ಚಳ್ಳಕೆರೆ [ಸೆ.20]:   ರಾಜ್ಯ ಸರ್ಕಾರ ಕಳೆದ ಆಗಸ್ಟ್‌ ತಿಂಗಳಲ್ಲಿ ಹೊರಡಿಸಿರುವ ನೂತನ ಸುತ್ತೋಲೆಯಂತೆ ಬಿಪಿಎಲ್‌ ಕಾರ್ಡ್‌ಗಳನ್ನು ಪರಿಶೀಲನೆ ನಡೆಸಬೇಕು. ನಿಯಮ ಮೀರಿದ ಮತ್ತು ಕಾನೂನು ಬಾಹಿರವಾಗಿ ಪಡೆದ ಬಿಪಿಎಲ್‌ ಪಡಿತರ ಚೀಟಿಗಳನ್ನು ತಕ್ಷಣವೇ ರದ್ದುಪಡಿಸುವಂತೆ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ಜಿಲ್ಲಾ ಉಪ ನಿರ್ದೇಶಕ ಬಿ.ಪಿ.ಮಧುಸೂದನ್‌ ಕಟ್ಟುನಿಟ್ಟಿನ ಸೂಚನೆ ನೀಡಿದರು.

ಇಲ್ಲಿನ ತಾಲೂಕು ಕಚೇರಿ ಸಭಾಂಗಣದಲ್ಲಿ ತಾಲೂಕು ನ್ಯಾಯಬೆಲೆ ಅಂಗಡಿ ಮಾಲೀಕರು, ಸಹಕಾರಿ ಸಂಘದ ಕಾರ್ಯದರ್ಶಿಗಳಿಗೆ ಕೆವೈಸಿ ಬಯೋಸಂಗ್ರಹಣೆ ಕುರಿತು ಆಯೋಜಿಸಿದ್ದ ಸಭೆಯಲ್ಲಿ ಅವರು ಮಾತನಾಡಿದರು.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ರಾಜ್ಯ ಸರ್ಕಾರ ಕಳೆದ ಹಲವಾರು ವರ್ಷಗಳಿಂದ ಬಡತನ ರೇಖೆಗಿಂತ ಕೆಳಗಿನ ಬಡ ಕುಟುಂಬಗಳಿಗೆ ಬಿಪಿಎಲ್‌ ಕಾರ್ಡ್‌ಗಳನ್ನು ನೀಡಲು ಆದೇಶ ನೀಡಿದ್ದು, ಇತ್ತೀಚಿನ ದಿನಗಳಲ್ಲಿ ಕೆಲವೆಡೆ ಮಾತ್ರ ಹೆಚ್ಚಿನ ಆದಾಯವಿದ್ದರೂ, ಬಿಪಿಎಲ್‌ ಕಾರ್ಡ್‌ ಪಡೆದಿದ್ದಾರೆ. ಕಾನೂನಿನ ಪ್ರಕಾರ ಸ್ವಂತ ಮನೆ, ಜಮೀನು, ಕಾರು, ಜೀಫ್‌ ಇತರೆ ವಾಹನಗಳನ್ನು ಹೊಂದಿರುವವರು ಬಿಪಿಎಲ್‌ ಕಾರ್ಡ್‌ ಪಡೆಯಲು ಆರ್ಹರಲ್ಲ. ವಾರ್ಷಿಕ ಆದಾಯ 1 ಲಕ್ಷಕ್ಕಿಂತ ಕಡಿಮೆ ಇದ್ದವರು ಮಾತ್ರ ಈ ಸೌಲಭ್ಯ ಪಡೆಯಲು ಸಾಧ್ಯ. ಆದ್ದರಿಂದ ನ್ಯಾಯಬೆಲೆ ಅಂಗಡಿ ಮಾಲೀಕರು ಹಾಗೂ ಸಹಕಾರ ಸಂಘದ ಕಾರ್ಯದರ್ಶಿಗಳು ಮತ್ತೊಮ್ಮೆ ತಮ್ಮ ವ್ಯಾಪ್ತಿಯಲ್ಲಿ ಸರ್ವೆ ನಡೆಸಿ ನಿಯಮ ಮೀರಿ ಪಡೆದಿರುವ ಬಿಪಿಎಲ್‌ ಕಾರ್ಡ್‌ಗಳನ್ನು ಕೂಡಲೇ ರದ್ದುಪಡಿಸಿ ಮಾಹಿತಿ ನೀಡುವಂತೆ ಸೂಚನೆ ನೀಡಿದರು.

ಪ್ರಭಾರ ಆಹಾರ ಶಿರಸ್ತೇದಾರ್‌ ಎಸ್‌.ರಂಗಸ್ವಾಮಿ ಮಾತನಾಡಿ, ಬಿಪಿಎಲ್‌ ಕಾರ್ಡ್‌ ವಿತರಣೆಯಲ್ಲಿ ಆದ ಲೋಪಗಳ ಬಗ್ಗೆ ಈಗಾಗಲೇ ಪ್ರಾರಂಭದ ಪರಿಶೀಲನೆ ನಡೆಸಿದ್ದು, ಈಗಾಗಲೇ ಸಂಬಂಧಪಟ್ಟವರಿಗೆ ಸೂಚನೆ ನೀಡಲಾಗಿದೆ. ಅಧಿಕಾರಿಗಳ ಮಾರ್ಗದರ್ಶನದಂತೆ ಮತ್ತೊಮ್ಮೆ ಎಲ್ಲವನ್ನು ಪರಿಶೀಲನೆ ನಡೆಸಿ ರದ್ದುಪಡಿಸಲಾಗುವುದು. ಹೊಸದಾಗಿ 2544 ಅರ್ಜಿಗಳು ಬಂದಿದ್ದು, ಅವುಗಳ ಪರಿಶೀಲನಾ ಕಾರ್ಯ ಪ್ರಗತಿಯಲ್ಲಿದೆ ಎಂದರು. ಸಭೆಯಲ್ಲಿ ಆಹಾರ ನಿರೀಕ್ಷಕ ಟಿ.ಶಿವಾಜಿ, ಪಿ.ಈರಣ್ಣ ಮತ್ತಿತರರಿದ್ದರು.