ದಾವಣಗೆರೆಯಲ್ಲಿ ಶಿವಾಜಿ ಫ್ಲೆಕ್ಸ್ ವಿವಾದಕ್ಕೆ ಸಂಬಂಧಿಸಿದಂತೆ ಸಚಿವ ಎಸ್.ಎಸ್.ಮಲ್ಲಿಕಾರ್ಜುನ್, ಸತೀಶ್ ಪೂಜಾರಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಮುಸ್ಲಿಮರ ವಾಸಸ್ಥಳದಲ್ಲಿ ಫ್ಲೆಕ್ಸ್ ಹಾಕುವುದು ಸರಿಯಲ್ಲ ಎಂದು ಅವರು ಹೇಳಿದ್ದಾರೆ. ಕೋಮು ಸಾಮರಸ್ಯ ಕದಡುವ ಯತ್ನವನ್ನು ಖಂಡಿಸಿದ್ದಾರೆ.
ದಾವಣಗೆರೆ: ಹಿಂದೂ ಜಾಗರಣ ವೇದಿಕೆ ಮುಖಂಡ ಸತೀಶ್ ಪೂಜಾರಿ ವಿರುದ್ಧ ಸಚಿವ ಎಸ್.ಎಸ್.ಮಲ್ಲಿಕಾರ್ಜುನ್ ಪರೋಕ್ಷ ವಾಗ್ದಾಳಿ ನಡೆಸಿದ್ದಾರೆ. ಮಟ್ಟಿಕಲ್‌ನಲ್ಲಿ ಶಿವಾಜಿ ಫ್ಲೆಕ್ಸ್ ಬದಲಾವಣೆ ವಿಚಾರಕ್ಕೆ ಪ್ರತಿಕ್ರಿಯಿಸಿದ ಎಸ್.ಎಸ್.ಮಲ್ಲಿಕಾರ್ಜುನ್, ಅವನಿಗೆ (ಸತೀಶ್ ಪೂಜಾರಿ) ಮಾಡೋಕೇ ಏನು ಕೆಲಸವಿಲ್ಲ. ಮುಸ್ಲಿಮರು ವಾಸವಾಗಿರುವ ಪ್ರದೇಶದಲ್ಲಿ ಫ್ಲೆಕ್ಸ್ ಹಾಕಬೇಕಾ? ಬೇಕಿದ್ರೆ ನಮ್ಮ ಮನೆ ಮುಂದೆ ಹಾಕಲಿ. ಒಂದು ವೇಳೆ ಅಲ್ಲಿ ಒಬ್ಬ ಮುಸ್ಲಿಂ ವ್ಯಕ್ತಿ ಬಂದಿದ್ರೆ ಅದನ್ನು ದೊಡ್ಡದಾಗಿ ಬಿಂಬಿಸುವ ಪ್ರಯತ್ನ ಮಾಡುತ್ತಿದ್ದರು. ಆದ್ರೆ ಫ್ಲೆಕ್ಸ್ ಹಾಕಿದ ಜಾಗಕ್ಕೆ ಒಬ್ಬ ಮುಸ್ಲಿಂ ವ್ಯಕ್ತಿಯೂ ಬರಲಿಲ್ಲ. ಮುಸ್ಲಿಮರು ಬರಲಿ ಎಂದು ಇವರು ಕಾಯುತ್ತಾ ಕುಳಿತಿದ್ದರು. ಬೇಕಿದ್ರೆ ನಮ್ಮ ಪಾರ್ಕ್‌ಗಳಲ್ಲಿ ಈ ಫ್ಲೆಕ್ಸ್‌ಗಳನ್ನು ಹಾಕಿಕೊಳ್ಳಲಿ. ಸತೀಶ್ ಪೂಜಾರಿ ಯಾವ ಏರಿಯಾದವನು? ಇವನ್ಯಾಕೆ ಮೆಟ್ಟಿಕಲ್‌ಗೆ ಹೋಗಬೇಕು ಎಂದು ಪ್ರಶ್ನೆ ಮಾಡಿದರು.
ಇವರಿಗೆ ಬೇರೆ ಯಾವ ಸ್ಥಳ ಮತ್ತು ದಿನವೇ ಸಿಗಲ್ಲವಾ?
ಮಸೀದಿ ಪಕ್ಕವೇ ಗಣೇಶ ವಿಗ್ರಹ ಪ್ರತಿಷ್ಠಾಪನೆ ಮಾಡಬೇಕಾ? ಮುಸ್ಲಿಮರ ಹಬ್ಬದ ದಿನವೇ ವಿಸರ್ಜನೆ ಮಾಡಬೇಕಾ? ಇವರಿಗೆ ಬೇರೆ ಯಾವ ಸ್ಥಳ ಮತ್ತು ದಿನವೇ ಸಿಗಲ್ಲವಾ ಎಂದು ಸತೀಶ್ ಪೂಜಾರಿ ವಿರುದ್ಧ ಸಚಿವ ಎಸ್.ಎಸ್.ಮಲ್ಲಿಕಾರ್ಜುನ್ ಆಕ್ರೋಶ ಹೊರಹಾಕಿದರು.
ಇವರ ಬಳಿ ಮನವಿ ಎಲ್ಲಾ ಮಾಡಿಕೊಳ್ಳಲ್ಲ. ಒಳಗೆ ಹಾಕಸ್ತೀನಿ ಅಷ್ಟೇ. ಎಲ್ಲರೂ ತಣ್ಣಗೆ ನೆಮ್ಮದಿಯಾಗಿರಬೇಕು ಅನ್ನೋದು ನಮ್ಮ ಉದ್ದೇಶವಾಗಿದೆ. ಕಾಲಕರೆದು ಜಗಳ ಮಾಡಿದ್ರೆ ಸುಮ್ಮಿನರಲ್ಲ. ಮುಸ್ಲಿಂ ಆಗಲಿ ಅಥವಾ ಹಿಂದೂ ಆಗಲಿ, ಈ ರೀತಿ ಮಾಡಿದ್ರೆ ಮಾತ್ರ ಸುಮ್ಮಿನರಲ್ಲ. ಮುಸ್ಲಿಮರು ಮತ್ತು ಹಿಂದೂಗಳು ಸಾಮರಸ್ಯದಿಂದರಬೇಕು ಅಷ್ಟೆ. ನಗರದಲ್ಲಿ ಒಬ್ಬರಿಗಿಬ್ಬರು ಅನೋನ್ಯವಾಗಿ ಜೀವನ ನಡೆಸುತ್ತಿದ್ದಾರೆ. ಎದ್ದ ಕೂಡಲೇ ಒಬ್ಬರ ಮುಖವನ್ನು ಮತ್ತೊಬ್ಬರು ನೋಡಬೇಕು. ಅಣ್ಣ-ತಮ್ಮದಿರಂತೆ ಬದುಕುತ್ತಿದ್ದು, ಅದು ಹಾಗೆಯೇ ಮುಂದುವರಿಯಬೇಕು. 94ರ ಘಟನೆ ಮರುಕಳಿಸೋದು ಬೇಡ ಎಂದು ಹೇಳಿದರು.
ಇದನ್ನೂ ಓದಿ: 'ತಾಕತ್ ಇದ್ರೆ ಅಜಾನ್ ಬ್ಯಾನ್ ಮಾಡಿ..' ಡಿಜೆ ಅನುಮತಿ ಕೋರಿ ಪ್ರತಿಭಟನೆ, ರೇಣುಕಾಚಾರ್ಯ ವಿರುದ್ಧ FIR
ಹಿಂದೂಗಳಾಗಲೀ, ಮುಸ್ಲಿಮರಾಗಲೀ ದಾವಣಗೆರೆಯಲ್ಲಿ ಅಣ್ಣ- ತಮ್ಮಂದಿರಂತೆ ಬಾಳುತ್ತಿದ್ದಾರೆ. ಅದನ್ನು ಹಾಳು ಮಾಡುವುದು ಬೇಡ. 1994ರಲ್ಲಿ ಆಗಿದ್ದನ್ನೆಲ್ಲಾ ನಾವು, ನೀವುಗಳೂ ನೋಡಿದ್ದೇವೆ. ಅಂತಹದ್ದೆಲ್ಲಾ ಮತ್ತೆ ಮರುಕಳಿಸದಂತೆ ನೋಡಿಕೊಳ್ಳುವುದು ನಮ್ಮೆಲ್ಲರ ಜವಾಬ್ದಾರಿ. ಇಂತಹ ಘಟನೆಗಳಿಂದ ಯಾರೂ ರಾಜಕೀಯ ಬೇಳೆ ಬೇಯಿಸಿಕೊಳ್ಳಬಾರದು ಎಂದು ಚಾಟಿ ಬೀಸಿದರು. ಈ ಸಂದರ್ಭ ಮಾಜಿ ಮೇಯರ್ ಕೆ.ಚಮನ್ ಸಾಬ್, ದೂಡಾ ಮಾಜಿ ಅಧ್ಯಕ್ಷ ಅಯೂಬ್ ಪೈಲ್ವಾನ್, ಪಾಲಿಕೆ ಮಾಜಿ ಸದಸ್ಯರಾದ ಜಿ.ಎಸ್. ಮಂಜುನಾಥ ಗಡಿಗುಡಾಳ, ನಾಗರಾಜ, ರಾಘವೇಂದ್ರ ಗೌಡ, ಬೂದಾಳ ಬಾಬು, ಮಾಗಾನಹಳ್ಳಿ ಬಿ.ಕೆ.ಪರಶುರಾಮ ಇತರರು ಇದ್ದರು.
ಶಿವಮೊಗ್ಗದಲ್ಲಿ ಗಣಪತಿ ವಿಸರ್ಜನೆ ವೇಳೆ ಕೋಮು ಸಾಮರಸ್ಯ
ಶಿವಮೊಗ್ಗ ಜಿಲ್ಲೆಯಾದ್ಯಂತ ಸಾವಿರಾರು ಸಂಖ್ಯೆಯಲ್ಲಿ ಗಣಪತಿಯ ವಿಸರ್ಜನೆ ನಡೆದಿದೆ . ಜಿಲ್ಲೆಯ ಹತ್ತಕ್ಕೂ ಹೆಚ್ಚು ಗಣಪತಿ ವಿಸರ್ಜನೆ ವೇಳೆ ಮುಸ್ಲಿಂ ಧರ್ಮಿಯರು ಗಣೇಶನಿಗೆ ಹೂವಿನ ಹಾರ ಹಾಕಿ ಪಾನಿಯಗಳನ್ನು ವಿತರಣೆ ಮಾಡುವ ಮೂಲಕ ಕೋಮು, ಸಾಮರಸ್ಯಕ್ಕೆ ಕಾರಣವಾದ ಘಟನೆಗಳು ನಡೆದಿವೆ. ಗಣಪತಿ ವಿಸರ್ಜನಾ ಮೆರವಣಿಗೆಯಲ್ಲಿ ಆಯಾ ವ್ಯಾಪ್ತಿಯ ಮಸೀದಿಕಮಿಟಿ, ದರ್ಗಾಕಮಿಟಿ, ಈದ್ ಮಿಲಾದ್ ಕಮಿಟಿ ಹಾಗೂ ಮುಸ್ಲಿಂ ಮುಖಂಡರುಗಳು ಗಣೇಶ ಮೂರ್ತಿಗೆ ಹೂವಿನ ಹಾರವನ್ನು ಹಾಕುವ ಮೂಲಕ ಹಾಗೂ ಪಾನೀಯ ಹಾಗೂ ತಿನಿಸುಗಳನ್ನು ಹಂಚುವ ಮೂಲಕ ಸೌಹಾರ್ದತೆ ಮತ್ತು ಭಾವೈಕ್ಯತೆಯನ್ನು ಮೆರೆದಿದ್ದಾರೆ
