Mysuru : ಚಿರತೆ ದಾಳಿ ಹಿನ್ನೆಲೆ ಮುನ್ನೆಚ್ಚರಿಕೆ ವಹಿಸಿ
ಇತ್ತೀಚಿನ ದಿನಗಳಲ್ಲಿ ಜನರ ಮೇಲೆ ಚಿರತೆ ದಾಳಿ ಹೆಚ್ಚಾಗಿರುವ ಹಿನ್ನೆಲೆ ಪಟ್ಟಣದ ಪೊಲೀಸರು ಸಾರ್ವಜನಿಕರ ಸುರಕ್ಷತೆಯ ಹಿತದೃಷ್ಟಿಯಿಂದ ತಿಳುವಳಿಕೆಯ ಜೊತೆಗೆ ಮುನ್ನೆಚ್ಚರಿಕೆಯನ್ನು ನೀಡಿದ್ದಾರೆ.
ಟಿ. ನರಸೀಪುರ : ಇತ್ತೀಚಿನ ದಿನಗಳಲ್ಲಿ ಜನರ ಮೇಲೆ ಚಿರತೆ ದಾಳಿ ಹೆಚ್ಚಾಗಿರುವ ಹಿನ್ನೆಲೆ ಪಟ್ಟಣದ ಪೊಲೀಸರು ಸಾರ್ವಜನಿಕರ ಸುರಕ್ಷತೆಯ ಹಿತದೃಷ್ಟಿಯಿಂದ ತಿಳುವಳಿಕೆಯ ಜೊತೆಗೆ ಮುನ್ನೆಚ್ಚರಿಕೆಯನ್ನು ನೀಡಿದ್ದಾರೆ.
ಎಸ್‌ಐ ತಿರುಮಲ್ಲೇಶ್ ಅವರು ಪ್ರಕಟಣೆ ನೀಡಿ, ಇತ್ತೀಚಿನ ದಿನಗಳಲ್ಲಿ ಜನರ ಮೇಲೆ ಚಿರತೆ (Leopard) ದಾಳಿ ಹೆಚ್ಚಾಗಿದೆ, ತಾಲೂಕಿನಲ್ಲೂ ಈಗಾಗಲೇ ಇಬ್ಬರು ಚಿರತೆ ದಾಳಿಗೆ ಬಲಿಯಾಗಿರುವುದರಿಂದ ಸಾರ್ವಜನಿಕರು ಮುಸ್ಸಂಜೆಯ ನಂತರ ಪಟ್ಟಣದ ಹೊರವಲಯ ಹಾಗೂ ಜಮೀನುಗಳ (Land) ಕಡೆ ಒಬ್ಬಂಟಿಗರಾಗಿ ಹೋಗಬಾರದೆಂದು ತಿಳಿಸಿದ್ದಾರೆ.
ರಾತ್ರಿ ಮನೆಯೊಳಗೇ ಇರಿ:
ರಾತ್ರಿ ವೇಳೆಯಲ್ಲಿ ಪಟ್ಟಣದ ಹೊರವಲಯದಲ್ಲಿ ಸುತ್ತಾಡುವುದು, ಮದ್ಯಪಾನ ಮಾಡಿಕೊಂಡು ಗುಂಪು ಸೇರುತ್ತಿರುವುದು, ಮನೆಯ ಹೊರಗಡೆ ಪಡಸಾಲೆಗಳಲ್ಲಿ ಮಲಗುವುದು ಸೂಕ್ತವಲ್ಲ, ಕಾಡು ಪ್ರಾಣಿಗಳು ಆ ಸಂದರ್ಭದಲ್ಲಿ ನಿಮ್ಮ ಮೇಲೆ ದಾಳಿ ನಡೆಸಬಹುದು, ಆದ್ದರಿಂದ ಸಂಜೆ ಮತ್ತು ರಾತ್ರಿ ವೇಳೆಯಲಿ ಮನೆಯೊಳಗೆ ಇರಲು ಸೂಚಿಸಿದ್ದಾರೆ.
ಪಟ್ಟಣದ ಲಿಂಕ್ ರಸ್ತೆ ಮತ್ತು ಭಗವಾನ್ ಚಿತ್ರಮಂದಿರ ವೃತ್ತದಿಂದ ಮುರುಗನ್ ಚಿತ್ರಮಂದಿರದವರೆಗೆ ರಸ್ತೆ ಬದಿ ವ್ಯಾಪಾರಿಗಳು ಸಾರ್ವಜನಿಕರ ಸಂಚಾರಕ್ಕೆ ಅಡಚಣೆ ಉಂಟಾಗದ ರೀತಿಯಲ್ಲಿ ಪೊಲೀಸರೊಂದಿಗೆ ಕೈಜೋಡಿಸಿ ಸ್ವ ಇಚ್ಛೆಯಿಂದ ರಸ್ತೆ ಬದಿ ತೆರವುಗೊಳಿಸಿ ವ್ಯಾಪಾರ ವಹಿವಾಟು ಸುಸೂತ್ರವಾಗಿ ನಡೆಸಿಕೊಂಡು ಹೋಗುತ್ತಿದ್ದು, ಈ ಬಗ್ಗೆ ಪೊಲೀಸರು ಅಭಿನಂದನೆಗಳನ್ನು ತಿಳಿಸಿದ್ದಾರೆ. ಮುಂದಿನ ದಿನಗಳಲ್ಲಿ, ರಸ್ತೆ ಬದಿ ವ್ಯಾಪಾರಸ್ಥರು ಮತ್ತು ತಳ್ಳುವ ಗಾಡಿ ವ್ಯಾಪಾರಸ್ಥರು ಪೊಲೀಸರ ಕರ್ತವ್ಯಕ್ಕೆ ಸಹಕಾರ ನೀಡಬೇಕು ಎಂದು ಅವರು ತಿಳಿಸಿದ್ದಾರೆ.
ಲೈಸನ್ಸ್ ಕಡ್ಡಾಯ:
ಪ್ಯಾಸೆಂಜರ್ ಆಟೋ ರಿಕ್ಷಾ ಚಾಲಕರು ಡ್ರೈವಿಂಗ್ ಲೈಸನ್ಸ್, ಪರ್ಮಿಟ್, ಇನ್ಸೂರೆನ್ಸ್ ಅನ್ನು ಕಡ್ಡಾಯವಾಗಿ ಹೊಂದಿರಬೇಕು, ನಿಗದಿ ಪಡಿಸಿರುವಷ್ಟುಪ್ರಯಾಣಿಕರನ್ನು ಕರೆದುಕೊಂಡು ಹೋಗಬೇಕು, ಒಂದು ವೇಳೆ ಮೋಟಾರ್ ವಾಹನ ಕಾಯ್ದೆಗಳನ್ನು ಉಲಂಘಿಸಿ ಪ್ರಯಾಣಿಕರನ್ನು ಕರೆದೊಯುವ ಆಟೋ ಚಾಲಕರು ಮತ್ತು ಮಾಲೀಕರ ವಿರುದ್ಧ ಕಟ್ಟುನಿಟ್ಟಿನ ಕ್ರಮ ಜರುಗಿಸಲಾಗುವುದು ಎಂದು ಎಚ್ಚರಿಸಿದ್ದಾರೆ.
ಪಟ್ಟಣ ವ್ಯಾಪ್ತಿಯಲ್ಲಿ ಕಟ್ಟಡ ಕಾಮಗಾರಿಗಾಗಿ ಅಕ್ರಮ ಮರಳು ಸಾಗಾಣಿಕೆದಾರರಿಂದ ಮರಳು ಖರೀದಿಸಿ ಕಾನೂನು ಬಾಹಿರ ಚಟುವಟಿಕೆಗಳಿಗೆ ಪೋ›ತ್ಸಾಹಿಸುತ್ತಿರುವುದು ತಿಳಿದು ಬಂದಿದೆ. ಅಂತವರ ವಿರುದ್ದ ಕಳುವು ಮಾಲು ಸ್ವೀಕರಿಸಿದ್ದಾರೆಂದು ಪರಿಗಣಿಸಿ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಎಚ್ಚರಿಸಿದ್ದಾರೆ.
ಕಾಲೇಜಿಗೆ ಬರುವ ಅಪ್ರಾಪ್ತ ವಿದ್ಯಾರ್ಥಿಗಳು ಹೆಲ್ಮೆಚ್ ಧರಿಸದೆ , ಡ್ರೈವಿಂಗ್ ಲೈಸನ್ಸ್ ಹೊಂದದೆ ದ್ವಿಚಕ್ರ ವಾಹನಗಳನ್ನು ಚಾಲನೆ ಮಾಡಿ ಸಂಚಾರಿಸುತ್ತಿರುವುದು ಕಂಡು ಬಂದಿದ್ದು, ಅಂತಹ ಪ್ರಕರಣದಲ್ಲಿ ಮೋಟಾರ್ ಬೈಕ್ ಮಾಲೀಕರ ವಿರುದ್ದ ಮೋಟಾರ್ ವಾಹನ ಕಾಯ್ದೆ ರೀತ್ಯಾ ಕ್ರಮ ಜರುಗಿಸಲಾಗುವುದು ಎಂದು ಅವರು ಎಚ್ಚರಿಕೆ ನೀಡಿದ್ದಾರೆ.
ಗಾರ್ಮೇಂಟ್ಸ್‌ಗೆ ತೆರಳುವ ಮಹಿಳಾ ಕಾರ್ಮಿಕರು ಆಟೋ ರಿಕ್ಷಾಗಳಲ್ಲಿ , ನಿಗದಿ ಪಡಿಸಿರುವುದಕ್ಕಿಂತ ಅಧಿಕ ಸಂಖ್ಯೆಯಲ್ಲಿ ಪ್ರಯಾಣಿಸುತ್ತಿದ್ದು ಇದರಿಂದ ಮುಂದಿನ ದಿನಗಳಲ್ಲಿ ರಸ್ತೆ, ಅಪಘಾತಗಳು ಉಂಟಾಗಿ ಮಹಿಳಾ ಕಾರ್ಮಿಕರ ಸಾವು ನೋವುಗಳು ಉಂಟಾಗಬಹುದಾದ ಸಾಧ್ಯತೆಗಳು ಇರುವುದರಿಂದ ಈ ಬಗ್ಗೆ ಗಮನ ಹರಿಸಿ ಎಚ್ಚರಿಕೆ ವಹಿಸಲು ಕೋರಿದ್ದಾರೆ.
ಇಂತಹ ಪ್ರಕರಣಗಳ ಬಗ್ಗೆ ತಿಳಿದು ಬಂದ ಕೂಡಲೇ ಟೊಲ… ಫ್ರೀ ಹೆಲ್ಪ್‌ಲೈನ್ ನಂಬರ್ - 1930ಗೆ ಕರೆ ಮಾಡಿ ಮಾಹಿತಿ ನೀಡಲು ಕೋರಿದ್ದಾರೆ.
-- ಕಾಳಜಿ ವಹಿಸಿ--
ವಯೋವೃದ್ಧರು ಮತ್ತು ಮಹಿಳೆಯರು ಒಂಟಿಯಾಗಿ ಚಿನ್ನದ ಆಭರಣಗಳನ್ನು ಧರಿಸಿ ಓಡಾಡುವಾಗ ಸೂಕ್ತ ಸುರಕ್ಷತೆಯೊಂದಿಗೆ ಮತ್ತು ಅಪರಿಚಿತರ ಬಗ್ಗೆ ಕಾಳಜಿ ವಹಿಸಲು ಸೂಚಿಸಬೇಕು ಹಾಗೂ ಕಾಲೇಜಿನ ವಿದ್ಯಾರ್ಥಿಗಳು, ವಿದ್ಯಾರ್ಥಿನಿಯರು ಕಾಲೇಜಿನಿಂದ ಹೊರಬಂದು ಹೊರವಲಯಗಳಲ್ಲಿ ದೇವಸ್ಥಾನ, ನದಿ ತೀರಗಳಲ್ಲಿ ಅಸಭ್ಯವಾಗಿ ವರ್ತಿಸುತ್ತಿರುವುದು ಕಂಡು ಬಂದಿದ್ದು. ಅಂತಹವುಗಳನ್ನು ಹತ್ತಿಕ್ಕುವ ಸಲುವಾಗಿ ಪೋಷಕರು ಮತ್ತು ಶಾಲೆಯ ಆಡಳಿತ ಮಂಡಳಿಯ ಗಮನಕ್ಕೆ ತಂದು ನಿಯಮಾನುಸಾರ ಕ್ರಮ ವಹಿಸಲಾಗುವುದು ಎಂದು ಎಸ್‌ಐ ತಿರುಮಲ್ಲೇಶ್ ತಿಳಿಸಿದ್ದಾರೆ.