ಬಾಗಲಕೋಟೆ: ಒಂದು ವಾರ ಕಳೆದ್ರೂ ಪತ್ತೆಯಾಗದ ಚಿರತೆ, ಗ್ರಾಮಸ್ಥರಲ್ಲಿ ಆತಂಕ
* ಒಂದು ವಾರದಿಂದ ಚಿರತೆ ಹಿಡಿಯೋಕೆ ಅರಣ್ಯ ಇಲಾಖೆ ಸಿಬ್ಬಂದಿ ಸುಸ್ತೋ ಸುಸ್ತು
* ಬಾಗಲಕೋಟೆ ಜಿಲ್ಲೆಯ ಜಮಖಂಡಿ ತಾಲೂಕಿನ ಕುಂಬಾರಹಳ್ಳ ಗ್ರಾಮದಲ್ಲಿ ಕಾಣಿಸಿಕೊಂಡ ಚಿರತೆ
* ಚಿರತೆಗಾಗಿ ಜಾತಕ ಪಕ್ಷಿಯಂತೆ ಕಾಯುತ್ತಿರುವ ಅರಣ್ಯ ಇಲಾಖೆ ಸಿಬ್ಬಂದಿ
ಬಾಗಲಕೋಟೆ(ಜೂ.04): ಒಂದು ವಾರ ಕಳೆಯುತ್ತಾ ಬಂದರೂ ಚಿರತೆ ಪತ್ತೆಯಾಗದ ಹಿನ್ನೆಲೆಯಲ್ಲಿ ಗ್ರಾಮಸ್ಥರಲ್ಲಿ ಮತ್ತಷ್ಟು ಆತಂಕ ಮೂಡಿಸಿದ ಘಟನೆ ಜಿಲ್ಲೆಯ ಜಮಖಂಡಿ ತಾಲೂಕಿನ ಕುಂಬಾರಹಳ್ಳ ಗ್ರಾಮದಲ್ಲಿ ನಡೆದಿದೆ.
ಕುಂಬಾರಹಳ್ಳ ಗ್ರಾಮದಲ್ಲಿ ಕಳೆದ ವಾರ ಗುರುವಾರ ಚಿರತೆ ಕಾಣಿಸಿಕೊಂಡಿತ್ತು. ಹೀಗಾಗಿ ಚಿರತೆಯನ್ನ ಸೆರೆಹಿಡಿಯಲು ಅರಣ್ಯ ಇಲಾಖೆ ಸಜ್ಜಾಗಿ ನಿಂತಿದೆ. ಕಳೆದೊಂದು ವಾರದಿಂದ 6 ಕಡೆಗೆ ಬೋನ್ ಸಹಿತ, 15 ಕಡೆಗೆ ಸಿಸಿ ಕ್ಯಾಮರಾ ಇಟ್ಟು ಚಿರತೆಗಾಗಿ ಅರಣ್ಯ ಇಲಾಖೆ ಸಿಬ್ಬಂದಿ ಕಾಯುತ್ತಿದೆ. ಚಿರತೆಯನ್ನ ಸೆರೆಹಿಡಿಯಲು ಅರಣ್ಯ ಇಲಾಖೆ ಡ್ರೋನ್ ಕ್ಯಾಮೆರಾ ಅಳವಡಿಸಿದೆ. ಆದ್ರೂ ಕೂಡ ಚಿರತೆ ಕಾಣಿಸುತ್ತಿಲ್ಲ.
ಕನಕಗಿರಿ: ಕರಡಿಗುಡ್ಡದಲ್ಲಿ ಬೋನಿಗೆ ಬಿದ್ದ ಚಿರತೆ
ಬೆಳಗಾವಿಯ ಮಿನಿ ಪ್ರಾಣಿ ಸಂಗ್ರಹಾಲಯದ ವೈದ್ಯೆ ನಿರುಪಮಾ ಅವರು ಅರವಳಿಕೆ ಗನ್ ಸಹಿತ ಅರಣ್ಯ ಇಲಾಖೆ ಸಿಬ್ಬಂದಿ ಜೊತೆ ಕಾರ್ಯಾಚರಣೆಗಿಳಿದಿದ್ದಾರೆ. ಬೆಳಗಾವಿ, ನೇಸರಗಿ, ಮುಧೋಳ, ಜಮಖಂಡಿ, ಬೀಳಗಿ ಸೇರಿದಂತೆ 25ಕ್ಕೂ ಅಧಿಕ ಸಿಬ್ಬಂದಿ ಕಾರ್ಯಾಚರಣೆಯಲ್ಲಿ ಭಾಗಿಯಾಗಿದ್ದಾರೆ.
ಬಾಗಲಕೋಟೆ ಎಸ್ಪಿ ಕಚೇರಿಯಿಂದ ಡ್ರೋನ್ ಕ್ಯಾಮರಾ ತರಿಸಿ 1ಕಿಮೀ ವ್ಯಾಪ್ತಿಯಲ್ಲಿ ವೀಕ್ಷಿಸಿದರೂ ಚಿರತೆ ಮಾತ್ರ ಕಾಣಿಸುತ್ತಿಲ್ಲ. ಸಿಬ್ಬಂದಿ ಡಬಲ್ ಬ್ಯಾರಲ್ ಗನ್ ಮೂಲಕ ಪ್ರಾಯೋಗಿಕವಾಗಿ ಗಾಳಿಯಲ್ಲಿ ಗುಂಡು ಹಾರಿಸಿದರೂ ಚಿರತೆ ಪತ್ರೆಯಾಗಿಲ್ಲ. ಇದರಿಂದ ಗ್ರಾಮಸ್ಥರಲ್ಲಿ ಮತ್ತಷ್ಟು ಆತಂಕ ಹೆಚ್ಚಾಗಿದೆ.