ಕೋಲಾರ ಜಿಲ್ಲೆಯ ಶ್ರೀನಿವಾಸಪುರ ತಾಲ್ಲೂಕಿನಲ್ಲಿ ಮೇವು ಕತ್ತರಿಸುವ ಯಂತ್ರಕ್ಕೆ ಸಿಲುಕಿ ಮಹಿಳೆಯೊಬ್ಬರು ದುರ್ಮರಣ ಹೊಂದಿದ್ದಾರೆ. ಮಾಜಿ ಸ್ಪೀಕರ್ ಆರ್. ರಮೇಶ್ ಕುಮಾರ್ ಅವರ ತೋಟದಲ್ಲಿ ಈ ಘಟನೆ ನಡೆದಿದ್ದು, ಪೊಲೀಸರು ತನಿಖೆ ಆರಂಭಿಸಿದ್ದಾರೆ.

ಕೋಲಾರ (ಜು. 4): ಕೋಲಾರ ಜಿಲ್ಲೆಯ ಶ್ರೀನಿವಾಸಪುರ ತಾಲ್ಲೂಕಿನ ಅಡ್ಡಗಲ್ ಗ್ರಾಮದ ಬಳಿ ದಾರುಣ ಘಟನೆ ಸಂಭವಿಸಿದೆ. ಮೇವು ಕತ್ತರಿಸುವ ಯಂತ್ರಕ್ಕೆ ಸಿಲುಕಿ ಮಹಿಳೆ ದುರ್ಮರಣಕ್ಕೆ ಒಳಗಾಗಿರುವ ಘಟನೆ ನಡೆದಿದೆ. ಈ ದುರ್ಘಟನೆ ಮಾಜಿ ವಿಧಾನಸಭಾ ಸ್ಪೀಕರ್ ಆರ್. ರಮೇಶ್ ಕುಮಾರ್ ಅವರಿಗೆ ಸೇರಿದ ತೋಟದ ಪ್ರಾಂಗಣದಲ್ಲಿ ಸಂಭವಿಸಿದೆ ಎಂದು ವರದಿಯಾಗಿದೆ.

ಮೃತ ಮಹಿಳೆ ಮಂಗಮ್ಮ (46) ಎಂದು ಗುರುತಿಸಲಾಗಿದೆ. ಅವರು ತೋಟದಲ್ಲಿ ಮೇವು ಕತ್ತರಿಸುವ ಕೆಲಸದಲ್ಲಿ ತೊಡಗಿದ್ದರು. ಈ ಸಂದರ್ಭದಲ್ಲಿ ಅಚಾನಕ್ಕಾಗಿ ಯಂತ್ರಕ್ಕೆ ಮಹಿಳೆಯ ಉಡುಪು ಸಿಲುಕಿ ನಿಯಂತ್ರಣ ತಪ್ಪಿದ ಯಂತ್ರದೊಳಗೆ ಸಿಲುಕಿದ್ದಾರೆ. ಬಲಿಷ್ಠ ಶಕ್ತಿ ಹೊಂದಿ ಮತ್ತು ಹರಿತವಾದ ಬ್ಲೇಡ್‌ಗಳನ್ನು ಹೊಂದಿರುವ ಯಂತ್ರವು ಮಹಿಳೆಯನ್ನು ಒಳಗೆಳೆದುಕೊಂಡು ದೇಹವನ್ನು ತುಂಡರಿಸಿದೆ. ಮಹಿಳೆ ದೇಹದ ವಿವಿಧೆಡೆ ಮಾಂಸ ಖಂಡಗಳು ಕತ್ತರಿಸಿ ಹೋಗಿದ್ದು, ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎನ್ನಲಾಗಿದೆ.

ಈ ಘಟನೆ ನಡೆದ ತಕ್ಷಣ ತೋಟದವರು ಮತ್ತು ಸ್ಥಳೀಯರು ಗೌನಿಪಲ್ಲಿ ಪೊಲೀಸ್ ಠಾಣೆಗೆ ಮಾಹಿತಿ ನೀಡಿದ್ದಾರೆ. ಪೊಲೀಸ್ ಸಿಬ್ಬಂದಿ ಸ್ಥಳಕ್ಕೆ ದೌಡಾಯಿಸಿ ಪರಿಶೀಲನೆ ನಡೆಸಿದ್ದಾರೆ. ಮರಣೋತ್ತರ ಪರೀಕ್ಷೆಗಾಗಿ ಮೃತದೇಹವನ್ನು ಜಿಲ್ಲಾ ಆಸ್ಪತ್ರೆಗೆ ಸಾಗಿಸಲಾಗಿದೆ. ಈ ಘಟನೆ ಸಂಬಂಧ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ. ತೋಟದಲ್ಲಿ ಸುರಕ್ಷತಾ ಕ್ರಮಗಳ ಕೊರತೆಯೇ ಈ ಘಟನೆಗೆ ಕಾರಣವಾಗಿದೆಯೇ ಎಂಬ ಕುರಿತಾಗಿ ಪೊಲೀಸರು ಚರ್ಚೆ ನಡೆಸುತ್ತಿದ್ದಾರೆ.

ಎಚ್ಚರಿಕೆ ಇಲ್ಲದ ಕೆಲಸಗಳು ಜೀವಕ್ಕೆ ಸಂಕಟ ಉಂಟುಮಾಡಬಹುದೆಂಬುದಕ್ಕೆ ಈ ಘಟನೆ ಮತ್ತೊಂದು ಉದಾಹರಣೆಯಾಗಿದೆ. ಕೃಷಿಕರಿಗೂ ಕಾರ್ಮಿಕರಿಗೂ ಸುರಕ್ಷತಾ ಸಾಧನ ಬಳಕೆಯ ಅಗತ್ಯತೆ ಎಷ್ಟಿದೆ ಎಂದಬುದು ಮತ್ತೆ ಮುನ್ನೆಲೆಗೆ ಬಂದಿದೆ.