ಬೆಂಗಳೂರು(ಏ.24): ರಾಮನಗರದ ಕಾರಾಗೃಹಕ್ಕೆ ಕಳುಹಿಸಲಾಗಿದ್ದ ಪಾದರಾಯನಪುರದ ಗಲಭೆಕೋರರನ್ನು ಸಕಲ ಮುನ್ನೆಚ್ಚರಿಕೆ ಕ್ರಮಗಳೊಂದಿಗೆ ತಕ್ಷಣ ಸ್ಥಳಾಂತರಿಸದಿದ್ದರೆ ಇಂದು(ಶುಕ್ರವಾರ) ಉಗ್ರ ಪತ್ರಿಭಟನೆ ಮಾಡುವುದಾಗಿ ಮಾಜಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಎಚ್ಚರಿಸಿದ್ದಾರೆ.

"

 

ಈ ಕುರಿತು ಸರಣಿ ಟ್ವೀಟ್‌ ಮಾಡಿರುವ ಅವರು, ‘ಈಗಾಗಲೇ ರಾಜ್ಯದಲ್ಲಿ 445 ಮಂದಿ ಸೋಂಕಿಗೆ ತುತ್ತಾಗಿ 17 ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. ರಾಮನಗರ ಸೇರಿದಂತೆ ಎಂಟು ಜಿಲ್ಲೆಗಳು ಮಾತ್ರ ಸೋಂಕು ಮುಕ್ತವಾಗಿದ್ದವು. ಪಾದರಾಯನಪುರದಲ್ಲಿ ಬಂಧಿತರಾಗಿದ್ದವರನ್ನು ರಾಮನಗರ ಜೈಲಿಗೆ ಸ್ಥಳಾಂತರಿಸುವ ಮುನ್ನ ಎಚ್ಚರಿಕೆ ವಹಿಸದೇ ರಾಜ್ಯ ಸರ್ಕಾರ ಇದೀಗ ಈ ಪಿಡುಗನ್ನು ರಾಮನಗರಕ್ಕೂ ತಂದಂತಾಗಿದೆ. ಸರ್ಕಾರದ ಎಡವಟ್ಟು ನಿರ್ಧಾರದಿಂದ ರಾಮನಗರದಲ್ಲೂ ಸೋಂಕು ಹರಡುವ ಭೀತಿಯಿದೆ’.

 

‘ಸರ್ಕಾರ ಸಕಲ ಮುನ್ನೆಚ್ಚರಿಕೆಯಿಂದ ಪರಿಸ್ಥಿತಿ ನಿಭಾಯಿಸದಿದ್ದರೆ ಉಗ್ರ ಹೋರಾಟ ಮಾಡಬೇಕಾಗುತ್ತದೆ. ರಾಮನಗರ ಜೈಲನ್ನು ಸಂಪೂರ್ಣ ಕ್ವಾರಂಟೈನ್‌ ಮಾಡಬೇಕು. ಪೊಲೀಸರು ಸೇರಿದಂತೆ ಜೈಲಿನಲ್ಲಿ ಕಾರ್ಯ ನಿರ್ವಹಿಸಿದ ಅಡುಗೆ ಮತ್ತು ಸ್ವಚ್ಛತೆಯವರು ಸೇರಿದಂತೆ ಸಂಬಂಧಿಸಿದ ಎಲ್ಲರ ಆರೋಗ್ಯ ಕಾಪಾಡಲು ಸರ್ಕಾರ ತಕ್ಷಣವೇ ಕಾರ್ಯೋನ್ಮುಖವಾಗಬೇಕು’ ಎಂದು ಟ್ವೀಟರ್‌ನಲ್ಲಿ ಒತ್ತಾಯಿಸಿದ್ದಾರೆ.
ಈ ಮುನ್ನವೇ ಸೋಂಕು ಮುಕ್ತವಾಗಿದ್ದ ರಾಮನಗರಕ್ಕೆ ಕೈದಿಗಳನ್ನು ಕರೆತರುವುದಕ್ಕೆ ಎಚ್‌ಡಿಕೆ ವಿರೋಧ ವ್ಯಕ್ತಪಡಿಸಿದ್ದರು.