Flood Relief : ಮಳೆಹಾನಿ ಕಾಮಗಾರಿ, ಬಾಕಿ ಪರಿಹಾರ ವಿತರಣೆಗೆ ಕ್ರಮವಹಿಸಿ: ವಿ. ಅನ್ಬು ಕುಮಾರ್
ಕಳೆದ ಜುಲೈ, ಆಗಸ್ವ್ ತಿಂಗಳಲ್ಲಿ ಉಂಟಾದ ಅತಿವೃಷ್ಟಿಗೆ ಮನೆ ಹಾನಿ ಸಂಬಂಧ ಪರಿಹಾರ ವಿತರಣೆಗೆ ಬಾಕಿ ಇದ್ದಲ್ಲಿ, ಕೂಡಲೇ ಪರಿಹಾರ ಪಾವತಿಸುವಂತೆ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ವಿ. ಅನ್ಬುಕುಮಾರ್ ಸ್ಪಷ್ಟನಿರ್ದೇಶನ ನೀಡಿದ್ದಾರೆ.
ಮಡಿಕೇರಿ (ಸೆ.10): ಕಳೆದ ಜುಲೈ, ಆಗಸ್ವ್ ತಿಂಗಳಲ್ಲಿ ಉಂಟಾದ ಅತಿವೃಷ್ಟಿಗೆ ಮನೆ ಹಾನಿ ಸಂಬಂಧ ಪರಿಹಾರ ವಿತರಣೆಗೆ ಬಾಕಿ ಇದ್ದಲ್ಲಿ, ಕೂಡಲೇ ಪರಿಹಾರ ಪಾವತಿಸುವಂತೆ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ವಿ. ಅನ್ಬುಕುಮಾರ್ ಸ್ಪಷ್ಟನಿರ್ದೇಶನ ನೀಡಿದ್ದಾರೆ. ನಗರದ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಮಳೆ ಹಾನಿ ಪರಿಹಾರ ಹಾಗೂ ಜಿಲ್ಲೆಯ ಪ್ರಗತಿಗೆ ಸಂಬಂಧಿಸಿದಂತೆ ಶುಕ್ರವಾರ ಮಾಹಿತಿ ಪಡೆದು ಅವರು ಮಾತನಾಡಿದರು. ಮನೆ ಹಾನಿಗೆ ಸಂಬಂಧಿಸಿದಂತೆ ಪರಿಹಾರ ನೀಡುವುದರ ಜೊತೆಗೆ ಬೆಳೆ ಹಾನಿಗೂ ಸರ್ಕಾರದ ನಿರ್ದೇಶನದಂತೆ ಪರಿಹಾರ ವಿತರಿಸಬೇಕು. ಆ ನಿಟ್ಟಿನಲ್ಲಿ ಸಮೀಕ್ಷೆ ಕೈಗೊಳ್ಳುವಂತೆ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಅವರು ಸೂಚಿಸಿದರು.
Kodagu Floods: ಕೊಯನಾಡಿನಲ್ಲಿ ಕಿಂಡಿ ಅಣೆಕಟ್ಟೆಗೆ ಮರದ ದಿಮ್ಮಿಗಳು ಸಿಲುಕಿ ಪ್ರವಾಹ
ಸೆಪ್ಟೆಂಬರ್ ಅಂತ್ಯದ ವೇಳೆಗೆ ಮಳೆ ಕಡಿಮೆಯಾಗುವ ಸಾಧ್ಯತೆ ಇದ್ದು, ಲೋಕೋಪಯೋಗಿ, ಪಂಚಾಯತ್ ರಾಜ್, ಪಿಎಂಜಿಎಸ್‌ವೈ ಹೀಗೆ ವಿವಿಧ ಇಲಾಖಾ ವ್ಯಾಪ್ತಿಯಲ್ಲಿ ಮಳೆ ಹಾನಿ ಕಾಮಗಾರಿಗಳನ್ನು ಕೈಗೊಳ್ಳುವಂತೆ ಸಂಬಂಧಿಸಿದ ಎಂಜಿನಿಯರ್‌ಗೆ ಸೂಚಿಸಿದರು. ಮಳೆಯಿಂದ ಹಾನಿಯಾದ ನಗರ, ಪಟ್ಟಣ ಪ್ರದೇಶದಲ್ಲಿಯೂ ಸಹ ರಸ್ತೆಯ ಗುಂಡಿ ಮುಚ್ಚುವಂತೆ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಅವರು ಸೂಚಿಸಿದರು.ಪ್ರಾಕೃತಿಕ ವಿಕೋಪ ಎದುರಿಸುವ ನಿಟ್ಟಿನಲ್ಲಿ ಎಲ್ಲಾ ಹಂತದ ಅಧಿಕಾರಿಗಳು ತಂಡವಾಗಿ ಕಾರ್ಯನಿರ್ವಹಣೆ ಹಾಗೂ ಪರಿಹಾರ ಕೇಂದ್ರಗಳಲ್ಲಿ ಸಮರ್ಪಕ ನಿರ್ವಹಣೆ ಜೊತೆಗೆ ಆಹಾರ ಕಿಟ್ಗಳನ್ನು ವಿತರಿಸಲಾಗಿರುವುದಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು.
ಅಂಗನವಾಡಿ ತೆರೆಯಲು ಸೂಚನೆ: 2018 ರಲ್ಲಿ ಸುರಿದ ಧಾರಾಕಾರ ಮಳೆಯಿಂದಾಗಿ ಮನೆ ಕಳೆದುಕೊಂಡವರಿಗೆ ಈಗಾಗಲೇ ಜಂಬೂರು, ಮದೆನಾಡು, ಕರ್ಣಂಗೇರಿ, ಹಾಕತ್ತೂರು, ಗಾಳಿಬೀಡು ಬಳಿ ಮನೆ ಹಸ್ತಾಂತರಿಸಲಾಗಿದೆ. ಆದರೆ ಜಂಬೂರಿನಲ್ಲಿ ಇದುವರೆಗೆ ಅಂಗನವಾಡಿ ಆರಂಭಿಸದಿರುವುದಕ್ಕೆ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಅವರು ತೀವ್ರ ಅತೃಪ್ತಿ ವ್ಯಕ್ತಪಡಿಸಿದರು. ಈಗಾಗಲೇ ಮನೆ ಹಸ್ತಾಂತರ ಮಾಡಿ 3 ವರ್ಷ ಆಗಿದೆ. ಆದರೆ ಇದುವರೆಗೆ ಅಂಗನವಾಡಿ ಆರಂಭಿಸಿಲ್ಲ. ಮಕ್ಕಳಿಗೆ ಅನ್ಯಾಯ ಮಾಡುವುದು ಸರಿಯೇ ಎಂದು ವಿ.ಅನ್ಬುಕುಮಾರ್ ಪ್ರಶ್ನಿಸಿದರು. ಈ ಕುರಿತು ಮಾತನಾಡಿದ ಜಿಲ್ಲಾಧಿಕಾರಿ ಡಾ.ಬಿ.ಸಿ. ಸತೀಶ ಅವರು ಸೋಮವಾರದಿಂದಲೇ ಅಂಗನವಾಡಿ ಆರಂಭಕ್ಕೆ ಕ್ರಮವಹಿಸಲಾಗುವುದು ಎಂದರು. ಬೆಳೆ ಪರಿಹಾರ ನೀಡುವ ನಿಟ್ಟಿನಲ್ಲಿ ತಂಡ ರಚಿಸಲಾಗಿದ್ದು, ಹೆಚ್ಚಿನ ಹಾನಿಯಾಗಿರುವ ಪ್ರದೇಶಗಳಲ್ಲಿ ಸಮೀಕ್ಷೆ ಕೈಗೊಂಡು ಸರ್ಕಾರದ ನಿರ್ದೇಶನಂತೆ ಬೆಳೆ ಹಾನಿ ಪರಿಹಾರ ವಿತರಿಸಲಾಗುವುದು ಎಂದು ಡಿಸಿ ತಿಳಿಸಿದರು.
ಹಾನಿ ಮಾಹಿತಿ ನೀಡಿದ ಡಿಸಿ: ಮುಂಗಾರು ಸಂದರ್ಭ ಅತಿವೃಷ್ಟಿಯಿಂದಾಗಿ ಇಬ್ಬರ ಮಾನವ ಪ್ರಾಣಹಾನಿಯಾಗಿದ್ದು, 46 ಜಾನುವಾರು ಮೃತಪಟ್ಟಿವೆ. ಲೋಕೋಪಯೋಗಿ ಇಲಾಖೆಗೆ ಸೇರಿದ ರಸ್ತೆ ಮತ್ತು ಸೇತುವೆ ಸಂಬಂಧಿಸಿದಂತೆ 44.18 ಕೋಟಿ, ಪಂಚಾಯತ್ ರಾಜ್ ಎಂಜಿನಿಯರಿಂಗ್ ವಿಭಾಗ ಸೇರಿದಂತೆ ರಸ್ತೆ, ಸೇತುವೆ, ತಡೆಗೋಡೆ ಇತರೆ ಸೇರಿದಂತೆ 19.75 ಕೋಟಿ ರುಪಾಯಿ ನಷ್ಟಉಂಟಾಗಿದೆ. ಹಾಗೆಯೇ ರಾಷ್ಟ್ರೀಯ ಹೆದ್ದಾರಿ ವ್ಯಾಪ್ತಿಯಲ್ಲಿ ರಸ್ತೆ ಮತ್ತು ಸೇತುವೆ ಸೇರಿದಂತೆ 11.73 ಕೋಟಿ ರು. ನಷ್ಟಉಂಟಾಗಿದೆ. ಹಾಗೆಯೇ ಪ್ರಧಾನಮಂತ್ರಿ ಗ್ರಾಮ ಸಡಕ್ ಯೋಜನಾ ವ್ಯಾಪ್ತಿಯ ರಸ್ತೆ ಮತ್ತು ನಾಲ್ಕು ಸೇತುವೆ ಸೇರಿದಂತೆ 4.33 ಕೋಟಿ ರು. ನಷ್ಟಉಂಟಾಗಿದೆ. ಹಾಗೆಯೇ ಸೆÓ್ಕ… ವ್ಯಾಪ್ತಿಯಲ್ಲಿ 2,130 ವಿದ್ಯುತ್ ಕಂಬಗಳು, 137 ವಿದ್ಯುತ್ ಪರಿವರ್ತಕಗಳು, ವಿದ್ಯುತ್ ಮಾರ್ಗ ಸೇರಿದಂತೆ 3.5 ಕೋಟಿ ರುಪಾಯಿ ನಷ್ಟಉಂಟಾಗಿದೆ ಎಂದು ಜಿಲ್ಲಾಧಿಕಾರಿ ಡಾ.ಬಿ.ಸಿ. ಸತೀಶ ಅವರು ಮಾಹಿತಿ ನೀಡಿದರು.
ಹೆಚ್ಚುವರಿ ಜಿಲ್ಲಾಧಿಕಾರಿ ಡಾ. ನಂಜುಂಡೇಗೌಡ ಅವರು ಪ್ರಸಕ್ತ ಸಾಲಿನಲ್ಲಿ ಸುರಿದ ಮಳೆ, ಅತಿವೃಷ್ಟಿಸಂದರ್ಭದಲ್ಲಿ ಜಿಲ್ಲಾಡಳಿತದಿಂದ ಕೈಗೊಂಡಿದ್ದ ಮುಂಜಾಗ್ರತಾ ಕ್ರಮಗಳು, ಪ್ರಾಕೃತಿಕ ವಿಕೋಪ ಸಂಬಂಧ ದೂರು ನಿರ್ವಹಣೆ ಮತ್ತಿತರ ಬಗ್ಗೆ ಮಾಹಿತಿ ನೀಡಿದರು.
2018 ರಲ್ಲಿ ಸುರಿದ ಧಾರಾಕಾರ ಮಳೆಗೆ ಮನೆ ಕಳೆದುಕೊಂಡವರಿಗೆ ಹಲವು ಕಡೆಗಳಲ್ಲಿ ಮನೆ ನಿರ್ಮಿಸಿ ಹಸ್ತಾಂತರಿಸಲಾಗಿದೆ. ಕರ್ಣಂಗೇರಿಯಲ್ಲಿ 35, ಮದೆನಾಡು ಬಳಿ 80, ಗಾಳಿಬೀಡು ಬಳಿ 140, ಬಿಳಿಗೇರಿ ಬಳಿ 22, ಜಂಬೂರು ಬಳಿ 383 ಮನೆ ಹಸ್ತಾಂತರ ಮಾಡಲಾಗಿದೆ. ಉಳಿದಂತೆ ಕೆ.ನಿಡುಗಣೆ ಬಳಿ 76 ಮನೆಗಳ ಹಸ್ತಾಂತರಕ್ಕೆ ಬಾಕಿ ಇದೆ ಎಂದು ಉಪ ವಿಭಾಗಾಧಿಕಾರಿ ಯತೀಶ್ ಉಳ್ಳಾಲ್ ಮಾಹಿತಿ ನೀಡಿದರು.
ಬೆಳೆ ಹಾನಿ ಸಂಬಂಧಿಸಿದಂತೆ ಆನ್‌ಲೈನ್ ಮೂಲಕ ನೋಂದಣಿ ಮಾಡಲಾಗುತ್ತದೆ ಎಂದು ಕೃಷಿ ಇಲಾಖೆ ಜಂಟಿ ನಿರ್ದೇಶಕರಾದ ಶಬಾನಾ ಎಂ.ಷೇಕ್ ಅವರು ಹೇಳಿದರು. ಜಿ.ಪಂ. ಸಿಇಒ ಭಂವರ್ ಸಿಂಗ್ ಮೀನಾ, ಪ್ರತೀ ಮನೆಗೂ ನಲ್ಲಿ ನೀರು ಕಲ್ಪಿಸುವ ನಿಟ್ಟಿನಲ್ಲಿ ಕೈಗೊಳ್ಳಲಾಗಿರುವ ಕಾಮಗಾರಿ ಸಂಬಂಧ ಮಾಹಿತಿ ನೀಡಿದರು. ಅತಿವೃಷ್ಟಿಯಿಂದಾಗಿ ಕಿಂಡಿ ಅಣೆಕಟ್ಟು ಸೇರಿದಂತೆ ಹಲವು ಕಡೆಗಳಲ್ಲಿ ಮರದ ದಿಮ್ಮಿಗಳು ಸಂಗ್ರಹವಾಗಿದ್ದು, ಇದನ್ನು ತೆರವುಗೊಳಿಸುವ ನಿಟ್ಟಿನಲ್ಲಿ ಅಗತ್ಯ ಕ್ರಮ ಕೈಗೊಳ್ಳುವಂತೆ ಅರಣ್ಯ ಇಲಾಖೆ ಅಧಿಕಾರಿಗಳಿಗೆ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಅನ್ಬುಕುಮಾರ್ ಸೂಚಿಸಿದರು.
ಮಡಿಕೇರಿ: NDRF ತಂಡದಿಂದ ಪ್ರವಾಹದಲ್ಲಿ ಸಿಲುಕಿದ್ದ ತಾಯಿ- ಮಗು ರಕ್ಷಣೆ
ಈ ಸಂದರ್ಭದಲ್ಲಿ ಮಾತನಾಡಿದ ಜಿಲ್ಲಾಧಿಕಾರಿ ಡಾ.ಬಿ.ಸಿ.ಸತೀಶ ಅವರು ಅರಣ್ಯ, ಕಂದಾಯ, ಪಂಚಾಯತ್ ರಾಜ್ ಹಾಗೂ ನೀರಾವರಿ ಇಲಾಖೆಗಳ ತಂಡ ರಚಿಸಿ ಮರದ ದಿಮ್ಮಿ ತೆರವಿಗೆ ಕ್ರಮವಹಿಸಲಾಗುವುದು ಎಂದರು. ಈ ಸಂದರ್ಭದಲ್ಲಿ ಮಾತನಾಡಿದ ಉಪ ಅರಣ್ಯ ಸಂರಕ್ಷಣಾಧಿಕಾರಿ ಪೂವಯ್ಯ ಸಾರ್ವಜನಿಕರಿಗೆ ಯಾವುದೇ ರೀತಿ ತೊಂದರೆ ಆಗದಂತೆ ಗಮನಹರಿಸಲಾಗುವುದು ಎಂದರು. ವಿವಿಧ ಇಲಾಖೆ ಅಧಿಕಾರಿಗಳು ಇದ್ದರು.