ಕಲಬುರಗಿ: ಕಾಳಗಿ ಹಿರೇಮಠಕ್ಕೆ 5 ವರ್ಷದ ಬಾಲಕ ಉತ್ತರಾಧಿಕಾರಿ..!
* ನೀಲಕಂಠಯ್ಯ ಸ್ವಾಮಿ ಹಿರೇಮಠ ಎಂಬ ಬಾಲಕನಿಗೆ ಉತ್ತರಾಧಿಕಾರಿ ಪಟ್ಟ
* ಜೋಳಿಗೆ ಕರದಲ್ಲಿ ಕಮಂಡಲ ಕೊಟ್ಟು ಬಾಲಕನಿಗೆ ಪಟ್ಟಾಧಿಕಾರ ದೀಕ್ಷೆ
* ಕಲಬುರಗಿ ಜಿಲ್ಲೆಯ ಕಾಳಗಿಯ ಸಂಸ್ಥಾನ ಹಿರೇಮಠ
ಕಲಬುರಗಿ(ಜು.15): ಜಿಲ್ಲೆಯ ಕಾಳಗಿಯ ಸಂಸ್ಥಾನ ಹಿರೇಮಠದ ಉತ್ತರಾಧಿಕಾರಿಯಾಗಿ ಐದು ವರ್ಷದ ಬಾಲಕನ ನೇಮಕವಾಗಿದೆ. ಕಲಬುರಗಿ ಜಿಲ್ಲೆಯ ಕಾಳಗಿ ಪಟ್ಟಣದಲ್ಲಿರುವ ಹಿರೇಮಠದ ಮಠದ ಪೀಠಾಧಿಪತಿ ಶಿವಬಸವ ಶಿವಾಚಾರ್ಯ ಸ್ವಾಮೀಜಿ ಕಳೆದ ಸೋಮವಾರ ಹೃದಯಾಘಾತದಿಂದ ಲಿಂಗೈಕ್ಯರಾದ ಹಿನ್ನೆಲೆಯ ಅವರ ಪಾರ್ಥಿವ ಶರೀರದ ಅಂತ್ಯ ಸಂಸ್ಕಾರದ ದಿನವೇ ಮಠಕ್ಕೆ ನೂತನ ಪೀಠಾಧಿಪತಿಗಳನ್ನು ಘೋಷಣೆ ಮಾಡಲಾಯ್ತು.
ನೀಲಕಂಠಯ್ಯ ಸ್ವಾಮಿ ಹಿರೇಮಠ ಎನ್ನುವ ಐದು ವರ್ಷದ ಬಾಲಕನಿಗೆ ಉತ್ತರಾಧಿಕಾರಿ ಪಟ್ಟ ನೀಡಲಾಗಿದೆ. ಈ ಪಟ್ಟಾಧಿಕಾರದಲ್ಲಿ ಹಲವು ಸ್ವಾಮೀಜಿಗಳ ಸಾನ್ನಿಧ್ಯವಿತ್ತು. ಇವರೆಲ್ಲರ ಸಮ್ಮುಖದಲ್ಲಿ ನಿನ್ನೆ ನಡೆದ ಉತ್ತರಾಧಿಕಾರಿ ಪಟ್ಟದ ಪ್ರಕ್ರಿಯೆಯಲ್ಲಿ ಲಿಂಗೈಕ್ಯರಾಗಿರೋ ಸ್ವಾಮೀಜಿ ಅವರ ಪೂರ್ವಾಶ್ರಮದ ಸಹೋದರನ ಪುತ್ರನಿಗೆ ಉತ್ತರಾಧಿಕಾರಿ ಪಟ್ಟ ನೀಡಲಾಗಿದೆ.
ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿ ಶಿರೂರು ಮಠದ ಉತ್ತರಾಧಿಕಾರಿ
ಮಠದ ಉತ್ತರಾಧಿಕಾರಿ ಸ್ಥಾನ ಖಾಲಿ ಬಿಡುವಂತಿಲ್ಲಾ, ಹೀಗಾಗಿ ಬಾಲಕನನ್ನು ಮಠದ ಉತ್ತರಾಧಿಕಾರಿ ಮಾಡಿರೋದಾಗಿ ಸ್ವಾಮೀಜಿಗಳು ಹೇಳುತ್ತಿದ್ದಾರೆ. ಹೊನ್ನ ಕಿರಣಗಿ ಮಠದ ಚಂದ್ರಗುಂಡ ಶಿವಾಚಾರ್ಯರ ಉಸ್ತುವಾರಿಯಲ್ಲಿರುವ ಮಠದಲ್ಲಿ ಉತ್ತರಾಧಿಕಾರಿ ನೇಮಕ ಪ್ರಕ್ರಿಯೆ ಸಾಂಗೋಪಾಂಗವಾಗಿ ನೆರವೇರಿತು. ಗುರುವಿಲ್ಲದೆ ಮಠ ಹಾಗೇ ಬಹುದಿನಗಳ ಕಾಲ ಬಿಡುವಂತಿಲ್ಲ. ಹೀಗಾಗಿ ನೀಲಕಂಠ ದೇವರಿಗೆ ಪಟ್ಟಾಧಿಕಾರ ಜವಾಬ್ದಾರಿ ವಹಿಸಲಾಗಿದೆ ಎಂದು ಮಠದ ಮೂಲಗಳು ಹೇಳಿವೆ.
ಉತ್ತರಾಧಿಕಾರಿ ಪೂಜ್ಯ ನೀಲಕಂಠ ದೇವರಿಗೆ ಶಿವಬಸವೇಶ್ವರ ಸಂಸ್ಥಾನ ಹಿರೇಮಠದ ಮುಂದಿನ ಸಂಪೂರ್ಣ ಜವಾಬ್ದಾರಿ ಒಪ್ಪಿಸಲಾಯ್ತು. ಶ್ರೀಗಳ ಕಿರಿಯ ಸಹೋದರ ಗುರುಪ್ರಸಾದ ಸ್ವಾಮಿಯ ಪುತ್ರ ನೀಲಕಂಠ ಮಹಾಸ್ವಾಮಿಗಳಿಗೆ ಪಟ್ಟಾಧಿಕಾರ ನೀಡುವ ಸಮಾರಂಭದಲ್ಲಿ ನಾಡಿನ ಹರಗುರು ಮೂರ್ತಿಗಳೆಲ್ಲರ ಸಮ್ಮುಖದಲ್ಲಿಯೇ ನಡೆಯಿತು, ಜೋಳಿಗೆ ಕರದಲ್ಲಿ ಕಮಂಡಲವನ್ನು ಕೊಟ್ಟು ಬಾಲಕನಿಗೆ ಪಟ್ಟಾಧಿಕಾರ ದೀಕ್ಷೆ ನೀಡಲಾಯ್ತು.