ಬೆಂಗಳೂರು(ಫೆ.01): ಬಿಬಿಎಂಪಿ ವ್ಯಾಪ್ತಿಯಲ್ಲಿ ಫ್ಲೆಕ್ಸ್‌ ಬ್ಯಾನರ್‌ ಅಳವಡಿಕೆ ನಿಷೇಧಿಸಲಾಗಿದ್ದರೂ ಶಾಸಕ ಎನ್‌.ಎ.ಹ್ಯಾರಿಸ್‌ ಪುತ್ರ ಮೊಹಮ್ಮದ್‌ ನಲಪಾಡ್‌ ಅವರ ಹುಟ್ಟುಹಬ್ಬಕ್ಕೆ ಜೋಗುಪಾಳ್ಯ ವಾರ್ಡ್‌ ವ್ಯಾಪ್ತಿಯಲ್ಲಿ ಬ್ಯಾನರ್‌ಗಳನ್ನು ಅಳವಡಿಸಿ ನಿಯಮ ಉಲ್ಲಂಘಿಸಿರುವ ಘಟನೆ ಶುಕ್ರವಾರ ನಡೆದಿದೆ.

"

ಅನಧಿಕೃತವಾಗಿ ಬ್ಯಾನರ್‌ ಅಳವಡಿಸಿದ ಹಿನ್ನೆಲೆಯಲ್ಲಿ ಬಿಬಿಎಂಪಿ ಅಧಿಕಾರಿಗಳು ಹಲಸೂರು ಪೊಲೀಸ್‌ ಠಾಣೆಯಲ್ಲಿ ಮೊಹಮ್ಮದ್‌ ನಲಪಾಡ್‌ ಬೆಂಬಲಿಗರ ವಿರುದ್ಧ ಎಫ್‌ಐಆರ್‌ ದಾಖಲಿಸಿದ್ದಾರೆ. ಮಾಹಿತಿ ಸಿಕ್ಕ ಕೂಡಲೇ ಪೂರ್ವ ವಲಯ ಜಂಟಿ ಆಯುಕ್ತೆ ಪಲ್ಲವಿ ಅವರ ನೇತೃತ್ವದಲ್ಲಿ ಫ್ಲೆಕ್ಸ್‌ಗಳನ್ನು ತೆರವುಗೊಳಿಸಲಾಗಿದೆ. ಅಲ್ಲದೆ, ಅನುಮತಿ ಪಡೆಯದೆ ಬಿಬಿಎಂಪಿ ಆಟದ ಮೈದಾನದಲ್ಲಿ ಹುಟ್ಟುಹಬ್ಬ ಆಚರಣೆಗೆ ಹಾಕಲಾಗಿದ್ದ ಪೆಂಡಾಲ್‌, ಧ್ವನಿವರ್ಧಕ ತೆರವಿಗೆ ಸೂಚಿಸಲಾಗಿತ್ತು. 

ಇದಾದ ಬಳಿಕ ಶಾಂತಿನಗರ ವಿಭಾಗದ ಕಾರ್ಯಪಾಲಕ ಅಭಿಯಂತರ ರಾಧಾಕೃಷ್ಣ ಮೈದಾನದಲ್ಲಿ ಹುಟ್ಟುಹಬ್ಬ ಆಚರಣೆಗೆ ಅನುಮತಿ ನೀಡಿದ್ದಾರೆ. ಸೂಚನೆ ನೀಡಿದ್ದರೂ ಅನುಮತಿ ನೀಡಿದ ಅಧಿಕಾರಿ ವಿರುದ್ಧ ಕ್ರಮ ಕೈಗೊಳ್ಳುತ್ತೇವೆ ಎಂದು ಬಿಬಿಎಂಪಿ ಆಯುಕ್ತ ಅನಿಲ್‌ ಕುಮಾರ್‌ ತಿಳಿಸಿದ್ದಾರೆ. ಮೇಯರ್‌ ಗೌತಮ್‌ ಕುಮಾರ್‌ ಅವರು ಪ್ರತಿನಿಧಿಸುವ ಜೋಗುಪಾಳ್ಯ ವಾರ್ಡ್‌ನಲ್ಲೇ ಅಧಿಕಾರಿಗಳು ಈ ರೀತಿ ನಿಯಮ ಉಲ್ಲಂಘಿಸಿರುವುದು ಮೇಯರ್‌ ಕೆಂಗಣ್ಣಿಗೂ ಗುರಿಯಾಗಿದೆ.