ಭೀಕರ ಅಪಘಾತ: ದೇವರ ದರ್ಶನಕ್ಕೆ ತಮಿಳುನಾಡಿಗೆ ಹೋಗುತ್ತಿದ್ದ ಐವರ ದುರ್ಮರಣ
ಗಂಭೀರವಾಗಿ ಗಾಯಗೊಂಡಿರುವ 16 ಮಂದಿಯ ಪೈಕಿ 8 ಜನರ ಸ್ಥಿತಿ ಚಿಂತಾಜನಕ| ತಮಿಳುನಾಡು, ಕರ್ನಾಟಕ ಗಡಿ ಭಾಗದಲ್ಲಿರುವ ದಬ್ಬಗುಳೇಶ್ವರ ದೇವರ ದರ್ಶನಕ್ಕೆ ತೆರಳುತ್ತಿದ್ದ ಭಕ್ತರು|
ರಾಮನಗರ/ಕನಕಪುರ(ಡಿ.22): ಟ್ರ್ಯಾಕ್ಟರ್ ಪಲ್ಟಿ ಹೊಡೆದ ಪರಿಣಾಮ ದೇವರ ದರ್ಶನಕ್ಕೆ ತೆರಳುತ್ತಿದ್ದ ಕನಕಪುರ ಮೂಲದ ಐವರು ಮಹಿಳೆಯರು ಮೃತಪಟ್ಟು, 16 ಮಂದಿ ಗಂಭೀರವಾಗಿ ಗಾಯಗೊಂಡಿರುವ ಧಾರುಣ ಘಟನೆ ತಮಿಳುನಾಡು, ಕರ್ನಾಟಕದ ಗಡಿ ಭಾಗದಲ್ಲಿ ಸೋಮವಾರ ನಡೆದಿದೆ.
ಕನಕಪುರ ತಾಲೂಕು ಕೆರಳಾಳುಸಂದ್ರ ಗ್ರಾಮದ ಪುಟ್ಟಲಿಂಗಮ್ಮ(60), ಹೊಸಬೊಮ್ಮ(60), ಗೌರಮ್ಮ(75), ಮಂಗಳಮ್ಮ(25), ಈರಮ್ಮ(85) ಮೃತರು. ಗಂಭೀರವಾಗಿ ಗಾಯಗೊಂಡಿರುವ 16 ಮಂದಿಯ ಪೈಕಿ 8 ಜನರ ಸ್ಥಿತಿ ಚಿಂತಾಜನಕವಾಗಿದೆ.
ಜಾಲಿರೈಡ್ ಹೋಗಿದ್ದ ಮೂವರು ಯುವಕರ ದುರಂತ ಸಾವು
ಕೆರಳಾಳುಸಂದ್ರ ಗ್ರಾಮದ ಸುಮಾರು 25 ಮಂದಿ ಸೋಮವಾರ ಬೆಳಗ್ಗೆ ತಮಿಳುನಾಡು, ಕರ್ನಾಟಕ ಗಡಿ ಭಾಗದಲ್ಲಿರುವ ದಬ್ಬಗುಳೇಶ್ವರ (ದಬ್ಬಗುಳಿಯ ಬಸವೇಶ್ವರ) ದೇವರ ದರ್ಶನಕ್ಕೆ ತೆರಳುತ್ತಿದ್ದರು. ದೇವಸ್ಥಾನಕ್ಕೆ 4 ಕಿ.ಮೀ. ದೂರವಿದ್ದಾಗ ಟ್ರ್ಯಾಕ್ಟರ್ ಚಾಲಕನ ನಿಯಂತ್ರಣ ತಪ್ಪಿ ರಸ್ತೆ ತಿರುವಿನಲ್ಲಿ ಮೂರು ಸುತ್ತು ಪಲ್ಟಿ ಹೊಡೆದಿದೆ.