ಬಂಧಿತರಿಂದ ಪಿಸ್ತೂಲ್, ಗುಂಡು, ಮಚ್ಚು ವಶ| ಒಟ್ಟು ಏಳು ಜನರ ಬಂಧನ| ಒಬ್ಬೊಬ್ಬ ಆರೋಪಿಗೂ ಒಂದು ಹೊಣೆಗಾರಿಕೆ: ತಿನಿಖೆ ವೇಳೆ ಬಹಿರಂಗ| ಬಂಧಿತನಾಗಿರುವ ಚಡಚಣದ ರವಿ ಬಂಡಿ ಎಂಬ ಆರೋಪಿ ಧರ್ಮರಾಜ ಚಡಚಣ ಕಟ್ಟಾ ಅಭಿಯಾನಿ|
ವಿಜಯಪುರ(ನ.08): ಕನ್ನಾಳ ಕ್ರಾಸ್ ಬಳಿ ನವೆಂಬರ್ 2ರಂದು ನಡೆದ ಮಹಾದೇವ ಸಾಹುಕಾರ ಬೈರಗೊಂಡನ ಮೇಲೆ ನಡೆದ ಶೂಟೌಟ್ ಪ್ರಕರಣಕ್ಕೆ ಸಂಬಂಧಿಸಿದಂತೆ ಮತ್ತೆ ಐವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದು, ಆರೋಪಿಗಳಿಂದ ಕಂಟ್ರಿ ಪಿಸ್ತೂಲ್ ಸೇರಿದಂತೆ ಹಲ್ಲೆಗೆ ಬಳಸಿದ ಅನೇಕ ವಸ್ತುಗಳನ್ನು ಜಪ್ತಿ ಮಾಡಿದ್ದಾರೆ.
ಅತಾಲಟ್ಟಿ ಗ್ರಾಮದ ಯಾಸೀನ್ ರಮಜಾನ್‌ಸಾಬ್ ದಂಧರಗಿ (25), ಕರೆಪ್ಪ ಉಫ್‌ರ್ ಗೂಳಿ ಮಹಾದೇವ ಸೊನ್ನದ (25), ಸಿದ್ದು ಉಫ್‌ರ್ ಸಿದ್ದರಾಯ ಬಸಪ್ಪ ಬೊಮ್ಮನಜೋಗಿ (34), ಅಲಿಯಾಬಾದ್ ಗ್ರಾಮದ ಸಂಜು ಉಫ್‌ರ್ ಸಚಿನ್ ತುಕಾರಾಮ ಮಾನವರ (28), ಚಡಚಣದ ರವಿ ಧರೆಪ್ಪ ಬಂಡಿ (20) ಬಂಧಿತ ಆರೋಪಿಗಳು. ಕಳೆದೆರಡು ದಿನಗಳ ಹಿಂದೆಯಷ್ಟೇ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರನ್ನು ಬಂಧಿಸಲಾಗಿತ್ತು. ಈಗ ಮತ್ತೆ ಐವರನ್ನು ಬಂಧಿಸಲಾಗಿದ್ದು, ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಇದುವರೆಗೆ 7 ಜನರನ್ನು ಬಂಧಿಸಿದಂತಾಗಿದೆ.
ಶನಿವಾರ ನಗರದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಈ ಕುರಿತು ಮಾಹಿತಿ ನೀಡಿದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅನುಪಮ ಅಗರವಾಲ್, ಬಂಧಿತ ಆರೋಪಿಗಳಿಂದ 2 ಕಂಟ್ರಿ ಪಿಸ್ತೂಲ್, 5 ಜೀವಂತ ಗುಂಡುಗಳು, 4 ಮೊಬೈಲ್, 1 ಆಟೋರಿಕ್ಷಾ, ಒಂದು ಮಚ್ಚು ಜಪ್ತಿ ಮಾಡಿಕೊಳ್ಳಲಾಗಿದೆ. ಮಹಾದೇವ ಸಾಹುಕಾರ ಬೈರಗೊಂಡನ ಶೂಟೌಟ್ ಪ್ರಕರಣದ ತನಿಖೆ ಚುರುಕುಗೊಂಡಿದ್ದು, ಹಲವು ಆಯಾಮಗಳಲ್ಲಿ ತನಿಖೆ ನಡೆಸಲಾಗುತ್ತಿದೆ ಎಂದರು.
ಬೈರಗೊಂಡ ಮೇಲೆ ಗುಂಡಿನ ದಾಳಿ: ಶೀಘ್ರ ಆರೋಪಿಗಳ ಪತ್ತೆ
ವಿಜಯಪುರದಲ್ಲಿ ಸ್ಕೆಚ್:
ಮಹಾದೇವ ಸಾಹುಕಾರ ಬೈರಗೊಂಡ ಶೂಟೌಟ್ ಪ್ರಕರಣಕ್ಕೆ ಸಂಬಂಧಿಸಿದಂತೆ ಹಲವು ಜನರು ಭಾಗಿಯಾಗುವ ಸಾಧ್ಯತೆ ಇದೆ. ಪ್ರಕರಣದ ಪ್ರಮುಖ ಸೂತ್ರಧಾರಿ ಮಡಿವಾಳ ಹಿರೇಮಠ ಸ್ವಾಮಿ ಬಂಧನಕ್ಕೆ ಜಾಲ ಬೀಸಲಾಗಿದೆ. ಈತ ಈ ಪ್ರಕರಣದಲ್ಲಿ ಪ್ರಮುಖ ಪಾತ್ರ ವಹಿಸಿದ್ದು, ಆತನ ಜೊತೆಗೆ ಅನೇಕರು ಶಾಮೀಲಾಗಿದ್ದಾರೆ. ಈ ಸಂಬಂಧ ತನಿಖೆ ಮುಂದುವರಿದಿದೆ ಎಂದು ಎಸ್ಪಿ ಅಗರವಾಲ್ ತಿಳಿಸಿದರು.
ಮಹಾದೇವ ಸಾಹುಕಾರ ಬೈರಗೊಂಡನ ಮೇಲೆ ಈ ಹಿಂದೆಯೂ ಅನೇಕ ಬಾರಿ ದಾಳಿ ನಡೆಸಲು ಸಂಚು ರೂಪಿಸಲಾಗಿತ್ತು. ಜಿಲ್ಲಾ ಕಾಂಗ್ರೆಸ್ ಮಾಜಿ ಅಧ್ಯಕ್ಷ ದಿ.ರವಿಗೌಡ ಪಾಟೀಲ ಧೂಳಖೇಡ ಅವರ ಅಂತ್ಯಕ್ರಿಯೆ ಸಂದರ್ಭದಲ್ಲೂ ಮಹಾದೇವ ಸಾಹುಕಾರ ಮೇಲೆ ಹಲ್ಲೆ ನಡೆಸಲು ಯೋಜನೆ ಹಾಕಿಕೊಂಡಿದ್ದರು. ಆದರೆ ಬರುವ ರೂಟ್ ಬದಲಾಗಿದ್ದರಿಂದ ಆ ವೇಳೆ ಆರೋಪಿಗಳಿಗೆ ಹಲ್ಲೆ ನಡೆಸಲು ಸಾಧ್ಯವಾಗಿಲ್ಲ ಎಂಬ ವಿಷಯ ತನಿಖೆಯಲ್ಲಿ ತಿಳಿದು ಬಂದಿದೆ.
ಬಂಧಿತ ಎಲ್ಲ ಆರೋಪಿಗಳು ಕಳೆದ ಕೆಲವು ದಿನಗಳ ಹಿಂದೆ ನಡೆದ ಧರ್ಮರಾಜ ಚಡಚಣ ಪುಣ್ಯತಿಥಿ ಸಂದರ್ಭದಲ್ಲಿ ಸೇರಿದ್ದರು. ಚಡಚಣ ಕುಟುಂಬದವರೊಡನೆ ಅನೇಕ ಹೊತ್ತು ಚರ್ಚೆ ನಡೆಸಿದ್ದಾರೆ. ಬಂಧಿತ ಆರೋಪಿಗಳಾದ ಯಾಸೀನ್ ದಂಧರಗಿ, ಕರೆಪ್ಪ, ಸಿದ್ದು ಬೊಮ್ಮನಜೋಗಿ ಸೇರಿದಂತೆ ಅನೇಕರು ವಿಜಯಪುರ ನಗರದಲ್ಲಿರುವ ಮಡಿವಾಳ ಹಿರೇಮಠ ಸ್ವಾಮಿ ಫೈನಾನ್ಸ್ ಕಚೇರಿಯಲ್ಲಿ ಚರ್ಚೆ ನಡೆಸಿದ್ದರು. ಅಲ್ಲಿಯೇ ಹಲ್ಲೆ ನಡೆಸುವ ಬಗ್ಗೆ ಸ್ಕೆಚ್ ಸಿದ್ಧವಾಗುತ್ತದೆ ಎಂಬ ವಿವರಗಳನ್ನು ಅಗರವಾಲ್ ತಿಳಿಸಿದರು.
ಭೀಮಾ ತೀರದಲ್ಲಿ ಮತ್ತೆ ಗುಂಡಿನ ಸದ್ದು: ಇನ್ನೂ ಮುಗಿಯದ ರಕ್ತ ಚರಿತ್ರೆ..!
ಒಬ್ಬರಿಗೆ ಒಂದೊಂದು ಹೊಣೆಗಾರಿಕೆ:
ಬಂಧಿತ ಎಲ್ಲ ಆರೋಪಿಗಳಿಗೆ ಒಂದೊಂದು ಟಾರ್ಗೆಟ್ ನೀಡಲಾಗಿತ್ತು. ಆರೋಪಿ ಸಿದ್ದು ಬೊಮ್ಮನಜೋಗಿಗೆ ಟಿಪ್ಪರ್‌ನಿಂದ ಇಳಿದು ಲಾಂಗ್‌ನಿಂದ ದಾಳಿ ನಡೆಸುವುದು, ಸಂಜು ಮಾನವರ ಎಂಬ ಆರೋಪಿಗೆ ಪೆಟ್ರೋಲ್ ಬಾಂಬ್ ಎಸೆಯುವ ಟಾರ್ಗೆಟ್ ಹೀಗೆ ಎಲ್ಲರಿಗೂ ಒಂದೊಂದು ರೀತಿ ದಾಳಿ ನಡೆಸುವ ಟಾರ್ಗೆಟ್ ನೀಡಲಾಗಿತ್ತು ಎಂಬ ವಿಷಯವೂ ತನಿಖೆ ವೇಳೆ ತಿಳಿದು ಬಂದಿದೆ ಎಂದು ವಿವರಿಸಿದರು. ಬಂಧಿತನಾಗಿರುವ ಚಡಚಣದ ರವಿ ಬಂಡಿ ಎನ್ನುವ ಆರೋಪಿ ಧರ್ಮರಾಜ ಚಡಚಣ ಕಟ್ಟಾ ಅಭಿಯಾನಿಯಾಗಿದ್ದು, ಈ ಅಭಿಮಾನದಿಂದಾಗಿ ಕೃತ್ಯದಲ್ಲಿ ಭಾಗಿಯಾಗಿದ್ದಾನೆ ಎಂದು ತಿಳಿಸಿದರು. ಈ ಪ್ರಕರಣದಲ್ಲಿ ಇನ್ನೂ ಅನೇಕ ಆರೋಪಿಗಳಿರಬಹುದು. ತನಿಖೆ ನಡೆಸಿ ಶೀಘ್ರದಲ್ಲಿಯೇ ಉಳಿದ ಆರೋಪಿಗಳನ್ನೂ ಬಂಧಿಸಲಾಗುವುದು ಎಂದು ಎಸ್ಪಿ ತಿಳಿಸಿದರು. ಜಿಲ್ಲಾ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಡಾ.ರಾಮ ಅರಸಿದ್ದಿ ಹಾಗೂ ಇತರ ಪೊಲೀಸ್ ಅಧಿಕಾರಿಗಳು ಪತ್ರಿಕಾಗೋಷ್ಠಿಯಲ್ಲಿ ಇದ್ದರು.
ಪಾಟೀಲ ಕುಟುಂಬಕ್ಕೆ ಕಿರುಕುಳ ಬಗ್ಗೆ ತನಿಖೆ
ಬೆಂಗಳೂರಿನ ಯಲಹಂಕ ಪೊಲೀಸ್ ಠಾಣೆಯಲ್ಲಿ ಪೇದೆಯಾಗಿ ಸೇವೆ ಸಲ್ಲಿಸುತ್ತಿರುವ ಸಿಂದಗಿಯ ಬಸವರಾಜ ಪಾಟೀಲ ಅವರು ತಮ್ಮ ಕುಟುಂಬಕ್ಕೆ ಪೊಲೀಸ್ ಇಲಾಖೆ ಕಿರುಕುಳ ನೀಡಿದೆ ಎಂದು ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ವೈರಲ್ ಆಗಿತ್ತು. ಈ ಬಗ್ಗೆ ಸೂಕ್ತ ವಿಚಾರಣೆ ನಡೆಸಲಾಗಿದೆ. ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ವೈರಲ್ ಆಗಿರುವುದು ಸತ್ಯಕ್ಕೆ ದೂರ ಎಂದು ಎಸ್ಪಿ ಅಗರವಾಲ್ ಸ್ಪಷ್ಟಪಡಿಸಿದರು.
