ಶಿವಮೊಗ್ಗ(ಏ.13): ಕೊರೋನಾ ವಾರಿಯ​ರ್ಸ್‌ ಎಂದೇ ಗುರುತಿಸಿಕೊಂಡಿರುವ ವೈದ್ಯರು, ವೈದ್ಯಕೀಯ ಸಿಬ್ಬಂದಿ ಮತ್ತು ಪೊಲೀಸರ ವಾಹನಗಳಿಗೆ ಉಚಿತವಾಗಿ ಒಂದು ಲೀಟರ್‌ ಉಚಿತ ಪೆಟ್ರೋಲ್‌ ವಿತರಿಸುವ ಮೂಲಕ ಕೃತಜ್ಞತೆ ಸಲ್ಲಿಸುವ ಕಾರ್ಯವನ್ನು ಶಿವಮೊಗ್ಗದ ಬಾಲರಾಜ್‌ ಅರಸ್‌ ರಸ್ತೆಯಲ್ಲಿರುವ ಸಹ್ಯಾದ್ರಿ ಪೆಟ್ರೋಲ್‌ ಬಂಕ್‌ ಮಾಲೀಕರು ಮಾಡಿದ್ದಾರೆ. 

ಉಚಿತ ಪೆಟ್ರೋಲ್‌ ವಿತರಿಸುವ ಸುದ್ದಿ ತಿಳಿಯುತ್ತಿದ್ದಂತೆಯೇ ಕಾರ್ಯನಿರತ ಸಿಬ್ಬಂದಿ ಪೆಟ್ರೋಲ್‌ಗಾಗಿ ಮುಗಿಬಿದ್ದಿದ್ದರು. ಈ ಬಗ್ಗೆ ಮಾಹಿತಿ ನೀಡಿರುವ ಪೆಟ್ರೋಲ್‌ ಬಂಕ್‌ ಮಾಲೀಕ ಸುಹಾಸ್‌, ಒಂದು ದಿನದ ಮಟ್ಟಿಗೆ ಈ ಸೇವೆ ನೀಡಿದ್ದು, ಕೊರೋನಾ ಕರ್ತವ್ಯನಿರತ ಸಿಬ್ಬಂದಿಗೆ ಇನ್ನಷ್ಟು ನೆರವು ನೀಡುವ ಹಾಗೂ ಬೆಂಬಲ ನೀಡುವ ಉದ್ದೇಶದಿಂದ ಈ ಕ್ರಮಕೈಗೊಳ್ಳಲಾಗಿದೆ ಎಂದು ಹೇಳಿದ್ದಾರೆ. 

ಹೋಂ ಕ್ವಾರಂಟೈನ್‌ಲ್ಲಿದ್ದ ಯುವಕ ಈಜಲು ಹೋಗಿ ಸಾವು

ಸಿಬ್ಬಂದಿ ತಮ್ಮ ಐಡಿ ಕಾರ್ಡ್‌ ತೋರಿಸಿ ಪೆಟ್ರೋಲ್‌ ಪಡೆಯಲು ವ್ಯವಸ್ಥೆ ಮಾಡಲಾಗಿತ್ತು. ಭಾನುವಾರ ಬೆಳಗ್ಗೆ 7 ಗಂಟೆಯಿಂದ 12 ಗಂಟೆವರೆಗೆ ಮಾತ್ರ ಉಚಿತವಾಗಿ ಪೆಟ್ರೋಲ್‌ ವಿತರಿಸಲಾಗಿದೆ. ಮುಂದಿನ ವಾರದಿಂದ ಪಾಲಿಕೆಯ ಪೌರ ಕಾರ್ಮಿಕರು, ಸೆಕ್ಯೂರಿಟಿ ಗಾರ್ಡ್‌ ಹಾಗೂ ಮೆಡಿಸಿನ್‌ ಸೇವೆ ನೀಡುವವರಿಗೆ ಉಚಿತ ಪೆಟ್ರೋಲ್‌ ನೀಡಲು ಯೋಚಿಸಲಾಗಿದೆ. ಈ ಕುರಿತು ಶೀಘ್ರವೇ ದಿನಾಂಕ ದಿನಾಂಕ ಪ್ರಕಟಿಸಲಾಗುವುದು ಎಂದು ತಿಳಿಸಿದ್ದಾರೆ.