ರೈತರ ಸಾವು ನೋವು ಆಗದಂತೆ ಅರಣ್ಯ ಇಲಾಖೆ ಸೂಕ್ತ ಕ್ರಮ ವಹಿಸಲು ಸೂಚನೆ
ರೈತರ ಸಾವು ನೋವು ಆಗದಂತೆ ಅರಣ್ಯ ಇಲಾಖೆ ಸೂಕ್ತ ಕ್ರಮ ವಹಿಸಲು ಶಾಸಕ ಅನಿಲ್ ಚಿಕ್ಕಮಾದು ಸೂಚಿಸಿದರು.
ಸರಗೂರು : ರೈತರ ಸಾವು ನೋವು ಆಗದಂತೆ ಅರಣ್ಯ ಇಲಾಖೆ ಸೂಕ್ತ ಕ್ರಮ ವಹಿಸಲು ಶಾಸಕ ಅನಿಲ್ ಚಿಕ್ಕಮಾದು ಸೂಚಿಸಿದರು.
ಸೋಮವಾರ ಜಮೀನಿನಲ್ಲಿ ಕೆಲಸ ಮಾಡುತ್ತಿದ್ದ ರೈತ ಬಾಲಾಜಿ ನಾಯಕನ ಮೇಲೆ ಹುಲಿ ದಾಳಿ ಮಾಡಿ ಮೃತಪಟ್ಟ ಹಿನ್ನೆಲೆ ತಡರಾತ್ರಿ ಸ್ಥಳಕ್ಕೆ ಆಗಮಿಸಿದ ಅವರು, ಮೃತನ ಕುಟುಂಬಕ್ಕೆ ಸಾಂತ್ವನ ಹೇಳಿದರು,
ನಂತರ ಮಾತನಾಡಿದ ಅವರು, ಅರಣ್ಯಾಧಿಕಾರಿಗಳು ಸಮರ್ಪಕವಾಗಿ ಕರ್ತವ್ಯ ನಿರ್ವಹಿಸದ ಹಿನ್ನೆಲೆ ಇಂತಹ ಅವಘಡ ಸಂಭವಿಸುತ್ತಿವೆ. ಹೀಗಾಗಿ ಕೂಡಲೇ ಅರಣ್ಯ ಇಲಾಖೆ ಎಚ್ಚೆತ್ತುಕೊಂಡು ಆನೆ ಕಾವಲುಗಾರರನ್ನು ನೇಮಿಸಿಕೊಳ್ಳಬೇಕು. ಕಾಡಾನೆ ಹಾಗೂ ಹುಲಿ ಹಾವಳಿ ತಡೆಗೆ ಸೂಕ್ತ ಕ್ರಮವಹಿಸಬೇಕು ಎಂದು ತಾಕೀತು ಮಾಡಿದರು.
ಅರಣ್ಯಾಧಿಕಾರಿಗಳು ಮೃತನ ಕುಟುಂಬಕ್ಕೆ ಸಾಂತ್ವನ ಹೇಳಿ ಇಲಾಖೆ ವತಿಯಿಂದ 15 ಲಕ್ಷ ರು. ಚೆಕ್ನ್ನು ಶಾಸಕ ಅನಿಲ್ ಚಿಕ್ಕಮಾದು ಅವರಿಂದ ಬಾಲಾಜಿ ನಾಯಕ ಪತ್ನಿ ಜ್ಯೋತಿ ಬಾಯಿ ಅವರಿಗೆ ಹಸ್ತಾಂತರಿಸಿದರು.
ಜಿಪಂ ಮಾಜಿ ಸದಸ್ಯ ಪಿ. ರವಿ ಮಾತನಾಡಿ, ಮಾನವ-ಪ್ರಾಣಿ ಸಂಘರ್ಷ ನಿರಂತರವಾಗಿದ್ದು, ಸರ್ಕಾರ ಕೂಡಲೇ ಕಡಿವಾಣ ಹಾಕಬೇಕು. ತಪ್ಪಿದ್ದಲ್ಲಿ ಕಾಡು ಪ್ರಾಣಿಗಳು, ಮನುಷ್ಯರಿಬ್ಬರಿಗೂ ತೊಂದರೆಯಾಗಲಿದೆ. ಅಧಿಕಾರಿಗಳು ಸರ್ಕಾರಕ್ಕೆ ರೈತರ ಕಷ್ಟವನ್ನು ವಿವರಿಸಿ, ಅನುದಾನ ಪಡೆದು ಹಾವಳಿ ತಡೆಗೆ ಶಾಶ್ವತ ಪರಿಹಾರ ಕಂಡುಕೊಳ್ಳಬೇಕು ಎಂದು ಸಲಹೆ ನೀಡಿದರು.
ರೈತ ಮುಖಂಡರಾದ ಅಣ್ಣಯ್ಯಸ್ವಾಮಿ, ಭೀಮ್ ರಾಜ್, ಮೊಳೆಯೂರು ಹರಿದಾಸ್, ಡಿ.ಪಿ. ನಟರಾಜ್, ಪ್ರಕಾಶ್ ಚಂದ್ರು, ಬೆಟ್ಟಸ್ವಾಮಿ, ನಾರಾಯಣ ನಾಯ್ಕ, ಹೇಮಾಜಿ ನಾಯಕ್, ರಮೇಶ್, ರಾಮು, ಚಂದ್ರ, ಶಿವಾಜಿನಾಯ್ಕ, ಸುಂದರ, ಸುರೇಶ್, ಸಿದ್ದಯ್ಯ ಸಿಎಫ್ ಒ ಡಾ.ಪಿ. ರಮೇಶ್ ಕುಮಾರ್, ಎಸಿಎಫ್ ಪರಮೇಶ್, ಡಿವೈಎಸ್ ಪಿ ಗೋಪಾಲಕೃಷ್ಣ, ಸರಗೂರು ಪೊಲೀಸ್ ಠಾಣೆ ಎಸ್ಐ ಲಕ್ಷ್ಮಿಕಾಂತ್, ಎಸ್ ಐ ನಂದೀಶ್ ಕುಮಾರ್, ಆರ್ ಎಫ್ ಒಗಳಾದ ಕೆ. ಅಮೃತ್, ನಾರಾಯಣ್ ಇದ್ದರು.
ಬಿ. ಮಟಕೆರೆ ಪ್ರಾಥಮಿಕ ಆರೋಗ್ಯ ಕೇಂದ್ರಲ್ಲಿ ವೈದ್ಯಾಧಿಕಾರಿ ಡಾ. ಚಂದ್ರಶೇಖರ್ ಮರಣೋತ್ತರ ಪರೀಕ್ಷೆ ನಡೆಸಿದರು. ಮೃತದೇಹವನ್ನು ವಾರಸುದಾರರಿಗೆ ಒಪ್ಪಿಸಿದ ನಂತರ ಶವಸಂಸ್ಕಾರ ನಡೆಸಲಾಯಿತು. ಈ ಕುರಿತು ಸರಗೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ತಹಸೀಲ್ದಾರ್ ಪರಶಿವಮೂರ್ತಿ, ಎಸ್ ಐ ನಂದೀಶ್ ಕುಮಾರ್ ಇದ್ದರು.