲ್ಲಂಘನೆ:

ಜನಪ್ರತಿನಿಧಿಗಳು ಕೋವಿಡ್‌ ನಿಯಮವನ್ನು ಉಲ್ಲಂಘಿಸುತ್ತಿದ್ದಾರೆ. ಕಾಂಗ್ರೆಸ್‌ ವಲಯ ಮಟ್ಟದ ಕಾರ್ಯಕರ್ತರ ಸಭೆ ಮೂಲಕ ಕೋವಿಡ್‌ ನಿಯಮ ಗಾಳಿ ತೂರುತ್ತಿದ್ದರೆ, ಬಿಜೆಪಿ ಜನಾಶೀರ್ವಾದ ಯಾತ್ರೆ ಮೂಲಕ ಉಲ್ಲಂಘಿಸುತ್ತಿದೆ. ಜನಾಶೀರ್ವಾದ ಯಾತ್ರೆಯಲ್ಲಿ ಜನರಿಗೆ ಯಾವುದೇ ಸಂದೇಶಗಳಿಲ್ಲ. ಕಾರ್ಯಕರ್ತರು ಮತ್ತು ಬೆಂಬಲಿಗರ ಗುಂಪು ಕಟ್ಟಿಕೊಂಡು ಹಾರ ಹಾಕುವುದು, ಗಾಳಿಯಲ್ಲಿ ಗುಂಡು ಹಾರಿಸುವುದಷ್ಟೇ ನಡೆಯುತ್ತಿದೆ. ನಿಯಮ ಪಾಲಿಸಿ ಮಾದರಿಯಾಗಬೇಕಾದವರೆ ಉಲ್ಲಂಘಿಸಿ ಕೋವಿಡ್‌ ಹರಡಲು ಕಾರಣವಾದರೆ ಹೇಗೆ ಎಂದು ಪ್ರಶ್ನಿಸಿದರು.

ಬಂದೂಕಿನಿಂದ ಕ್ರಾಂತಿಯಾಗದು:

ಕುಮಾರಸ್ವಾಮಿಗೆ ಕ್ರಾಂತಿಕಾರಿ ದೃಷ್ಟಿಯಿಲ್ಲ ಎಂದು ಚಿತ್ರನಟ ಚೇತನ್‌ ಟೀಕೆ ಮಾಡಿದ್ದಕ್ಕೆ ತಿರುಗೇಟು ನೀಡಿದ ಅವರು, ಕ್ರಾಂತಿಕಾರಿ ಬದಲಾವಣೆಗಳು ಉತ್ತಮ ಆಡಳಿತದಿಂದ ಸಾಧ್ಯವೇ ಹೊರತು ಬಂದೂಕಿನಿಂದಲ್ಲ . ನಟ ಚೇತನ್‌ ಅವರಿಗೆ ಕ್ಯಾಮೆರಾ ಮುಂದೆ ನಿಂತು ಮಾತನಾಡುವುದನ್ನು ಬಿಟ್ಟರೆ, ರಾಜಕೀಯ ಗೊತ್ತಿಲ್ಲ. ನಾನೂ ಹಲವು ಸಿನಿಮಾಗಳನ್ನು ನಿರ್ಮಿಸಿದ್ದೇನೆ ಎಂದರು.

ಆರೋಗ್ಯ, ಶಿಕ್ಷಣ, ರೈತನ ಬದುಕು ಸುಧಾರಣೆ, ವಸತಿ ಹಾಗೂ ಯುವಜನರಿಗೆ ಉದ್ಯೋಗ ನೀಡುವುದರಿಂದ ಕ್ರಾಂತಿಕಾರಿ ಬದಲಾವಣೆ ಸಾಧ್ಯ. ಅದಕ್ಕೆ ಸ್ವತಂತ್ರ ಅಧಿಕಾರ ಬೇಕು. ಮುಂದಿನ ಬಾರಿ ನಮಗೆ ಬಹುಮತ ಕೊಡಿ ಎಂದು ಜನರನ್ನು ಕೇಳಿದ್ದೇನೆ. ಇದನ್ನು ಸರಿಯಾಗಿ ಗ್ರಹಿಸದ ಚೇತನ್‌ಗೆ ಪ್ರತಿಕ್ರಿಯಿಸುವ ಅಗತ್ಯವಿಲ್ಲ ಎಂದರು. ಕೆಆರ್‌ಎಸ್‌ಗಾಗಿ ಮಂಡ್ಯ ಸಂಸದೆ ಸುಮಲತಾ ಹೋರಾಟದ ಬಗ್ಗೆ ಕೇಳಿದ ಪ್ರಶ್ನೆಗೆ, ಪಾಪ ಬಿಡಿ ಅವರು ದೊಡ್ಡವರು. ಅವರನ್ನು ನೀವೇ ದೊಡ್ಡವರನ್ನಾಗಿ ಮಾಡಿದ್ದೀರಿ ಎಂದರು.
 

Follow Us:
Download App:
  • android
  • ios