ಹೂವಿನಹಡಗಲಿ(ಜೂ.02): ಕೊರೋನಾ ಸಂಕಷ್ಟದ ನಡುವೆಯೂ ಇಲ್ಲಿನ 100 ಹಾಸಿಗೆ ಆಸ್ಪತ್ರೆಯ ವೈದ್ಯರು ಹಾಗೂ ಸಿಬ್ಬಂದಿ ಕೊರೋನಾ ಸೋಂಕಿತ ಐವರು ಗರ್ಭಿಣಿಯರಿಗೆ ಯಶಸ್ವಿ ಹೆರಿಗೆ ಮಾಡಿಸಿದ್ದಾರೆ.

ಪಟ್ಟಣದ ಸಾರ್ವಜನಿಕ ಆಸ್ಪತ್ರೆಯಲ್ಲಿ ಆಕ್ಸಿಜನ್‌ ಬೆಡ್‌ಗಳ ಬೇಡಿಕೆ ಹೆಚ್ಚಾಗುತ್ತಿದ್ದು, ಜನರಲ್‌ ವಾರ್ಡ್‌ನ ಬೆಡ್‌ ಸಹ ಕೊರೋನಾ ಪಾಸಿಟಿವ್‌ ಬಂದಿರುವ ರೋಗಿಗಳಿಗೆ ಬಳಕೆ ಮಾಡಲಾಗುತ್ತಿದೆ. ಇಂತಹ ಸಂದರ್ಭದಲ್ಲಿಯೂ ಹೆರಿಗೆಗೆ ಬರುವ ಮಹಿಳೆಯರಿಗೆ ಕೆಲ ಬೆಡ್‌ಗಳನ್ನು ಕಾಯ್ದಿರಿಸಲಾಗಿದೆ.

ಬಳ್ಳಾರಿಗೆ ಕರಿಮಾರಿಯ ಭೀತಿ: ಆತಂಕದಲ್ಲಿ ಜನತೆ

ಕೋಮಾರನಹಳ್ಳಿ ತಾಂಡದ ಭಾರತಿ ಬಾಯಿ, ಮೀರಾಕೂರ್ನಹಳ್ಳಿಯ ನಿಂಗಮ್ಮ, ಅಂಕ್ಲಿ ತಾಂಡದ ಲಲಿತಾ ಗಂಡು ಮಗುವಿಗೆ, ವಡ್ಡನಹಳ್ಳಿ ತಾಂಡದ ಟಿ. ಲಲಿತಾ, ಹಿರೇಮಲ್ಲನಕೆರೆಯ ಅನ್ನಪೂರ್ಣ ಹೆಣ್ಣು ಮಗುವಿಗೆ ಜನ್ಮ ನೀಡಿದ್ದು ತಾಯಿ ಮಗು ಕೂಡಾ ಇಬ್ಬರೂ ಆರೋಗ್ಯವಾಗಿದ್ದಾರೆ. ಆಸ್ಪತ್ರೆಯ ವೈದ್ಯರಾದ ಡಾ. ದೀಪ್ತಿ, ಆರೋಗ್ಯ ಸಿಬ್ಬಂದಿಗಳಾದ ಎನ್‌. ಮಂಗಳ, ರೋಹಿಣ ಹೊಳಲು, ಎಸ್‌.ಎಂ. ನೇತ್ರಾ, ಶೋಭಾ ಪಾಟೀಲ್‌, ರತ್ನವ್ವ ಪಾಟೀಲ್‌, ಮೇರಾಜಿ ಬೀ ಹೆರಿಗೆ ಮಾಡಿಸಿದ್ದಾರೆ.

ಎಲ್ಲ ಹಳ್ಳಿಗಳಲ್ಲಿ ಗರ್ಭಿಣಿಯರು ಆರೋಗ್ಯದ ಕಡೆಗೆ ಹೆಚ್ಚು ಗಮನ ಹರಿಸಬೇಕೆಂದು ಈಗಾಗಲೇ ಆಶಾ ಕಾರ್ಯಕರ್ತೆಯರ ಮೂಲಕ ಜಾಗೃತಿ ಮೂಡಿಸುವ ಜತೆಗೆ ಅವರ ಆರೋಗ್ಯವನ್ನು ನಿರಂತರವಾಗಿ ಪರೀಕ್ಷೆ ಮಾಡಲಾಗುತ್ತಿದೆ. ವಿವಿಧ ಕಡೆ ಕೊರೋನಾ ಪಾಸಿಟಿವ್‌ ಬಂದಿರುವ ಐವರಿಗೆ ಯಶಸ್ವಿ ಹೆರಿಗೆಯನ್ನು ಸಾರ್ವಜನಿಕ ಆಸ್ಪತ್ರೆ ಸಿಬ್ಬಂದಿ ಮಾಡಿಸಿದ್ದಾರೆ ಎಂದು ತಾಲೂಕು ಆರೋಗ್ಯಾಧಿಕಾರಿ ಡಾ. ಶಿವಕುಮಾರ ಸಾಲಗೇರಿ ಹೇಳಿದರು.

ಸೂಚನೆ: ಕೊರೋನಾ ಮಹಾಮಾರಿ ಎಲ್ಲೆಡೆ ಹರಡುತ್ತಿದೆ. ಹೀಗಿರುವಾಗ ಎಲ್ಲರೂ ತಪ್ಪದೇ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ ಹಾಗೂ ಲಸಿಕೆ ಪಡೆಯಿರಿ ಎಂಬುವುದು ಏಷ್ಯಾನೆಟ್‌ ನ್ಯೂಸ್‌ ಕಳಕಳಿಯ ವಿನಂತಿ. ಒಗ್ಗಟ್ಟಿನಿಂದ ನಾವು ಈ ಕೊರೋನಾ ಸರಪಳಿ ಮುರಿಯೋಣ #ANCares #IndiaFightsCorona