ಚಿಕ್ಕಮಗಳೂರು (ಸೆ.27): ಬಲ್ಲಾಳರಾಯನ ದುರ್ಗಾ ನೋಡಲು ಹೋಗಿದ್ದ ಐವರು ಯುವಕರು ದಾರಿ ತಪ್ಪಿ, ಕೆಲಕಾಲ ಆತಂಕ ಸೃಷ್ಟಿಸಿದ ಘಟನೆ ಶನಿವಾರ ಮೂಡಿಗೆರೆಯಲ್ಲಿ ನಡೆದಿದೆ. ಆದರೆ, ಪೊಲೀಸರು ಮತ್ತು ಅರಣ್ಯ ಇಲಾಖೆ ಕಾರ್ಯಾಚರಣೆ ನಡೆಸಿ ರಾತ್ರಿ 9 ಗಂಟೆ ವೇಳೆಗೆ ಅವರನ್ನು ಪತ್ತೆ ಹಚ್ಚಿ ಸುರಕ್ಷಿತವಾಗಿ ಕರೆತಂದಿದ್ದಾರೆ.

ಮೂಡಿಗೆರೆ ಪಟ್ಟಣದ ಐವರು ಯುವಕರು ಟ್ರಕ್ಕಿಂಗ್‌ ಹೋಗಿ ದಾರಿತಪ್ಪಿದವರು. ಇಲ್ಲಿನ ಬಲ್ಲಾಳರಾಯನ ದುರ್ಗಾವನ್ನು ನೋಡಲು ಶನಿವಾರ ಸಂಜೆ ವೇಳೆ ಚಾರಣಕ್ಕೆ ಹೋಗಿದ್ದರು. ಅಲ್ಲಿಂದ ಮುಂದೆ ಕಾಡಿನಲ್ಲಿ ಹೋಗಿದ್ದು, ಆಗ ಸಂಜೆ ಸರಿದು ರಾತ್ರಿ ಆಗುತ್ತಿದ್ದಂತೆ ವಾಪಸ್‌ ಬರಲು ದಾರಿ ಕಾಣದೆ ಸಮಸ್ಯೆಗೆ ಸಿಲುಕಿದ್ದರು. ಕೆಲಕಾಲ ಗೊಂದಲಕ್ಕೊಳಗಾದ ಯುವಕರು ಕೊನೆಗೆ ನೆಟ್‌ವರ್ಕ್ ಸಿಗುವ ಕಡೆಯಿಂದ ಸ್ಥಳೀಯರಿಗೆ ಮತ್ತು ಪೊಲೀಸ್‌ ಠಾಣೆಗೆ ಕರೆ ಮಾಡಿ ತಾವು ದಾರಿ ತಪ್ಪಿರುವ ಮಾಹಿತಿ ರವಾನಿಸಿದ್ದರು.

ಕಾಫಿನಾಡಲ್ಲಿ ಭಾರೀ ಮಳೆ, ಹೆಬ್ಬಾಳೆ ಸೇತುವೆ ಮುಳುಗಡೆ, ಕಳಸ-ಹೊರನಾಡು ಸಂಪರ್ಕ ಕಡಿತ ..

ತಕ್ಷಣ ಕಾರ್ಯಪ್ರವೃತ್ತರಾದ ಬಾಳೂರು ಗ್ರಾಮದ ಕೆಲ ಯುವಕರು ಹಾಗೂ ಬಾಳೂರು ಮೀಸಲು ಅರಣ್ಯ ಇಲಾಖೆ ಸಿಬ್ಬಂದಿ ಬಲ್ಲಾಳರಾಯನ ದುರ್ಗಾಕ್ಕೆ ಹೋಗಿ ದಾರಿ ತಪ್ಪಿದ ಯುವಕರ ಪತ್ತೆ ಕಾರ್ಯಾಚರಣೆ ಆರಂಭಿಸಿದರು. ಸುಮಾರು 9 ಗಂಟೆ ವೇಳೆಗೆ ಅವರನ್ನು ಪತ್ತೆ ಹಚ್ಚಿ ಸುರಕ್ಷಿತವಾಗಿ ವಾಪಸ್‌ ಕರೆತಂದಿದ್ದಾರೆ. ಯುವಕರು ದಾರಿ ತಪ್ಪಿದ ಸುದ್ದಿ ಕೇಳಿ ಕೆಲಕಾಲ ಆತಂಕ ಸೃಷ್ಟಿಯಾಗಿತ್ತು.