ಬೆಂಗಳೂರು [ಸೆ.05]:  ಕಳೆದ ಐದು ದಿನಗಳ ಹಿಂದೆ ಪಾದರಾಯನಪುರದ ರಾಜಕಾಲುವೆಯಲ್ಲಿ ಕಾಲು ಜಾರಿ ಬಿದ್ದು ಕೊಚ್ಚಿ ಹೋಗಿದ್ದ ಬಾಲಕ ಮೊಹಮದ್‌ ಝೈನ್‌ ಮೃತದೇಹ ಬುಧವಾರ ರಾಜರಾಜೇಶ್ವರಿ ನಗರದ ಗ್ಲೋಬಲ್‌ ವಿಲೇಜ್‌ ಬಳಿ ರಾಜಕಾಲುವೆಯಲ್ಲಿ ಬುಧವಾರ ಪತ್ತೆಯಾಗಿದೆ.

ಗುಡ್ಡದಹಳ್ಳಿಯ ನಿವಾಸಿಗಳಾದ ಇಮ್ರಾನ್‌ ಶರೀಫ್‌ ಮತ್ತು ಗುಲ್ಷಾನ್‌ ದಂಪತಿ ಪುತ್ರನಾದ ಮೊಹಮದ್‌ ಝೈನ್‌(5) ಮೂರು ದಿನಗಳ ಹಿಂದೆ ಬಾಲಕಿಯೋರ್ವಳ ಜತೆ ಕಸ ಎಸೆಯಲು ಹೋಗಿದ್ದಾಗ ಕಾಲುಜಾರಿ ರಾಜಕಾಲುವೆಗೆ ಬಿದ್ದು ಕೊಚ್ಚಿಹೋಗಿದ್ದ. ಆದರೆ, ಜತೆಗಿದ್ದ ಬಾಲಕಿ ಭಯದಿಂದ ಪೋಷಕರಿಗೆ ಈ ವಿಷಯ ತಿಳಿಸಿರಲಿಲ್ಲ. ಪೋಷಕರು ಮಗನಿಗಾಗಿ ಹುಡುಕಾಡಿ ನಂತರ ಜೆ.ಜೆ.ನಗರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು.

ತನಿಖೆ ಆರಂಭಿಸಿದ ಪೊಲೀಸರು ನಾಪತ್ತೆಯಾದ ಬಾಲಕನ ಮನೆಯ ಸಮೀಪದ ಖಾಸಗಿ ಶಾಲೆಯೊಂದರ ಹೊರಭಾಗದಲ್ಲಿದ್ದ ಸಿಸಿ ಕ್ಯಾಮೆರಾದ ದೃಶ್ಯಾವಳಿಯನ್ನು ಪರಿಶೀಲಿಸಿದಾಗ ಬಾಲಕಿ ಮೊಹಮದ್‌ ಕೈ ಹಿಡಿದುಕೊಂಡು ಹೋಗುತ್ತಿರುವುದು ಗೊತ್ತಾಗಿತ್ತು. ನಂತರ ಆ ಬಾಲಕಿಯನ್ನು ನಯವಾಗಿ ವಿಚಾರಿಸಿದಾಗ ಮೊಹಮದ್‌ ರಾಜಕಾಲುವೆಯಲ್ಲಿ ಆಯತಪ್ಪಿ ಬಿದ್ದು ಕೊಚ್ಚಿಹೋದ ಮಾಹಿತಿ ಸಿಕ್ಕಿತ್ತು.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ತಕ್ಷಣ ಎಚ್ಚೆತ್ತ ಪೊಲೀಸರು ಅಗ್ನಿಶಾಮಕ ದಳ, ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ(ಎನ್‌ಡಿಆರ್‌ಎಫ್‌) ಸಹಕಾರದೊಂದಿಗೆ ಭಾನುವಾರ ಶೋಧ ಕಾರ್ಯ ನಡೆಸಿದ್ದರು. ಸುಮಾರು 12 ಕಿ.ಮೀ. ನಷ್ಟುರಾಜಕಾಲುವೆ ಶೋಧದ ಬಳಿಕ ಬುಧವಾರ ರಾಜರಾಜೇಶ್ವರಿ ನಗರದ ಗ್ಲೋಬಲ್‌ ಕಾಲೇಜು ಬಳಿ ರಾಜಕಾಲುವೆಯಲ್ಲಿ ಬಾಲಕನ ಶವ ಪತ್ತೆಯಾಗಿದೆ. ಶವವನ್ನು ಸರ್ಕಾರಿ ಆಸ್ಪತ್ರೆಗೆ ರವಾನಿಸಿ ಮರಣೋತ್ತರ ಪರೀಕ್ಷೆ ಬಳಿಕ ಪೋಷಕರಿಗೆ ವರ್ಗಾಯಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

 ಬಾಲಕನ ಕುಟುಂಬಕ್ಕೆ ಸೂಕ್ತ ಪರಿಹಾರ

ರಾಜಕಾಲುವೆಯಲ್ಲಿ ಕೊಚ್ಚಿಹೋಗಿ ಮೃತಪಟ್ಟಿರುವ ಐದು ವರ್ಷದ ಬಾಲಕ ಮೊಹಮದ್‌ ಝೈನ್‌ ಕುಟುಂಬಕ್ಕೆ ಬಿಬಿಎಂಪಿಯಿಂದ ಸೂಕ್ತ ಪರಿಹಾರ ನೀಡುವುದಾಗಿ ಮೇಯರ್‌ ಗಂಗಾಂಬಿಕೆ ಮಲ್ಲಿಕಾರ್ಜುನ್‌ ಭರವಸೆ ನೀಡಿದ್ದಾರೆ.

ಪಾಲಿಕೆ ಕಚೇರಿಯಲ್ಲಿ ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಳೆದ ಶುಕ್ರವಾರ ಬಾಲಕ ರಾಜಕಾಲುವೆಗೆ ಬಿದ್ದು ಹೋಗಿದ್ದು, ಪೋಷಕರ ದೂರಿನ ಬಳಿಕ ಪರಿಶೀಲಿಸಿದಾಗ ತಡವಾಗಿ ಭಾನುವಾರ ಪೊಲೀಸರಿಗೆ ಈ ಮಾಹಿತಿ ಗೊತ್ತಾಗಿದೆ. ಈಗ ಬಾಲಕನ ಶವ ಕೆಂಗೇರಿ ಆಚೆಯ ರಾಜಕಾಲುವೆಯಲ್ಲಿ ಪತ್ತೆಯಾಗಿರುವುದು ತಿಳಿದು ಬಂದಿದೆ. ನಗರದಲ್ಲಿ ಯಾವುದೇ ಅವಘಡಗಳು, ಸಾವು ನೋವು ಆದಾಗ ಬಿಬಿಎಂಪಿ ಮಾನವೀಯ ನೆಲೆಯಲ್ಲಿ ನಾಗರಿಕರ ನೆರವಿಗೆ ನಿಲ್ಲುತ್ತದೆ. ಅದರಂತೆ ಮೃತ ಬಾಲಕನ ಕುಟುಂಬಕ್ಕೆ ಮುಖ್ಯಮಂತ್ರಿಗಳು ಹಾಗೂ ಪಾಲಿಕೆ ಆಯುಕ್ತರೊಂದಿಗೆ ಚರ್ಚಿಸಿ ಸೂಕ್ತ ಪರಿಹಾರ ನೀಡುವುದಾಗಿ ತಿಳಿಸಿದರು.

ಈಗಾಗಲೇ ಪಾಲಿಕೆ ರಾಜಕಾಲುವೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ. ಪಾದರಾಯನಪುರ ಸೇರಿದಂತೆ ನಗರದಲ್ಲಿ ಎಲ್ಲೆಲ್ಲಿ ರಾಜಕಾಲುವೆಗೆ ತಡೆಗೋಡೆ, ಫೆನ್ಸಿಂಗ್‌ನಂತಹ ಯಾವುದೇ ಸುರಕ್ಷಾ ಕ್ರಮಗಳಿಲ್ಲವೂ ಅಲ್ಲೆಲ್ಲಾ ಸೂಕ್ತ ಸುರಕ್ಷಾ ಕ್ರಮಗಳನ್ನು ಕೈಗೊಳ್ಳುವಂತೆ ಸೂಚಿಸಿದ್ದೇನೆ.

-ಗಂಗಾಂಬಿಕೆ, ಮೇಯರ್‌