ಅರಣ್ಯ ಇಲಾಖೆ ನೌಕರರ ಬೇಡಿಕೆ ಈಡೇರಿಕೆಗೆ ಒತ್ತಾಯ
ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಅರಣ್ಯ ಇಲಾಖೆ ನೌಕರರ ಒಕ್ಕೂಟದಿಂದ ಶಿವಮೊಗ್ಗದಲ್ಲಿ ಶಾಸಕ ಎಚ್.ಹಾಲಪ್ಪ ಅವರಿಗೆ ಮನವಿ ಸಲ್ಲಿಸಲಾಯಿತು.
ಸಾಗರ (ಸೆ.30): ಅರಣ್ಯ ಇಲಾಖೆ ನೌಕರರ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಅರಣ್ಯ ಇಲಾಖೆ ನೌಕರರ ಒಕ್ಕೂಟದಿಂದ ಪ್ರವಾಸಿ ಮಂದಿರದಲ್ಲಿ ಶಾಸಕ ಎಚ್.ಹಾಲಪ್ಪ ಅವರಿಗೆ ಮನವಿ ಸಲ್ಲಿಸಲಾಯಿತು.
ಅರಣ್ಯ ಇಲಾಖೆಯ ಮುಂಚೂಣಿ ಸ್ಥಾನದಲ್ಲಿರುವ ಉಪ ವಲಯ ಅರಣ್ಯಾಧಿಕಾರಿಗಳು, ಅರಣ್ಯರಕ್ಷಕ, ಅರಣ್ಯ ವೀಕ್ಷಕರು ದಿನದ 24 ಗಂಟೆಯೂ ನಿಷ್ಠೆಯಿಂದ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಅರಣ್ಯ ರಕ್ಷಣೆ, ಅಭಿವೃದ್ಧಿ ನಿರ್ವಹಣೆ ಕೆಲಸವನ್ನು ಅತ್ಯಂತ ಶ್ರದ್ಧೆಯಿಂದ ಮಾಡಿಕೊಂಡು ಬಂದಿರುವ ನೌಕರರು ಸಾರ್ವಜನಿಕರಿಗೆ ಸರ್ಕಾರದ ಮೂಲಕ ಸಿಗಬಹುದಾದ ಸೌಲಭ್ಯ ತಲಪಿಸುವಲ್ಲಿಯೂ ಯಶಸ್ಸು ಕಂಡಿದ್ದಾರೆ.
ದಿನದ 24 ಗಂಟೆ ಕರ್ತವ್ಯ ನಿರ್ವಹಿಸುವ ಅರಣ್ಯ ಇಲಾಖೆ ನೌಕರ ಸಿಬ್ಬಂದಿ ಹಲವು ವರ್ಷಗಳಿಂದ ವೇತನ ಪರಿಷ್ಕರಣೆಗೆ ಒತ್ತಾಯಿಸುತ್ತಾ ಬಂದಿದ್ದರೂ ಈತನಕ ವೇತನ ಪರಿಷ್ಕರಣೆಯಾಗಿಲ್ಲ. ಬೇರೆ ಇಲಾಖೆಗೆ ಹೋಲಿಕೆ ಮಾಡಿದರೆ ಅರಣ್ಯ ಇಲಾಖೆ ಸಿಬ್ಬಂದಿಗೆ ನೀಡುತ್ತಿರುವ ವೇತನ ತೀರಾ ಕಡಿಮೆಯಾಗಿದೆ ಎಂದು ಮನವಿಯಲ್ಲಿ ಹೇಳಲಾಗಿದೆ.
ಸಮಾನ ಕೆಲಸಕ್ಕೆ ಸಮಾನ ವೇತನ ಎನ್ನುವ ಕಾನೂನು ಇದ್ದರೂ ಅದು ಅರಣ್ಯ ಇಲಾಖೆ ನೌಕರ ಸಿಬ್ಬಂದಿಗೆ ಅನುಕೂಲವಾಗಿಲ್ಲ. ಈ ಹಿನ್ನೆಲೆಯಲ್ಲಿ ಸಮಾನ ಕೆಲಸಕ್ಕೆ ಸಮಾನ ಭತ್ಯೆ ನೀಡುವುದು, ಅರಣ್ಯ ಇಲಾಖೆ ನೌಕರ ಸಿಬ್ಬಂದಿಗೆ ಆರೋಗ್ಯ ಭಾಗ್ಯ ಯೋಜನೆ ಜಾರಿಗೆ ತರುವುದು, ಸಾಗರದಲ್ಲಿ ನಿರ್ಮಾಣಗೊಳ್ಳುತ್ತಿರುವ ಅರಣ್ಯ ಇಲಾಖೆ ನೌಕರರ ಸಮುದಾಯ ಭವನಕ್ಕೆ ಅನುದಾನ ನೀಡುವಂತೆ ಶಾಸಕರಿಗೆ ನೀಡಿದ ಮನವಿಯಲ್ಲಿ ಒತ್ತಾಯಿಸಲಾಗಿದೆ.
ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ
ಈ ಕುರಿತು ಸದನದಲ್ಲಿ ನೌಕರರ ಸಮಸ್ಯೆಗಳ ಮೇಲೆ ಬೆಳಕು ಚೆಲ್ಲುವಂತೆ ಶಾಸಕರಲ್ಲಿ ಮನವಿ ಸಲ್ಲಿಸಲಾಯಿತು. ಒಕ್ಕೂಟದ ಅಧ್ಯಕ್ಷ ಎನ್.ಸಂತೋಷಕುಮಾರ್, ಪ್ರಮುಖರಾದ ವಿಶ್ವಾಸ್, ಅಶೋಕ್, ಸುಧಾ ನಾಯಕ್, ಅಣ್ಣಪ್ಪ, ಸುರೇಶ್, ಮಹೇಶ್, ಶಿವಾನಂದ್, ಪ್ರಮೋದ್ ಕಂಬಾರ್ ಹಾಜರಿದ್ದರು.