Asianet Suvarna News Asianet Suvarna News

ರಾಯಚೂರು: ಎಲೆಬಿಚ್ಚಾಲಿಯ ರಾಯರ ಜಪದಕಟ್ಟೆ ಮುಳುಗಡೆ

* ತುಂಗಭದ್ರಾ ನದಿಗೆ 1.40 ಲಕ್ಷ ಕ್ಯುಸೆಕ್‌ ನೀರು ಬಿಡುಗಡೆ
*  ನದಿಪಾತ್ರದ ಹಳ್ಳಿಗಳಲ್ಲಿ ನೆರೆ ಆತಂಕ ಶುರು
*  ಕೃಷ್ಣಾ ನದಿಗೆ 3.50 ಲಕ್ಷ ಕ್ಯುಸೆಕ್‌ ನೀರು

Flood Fear at Sindhanur in Raichur grg
Author
Bengaluru, First Published Jul 28, 2021, 1:35 PM IST

ರಾಯಚೂರು(ಜು.28): ಇಷ್ಟು ದಿನ ಕೃಷ್ಣಾ ನದಿ ಪಾತ್ರದ ಹಳ್ಳಿಗಳ ಜನ ಎದುರಿಸುತ್ತಿರುವ ಪ್ರವಾಹ ಭೀತಿಯು ಇದೀಗ ತುಂಗಭದ್ರಾ ನದಿಪಾತ್ರದ ಹಳ್ಳಿಗಳಿಗೂ ಹಬ್ಬಿದೆ.

ವಿಜಯನಗರ (ಹೊಸಪೇಟೆ) ಜಿಲ್ಲೆಯ ಮುನಿರಾಬಾದ್‌ ತುಂಗಭದ್ರಾ ಜಲಾಶಯದ ಒಳಹರಿವು ಹೆಚ್ಚಿದ ಹಿನ್ನೆಲೆಯಲ್ಲಿ ನದಿಗೆ 1.40 ಲಕ್ಷ ಕ್ಯುಸೆಕ್‌ ನೀರು ಹರಿಸಲಾಗಿದೆ. ಇದರಿಂದ ತುಂಗಭದ್ರಾ ನದಿಪಾತ್ರದ ಹಳ್ಳಿಗಳಲ್ಲಿ ನೆರೆ ಆತಂಕ ಶುರುವಾಗಿದೆ. ತುಂಗಭದ್ರಾ ನದಿ ವ್ಯಾಪ್ತಿಯ ಜಿಲ್ಲೆಯ ಸಿಂಧನೂರು, ಮಾನ್ವಿ ಮತ್ತು ರಾಯಚೂರು ತಾಲೂಕುಗಳ ನೂರಾರು ಹಳ್ಳಿಗಳು ನೆರೆ ಭೀತಿಗೆ ಸಿಲುಕಿವೆ.

ಮಂತ್ರಾಲಯದಲ್ಲಿ ಕಲ್ಯಾಣ ಮಂಟಪಕ್ಕೆ ನುಗ್ಗಿದ ನೀರು: ಮದುವೆಗೆ ಬಂದಿದ್ದವರಿಗೆ ಫಜೀತಿ..!

ನದಿಯಲ್ಲಿ ನೀರು ಹೆಚ್ಚಿನ ಪ್ರಮಾಣದಲ್ಲಿ ಹರಿಯುತ್ತಿರುವುದರಿಂದ ರಾಯಚೂರು ತಾಲೂಕಿನ ಎಲೆಬಿಚ್ಚಾಲಿ ಸಮೀಪದ ರಾಯರ ಜಪದಕಟ್ಟೆಯು ಜಲಾವೃತಗೊಂಡಿದೆ. ಮಂತ್ರಾಲಯದ ಶ್ರೀರಾಘವೇಂದ್ರ ಸ್ವಾಮಿಗಳು ಎಲೆಬಿಚ್ಚಾಲಿ ಸಮೀಪದ ತುಂಗಭದ್ರಾ ತಟದಲ್ಲಿ ಜಪಮಾಡಿದ್ದರಿಂದ ಇಲ್ಲಿ ರಾಯರ ಏಕಶಿಲಾ ಬೃಂದಾವನವಿದೆ. ಇದರ ಜೊತೆಗೆ ಶ್ರೀಗುರುರಾಯರ ಪರಮ ಆಪ್ತ ಶಿಷ್ಯರಾದ ಅಪ್ಪಣ್ಣಾಚಾರ ಅವರು ಸಹ ಇದೇ ಸ್ಥಳದಲ್ಲಿರುವುದರಿಂದ ಈ ಪ್ರದೇಶಕ್ಕೆ ನಿತ್ಯ ನೂರಾರು ಸಂಖ್ಯೆಯಲ್ಲಿ ಭಕ್ತರು ಆಗಮಿಸುತ್ತಿದ್ದರು. ಇದೀಗ ತುಂಗಭದ್ರಾ ನದಿಯಲ್ಲಿ ಪ್ರವಾಹ ಪರಿಸ್ಥಿತಿ ಉಂಟಾಗಿರುವುದರಿಂದ ಈ ಪ್ರದೇಶವು ಜಲಾವೃತಗೊಂಡಿದೆ.

ಕೃಷ್ಣಾ ನದಿಗೆ 3.50 ಲಕ್ಷ ಕ್ಯುಸೆಕ್‌ ನೀರು:

ಕೃಷ್ಣಾ ನದಿ ಪ್ರವಾಹ ಪರಿಸ್ಥಿತಿಯು ದಿನೇ ದಿನೆ ಏರಿಳಿತ ಕಾಣುತ್ತಿದೆ. ಕಳೆದ ಮೂರು ದಿನಗಳಿಂದ 2.8 ಲಕ್ಷ ಕ್ಯುಸೆಕ್‌ ನೀರು ಹರಿಸಲಾಗುತ್ತಿತ್ತು. ಆದರೆ ಈ ಪ್ರಮಾಣವನ್ನು ಮಂಗಳವಾರ ಬೆಳಗ್ಗೆ 3.5 ಲಕ್ಷ ಕ್ಯುಸೆಕ್‌ಗೆ ಏರಿಸಿದೆ. ರಾತ್ರಿ ವೇಳೆಗೆ ನದಿಗೆ ನೀರು ಬಿಡುವ ಪ್ರಮಾಣವು 3.50 ಲಕ್ಷ ಕ್ಯುಸೆಕ್‌ಗೆ ಹೆಚ್ಚಾಗಿದೆ. ನದಿಯಲ್ಲಿ ನೀರಿನ ಪ್ರಮಾಣ ಹೆಚ್ಚಿದ್ದರಿಂದ ಲಿಂಗಸುಗೂರಿನ ಶೀಲಹಳ್ಳಿ ಹಾಗೂ ದೇವದುರ್ಗದ ಹೂವಿನಹೆಡಗಿ ಸೇತುವೆಗಳು ಜಲಾವೃತಗೊಂಡಿವೆ. ಇನ್ನು ದೇವದುರ್ಗ ತಾಲೂಕಿನ ಕೊಪ್ಪರ ಗ್ರಾಮದ ಲಕ್ಷ್ಮೇನರಸಿಂಹಸ್ವಾಮಿ ದೇವಸ್ಥಾನವು ಜಲಮಯಗೊಂಡಿದೆ.
 

Follow Us:
Download App:
  • android
  • ios