#ShameOnKarnatakaGovt: ದಕ್ಷ ಅಧಿಕಾರಿಗಿಲ್ಲವೇ ಕಿಮ್ಮತ್ತು?
ಭೂಗಳ್ಳರ ವಿರುದ್ಧ ಘರ್ಜಿಸಿದ್ದ ಖಡಕ್ ಅಧಿಕಾರಿಗೆ ರಾಜ್ಯ ಸರ್ಕಾರ ನೀಡಿದ್ದು ವರ್ಗಾವಣೆ ಶಿಕ್ಷೆ.
ಬೆಂಗಳೂರು, (ಅ.8): ಪ್ರಾಮಾಣಿಕ ಹಾಗೂ ದಕ್ಷ ಅಧಿಕಾರಿಗಳಿಗೆ ಈ ಸರ್ಕಾರದಲ್ಲಿ ಕಿಮ್ಮತ್ತಿಲ್ಲ, ಎನ್ನುವುದು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ನೇತೃತ್ವದ ಕಾಂಗ್ರೆಸ್-ಜೆಡಿಎಸ್ ಸರಕಾರ ಮತ್ತೊಮ್ಮೆ ಸಾಬೀತು ಪಡಿಸಿದೆ. ಭೂಗಳ್ಳರ ವಿರುದ್ಧ ಘರ್ಜಿಸಿದ್ದ ಖಡಕ್ ಅಧಿಕಾರಿಗೆ ವರ್ಗಾವಣೆ ಶಿಕ್ಷೆ ನೀಡುವ ಮೂಲಕ ಸರಕಾರ ಇದನ್ನು ಸಾಬೀತುಪಡಿಸಿದೆ.
ಸುಂಕದಕಟ್ಟೆ ಹಾಗೂ ತುರಹಳ್ಳಿ ಭಾಗದಲ್ಲಿ ಸರ್ಕಾರಿ ಭೂಮಿಯನ್ನು ಪ್ರಭಾವಿ ವ್ಯಕ್ತಿಗಳು ಒತ್ತುವರಿ ಮಾಡಿಕೊಂಡಿದ್ದರು. ಸರ್ಕಾರಿ ಭೂಮಿಯನ್ನು ಕಬಳಿಸಲು ಹೊಂಚು ಹಾಕಿದ್ದದವರ ವಿರುದ್ಧ ಬೆಂಗಳೂರು ನಗರ ವಿಭಾಗದ ಎಸಿಎಫ್ ರವೀಂದ್ರ ಅವರು ಸಮರ ಸಾರಿದ್ದು, ಶ್ರಮವಹಿಸಿ, ನೂರಾರು ಎಕರೆ ಒತ್ತುವರಿ ಜಾಗವನ್ನು ತೆರವುಗೊಳಿಸಿದ್ದಾರೆ. ಸುಂಕದಕಟ್ಟೆ ಹಾಗೂ ತುರಹಳ್ಳಿ ಭಾಗದಲ್ಲಿ ಒತ್ತುವರಿ ತೆರವುಗೊಳಿಸಿದ್ದ ರವೀಂದ್ರ ಅವರು ಆನೇಕಲ್, ಭೂತಹಳ್ಳಿ ಸುತ್ತಮುತ್ತಲೂ ಒತ್ತುವರಿ ತೆರವಿಗೆ ಮುಂದಾಗಿದ್ದರು. ಸುಮಾರು 200 ಎಕರೆ ಒತ್ತುವರಿ ಜಾಗವನ್ನು ತೆರವುಗೊಳಿಸಲು ಮುಂದಾಗಿದ್ದ ರವೀಂದ್ರ ಅವರನ್ನೀಗ ವರ್ಗಾಯಿಸಲಾಗಿದೆ. ಸರಕಾರ ನೌಕರರಿಗೆ ವರ್ಗಾವಣೆ ಎನ್ನುವುದು ಹೊಸ ವಿಷಯವಲ್ಲ. ಆದರೆ, ಇನ್ನೂ ಮೂರು ವರ್ಷಗಳು ತುಂಬುವ ಮುನ್ನವೇ, ಸ್ಥಳವನ್ನೂ ತೋರಿಸದೇ ವರ್ಗಾವಣೆ ಮಾಡಿರುವ ಕಾರಣವೇನೆಂಬುವುದು ಮಿಲಿಯನ್ ಡಾಲರ್ ಪ್ರಶ್ನೆ.
"
ಈಗಾಗಲೇ ಸುಮಾರು 120 ಎಕರೆ ಭೂಮಿ ಒತ್ತುವರಿ ತೆರವು ಮಾಡಿದ್ದು, ಹೈಕೋರ್ಟ್‌ನಲ್ಲಿದ್ದ ಎಲ್ಲಾ ತಡೆಯಾಜ್ಞೆಗಳನ್ನೂ ತೆರವುಗೊಳಿಸಿದ್ದರು. ಆ ಮೂಲಕ ಸರ್ಕಾರದ ಭೂಮಿಯನ್ನು ಹಿಂಪಡೆದಿದ್ದರು. ಆದರೆ, ಇಂಥ ಪ್ರಾಮಾಣಿಕ ಅಧಿಕಾರಿಗೆ ಸರಕಾರ ವರ್ಗಾವಣೆ ಶಿಕ್ಷೆ ನೀಡಿ, ಇನ್ನೂ ಮಾಡಬೇಕಿದ್ದ ಕಾರ್ಯಕ್ಕೆ ಬ್ರೇಕ್ ಹಾಕಿರುವುದ ಮಾತ್ರ ದುರಂತ.
ವರ್ಗಾವಣೆಯಲ್ಲಿ ಪ್ರಭಾವಿಗಳ ಪ್ರಭಾವ:
ನೂರಾರು ಎಕರೆ ಜಾಗ ಕಳೆದುಕೊಳ್ಳುವ ಭೀತಿಯಲ್ಲಿದ್ದ ಪ್ರಭಾವಿಗಳ ಪ್ರಭಾವ ಈ ವರ್ಗಾವಣೆಯಲ್ಲಿ ಮುಖ್ಯ ಪಾತ್ರವಹಿಸಿದೆ, ಎಂಬುದರಲ್ಲಿ ಅನುಮಾನವೇ ಇಲ್ಲ. ತುರಹಳ್ಳಿ ಫಾರೆಸ್ಟ್ ಸುತ್ತಮುತ್ತಲಿನ ಸೌಂದರ್ಯವನ್ನು ಹೆಚ್ಚಿಸಲು ಮುಂದಾಗಿದ್ದ ಅನೇಕ ಸಂಘ, ಸಂಘಟನೆಗಳೊಂದಿಗೆ ಎಸಿಎಫ್ ರವೀಂದ್ರ ಅವರೂ ಕೈ ಜೋಡಿಸಿದ್ದರು. ಇದೀಗ ಕಾಡನ್ನು ಮತ್ತಷ್ಟು ವಿಸ್ತರಿಸುವ ಹುಮ್ಮಸ್ಸಿನಲ್ಲಿದ್ದರು ಈ ಎಸಿಎಫ್. ಇದೀಗ ಇಂಥ ಅಧಿಕಾರಿಯನ್ನು ವರ್ಗಾವಣೆ ಮಾಡಿರುವುದು ಈ ಪ್ರದೇಶದ ಜನರಿಗೆ ಆಕ್ರೋಶ ತರಿಸಿದೆ. ಸಿಎಂ ಕುಮಾರಸ್ವಾಮಿ ಅವರಿಗೆ ವರ್ಗಾವಣೆಯನ್ನು ಹಿಂಪಡೆಯುವಂತೆ ಆಗ್ರಹಿಸುತ್ತಿದ್ದಾರೆ.
ಶೇಮ್ ಆನ್ ಕರ್ನಾಟಕ ಸರಕಾರ ಅಭಿಯಾನ:
ಎಸಿಎಫ್ ರವೀಂದ್ರ ಅವರಂಥ ಪ್ರಾಮಾಣಿಕ, ದಕ್ಷ ಅಧಿಕಾರಿಯನ್ನು ಸುಖಾ ಸುಮ್ಮನೆ ವರ್ಗಾಯಿಸಿರುವುದಕ್ಕೆ ಸಾರ್ವಜನಿಕರು ಕರ್ನಾಟಕ ಸರಕಾರ ವಿರುದ್ದ #ShameonKarnatakaGovernment ಎಂಬ ಅಭಿಯಾನ ಆರಂಭಿಸಿದ್ದಾರೆ. ಸರಕಾರಿ ಭೂಮಿಯ ಒತ್ತುವರಿ ತಡೆಯುತ್ತಿದ್ದ ಈ ದಕ್ಷ ಅಧಿಕಾರಿಗೆ ರಾಜ್ಯೋತ್ಸವ ಪ್ರಶಸ್ತಿ ನೀಡಿ ಪ್ರೋತ್ಸಾಹಿಸುವ ಬದಲು, ಶಿಕ್ಷೆ ನೀಡುತ್ತಿದೆ, ಎಂದು ತುರಹಳ್ಳಿ ಫಾರೆಸ್ಟ್ ಸುತ್ತಮುತ್ತಲಿನ ಪ್ರದೇಶದ ಮಂದಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈಗಾಗಲೇ ಬೆಂಗಳೂರಿನಲ್ಲಿ ಅರಣ್ಯ ಪ್ರದೇಶ ಕಡಿಮೆಯಾಗಿದ್ದು, ಒತ್ತುವರಿ ಭೂಮಿಯನ್ನು ತೆರವುಗೊಳಿಸುವುದು ಅನಿವಾರ್ಯವಾಗಿದೆ. ಜೈವಿಕ ವೈವಿಧ್ಯವನ್ನು ಉಳಿಸಲು ಪಣ ತೊಟ್ಟಿದ್ದ ಅಧಿಕಾರಿಯೊಬ್ಬರಿಗೆ ವರ್ಗಾವಣೆ ಶಿಕ್ಷೆ ವಿಧಿಸಿರುವುದಕ್ಕೆ ಊಫರ್‌ವೇಸ್ ಕ್ಷೇಮಾಭಿವೃದ್ಧಿ ಸಂಘವೂ ಆಕ್ರೋಶ ವ್ಯಕ್ತಪಡಿಸಿದೆ.
ಅಧಿಕಾರರೂಢ ಕಾಂಗ್ರೆಸ್ ಶಾಸಕರ ಒತ್ತಾಯದಿಂದ ಮುಖ್ಯಮಂತ್ರಿ ಇವರನ್ನು ವರ್ಗಾಯಿಸಿದ್ದಾರೆಂಬ ಆರೋಪವೂ ಕೇಳಿ ಬರುತ್ತಿದೆ. ಜೆಪಿ ನಗರ ಬ್ರಿಗೇಡ್ ಮಿಲೇನಿಯಮ್ ಸಮೀಪದಲ್ಲಿದ ಮಾಜಿ ಕಾರ್ಪೋರೇಟರ್ ಅವರು ಕಬಳಿಸಿದ ಜಾಗವನ್ನೂ ರವೀಂದ್ರ ತೆರವುಗೊಳಿಸಿದ್ದರು, ಎಂಬುವುದು ಇಲ್ಲಿ ಮುಖ್ಯ.
ಎರಡು ವರ್ಷದ ಅಧಿಕಾರದಲ್ಲಿ ರವೀಂದ್ರ ಅವರು ತೆರವುಗೊಳಿಸಿದ ಜಾಗ:
- ತುರಹಳ್ಳಿ ಗ್ರಾಮದ ಸರ್ವೆ ನಂ.170ರಲ್ಲಿ ಎಂಟು ಎಕರೆ ಜಾಗ
- ಸರ್ವೇ ನಂ.43ರಲ್ಲಿ 43 ಎಕರೆ.
- ಸುಂಕದಕಟ್ಟೆಯಲ್ಲಿ ಮೋಹನ್ ಕೊಂಡಾಜೆ ಅವರ ಮಾಲೀಕತ್ವದ ನಟರಾಜ ಗುರುಕುಲಕ್ಕೆ ಸೇರಿದ್ದ 10 ಎಕರೆ ಜಾಗ ಸೇರಿ ಅತಿಕ್ರಮಿಸಿದ ಒಟ್ಟು 57 ಎಕರೆ ಜಾಗ.
- ತುರಹಳ್ಳಿಯ ಮೈಲಸಂದ್ರದ ಸರ್ವೆ ನಂ.26ರಲ್ಲಿ 3 ಎಕರೆ.
- ಬಿಎಂ ಕಾವಲ್‌ನ ಸರ್ವೆ ನಂ.163ರಲ್ಲಿ 20 ಗುಂಟೆ
- ಅಲ್ಲದೇ ತುರಹಳ್ಳಿ ಅರಣ್ಯ ಪ್ರದೇಶದ ಒತ್ತುವರಿ ಜಾಗಕ್ಕಿದ್ದ ನಿಷೇಧಾಜ್ಞೆಯನ್ನು ತೆರವು ಗೊಳಿಸಿ, ಈ ಜಾಗದಲ್ಲಿ ಬೇಲಿ ಹಾಕಿ, ಕಾಡನ್ನು ರಕ್ಷಿಸಲು, ವಿಸ್ತರಿಸಲು ಅಗತ್ಯ ಕ್ರಮ ಕೈಗೊಂಡಿದ್ದರು.