ಅಲೆಗಳೊಂದಿಗೆ ಗುದ್ದಾಡಿ ಮೀನು ಹಿಡಿಯುವ ಸಾಹಸ, ಹೊಸ ನಿರೀಕ್ಷೆಯೊಂದಿಗೆ ಕಡಲಿಗಿಳಿದ ಮೀನುಗಾರರು
ಮಳೆಗಾಲದಲ್ಲಿ ಕಡಲಿಗೆ ಇಳಿಯುವುದು ಅತ್ಯಂತ ಸವಾಲಿನ ಕೆಲಸ. ಇದೀಗ ಕರಾವಳಿ ಭಾಗದಲ್ಲಿ ಮಳೆ ಮಳೆಯಾಗುತ್ತಿರುವುದರಿಂದ ಕಡಲು ಕೊರೆತ ಉಂಟಾಗಿದೆ. ಇದರ ಮಧ್ಯೆ ಗಾಳಿ ಮಳೆಯ ಸವಾಲಿನ ನಡುವೆಯೂ, ಸಾಹಸದ ಮೀನುಗಾರಿಕೆ ನಡೆಸಲು ಸಾಂಪ್ರದಾಯಿಕ ಮೀನುಗಾರರು ಸಜ್ಜಾಗಿದ್ದಾರೆ.
ವರದಿ- ಶಶಿಧರ ಮಾಸ್ತಿಬೈಲು, ಏಷಿಯಾನೆಟ್ ಸುವರ್ಣ ನ್ಯೂಸ್
ಉಡುಪಿ, (ಜುಲೈ22): ಕರ್ನಾಟಕ ಕರಾವಳಿಯಲ್ಲಿ ಕೊನೆಗೂ ಮಳೆ ಕಡಿಮೆಯಾಗಿದೆ. ಉಡುಪಿ ಜಿಲ್ಲೆಯಲ್ಲಿ ಕಡಲಿನ ತೀವ್ರತೆಯೂ ಕೊಂಚ ಇಳಿಮುಖವಾಗಿದೆ. ಬರೋಬ್ಬರಿ ಒಂದು ತಿಂಗಳ ನಂತರ ನಾಡ ದೋಣಿಗಳು ದೊಡ್ಡ ಪ್ರಮಾಣದಲ್ಲಿ ಕಡಲಿಗಿಳಿದಿವೆ. ಗಾಳಿ ಮಳೆಯ ಸವಾಲಿನ ನಡುವೆಯೂ, ಸಾಹಸದ ಮೀನುಗಾರಿಕೆ ನಡೆಸಲು ಸಾಂಪ್ರದಾಯಿಕ ಮೀನುಗಾರರು ಸಜ್ಜಾಗಿದ್ದಾರೆ.
ಪ್ರತಿಕೂಲ ಹವಾಮಾನದ ನಡುವೆಯೂ ಮಳೆಗಾಲದ ಸಾಂಪ್ರದಾಯಿಕ ಮೀನುಗಾರಿಕೆ ನಡೆಸಲೇಬೇಕಾಗಿದೆ. ಉಳಿದ ಅವಧಿಯಲ್ಲಿ ಆಳ ಸಮುದ್ರ ಬೋಟುಗಳಲ್ಲಿ ಕಾರ್ಮಿಕರಾಗಿ ದುಡಿಯುವ ಮೀನುಗಾರರು, ಮಳೆಗಾಲದಲ್ಲಿ ತಾವೇ ಸಣ್ಣ ಬೂಟು ಕಟ್ಟಿಕೊಂಡು ಕಡಲಿಗೆ ಇಳಿಯುತ್ತಾರೆ. ಜೀವ ಒತ್ತೆಯಿಟ್ಟು ಮೀನುಗಾರಿಕೆ ನಡೆಸುತ್ತಾರೆ. ತಾವೇ ಮಾಲಕರಾಗಿ ಬೋಟುಗಳಲ್ಲಿ ದುಡಿಯುತ್ತಾರೆ.
ಕರಾವಳಿಯಲ್ಲಿ ಕಡಲ್ಕೊರೆತ; ಕಡಲಜೀವಶಾಸ್ತ್ರಜ್ಞರಿಂದ ಎಚ್ಚರಿಕೆ
ಈ ಬಾರಿ ಅತೀಹೆಚ್ಚು ಮಳೆಯಾಗಿ ಕಡಲು ಅಡಿ ಮೇಲಾಗಿರುವುದರಿಂದ
ಉತ್ತಮ ಮೀನುಗಾರಿಕೆಯ ನಿರೀಕ್ಷೆಯಿಂದ ಕಳೆಗಿಳಿದಿದ್ದಾರೆ. ಮಳೆಗಾಲದ ದುಡಿಮೆ ಎಂದರೆ ಅದು ಅದೃಷ್ಟದ ಆಟ. ಗಾಳಿ ಮಳೆ ಶುರುವಾದರೆ ಮತ್ತೆ ಮೀನುಗಾರಿಕೆ ಸ್ಥಗಿತ ಮಾಡಬೇಕಾಗುತ್ತೆ. ಜಿಲ್ಲೆಯ ಗಂಗೊಳ್ಳಿ ,ಕಂಚುಗೋಡು ,ಮರವಂತೆ, ಕೊಡೇರಿ, ಉಪ್ಪುಂದ, ಪಡುಕೆರೆ ಮಟ್ಟು, ಕೋಡಿ ಕನ್ಯಾನ ಮುಂತಾದ ಪ್ರದೇಶಗಳಲ್ಲಿ ಸಾಂಪ್ರದಾಯಿಕ ಮೀನುಗಾರಿಕೆ ನಡೆಸುತ್ತಾರೆ.
ಇನ್ನು 15 ದಿನಗಳಲ್ಲಿ ಆಳಸಮುದ್ರ ಮೀನುಗಾರಿಕೆ ಆರಂಭವಾಗುತ್ತೆ, ಸದ್ಯ ಬಾರಿ ಗಾತ್ರದ ಬೋಟುಗಳ ಮೀನುಗಾರಿಕೆಗೆ ನಿಷೇಧಿತ ಅವಧಿ ಇದೆ. ಈಗಾಗಲೇ ಸಾಂಪ್ರದಾಯಿಕ ಮೀನುಗಾರಿಕೆ ನಡೆಸಲು ಇದ್ದ ಕಾಲಾವಕಾಶ ಮುಗಿಯುತ್ತಾ ಬಂದಿದೆ. ಹಾಗಾಗಿ ಒತ್ತಡದಲ್ಲಿ ಮೀನುಗಾರಿಕೆ ನಡೆಸುವಂತಾಗಿದೆ.
ಜೂನ್ ತಿಂಗಳಲ್ಲಿ ಮಳೆ ಸುರಿಯದ ಕಾರಣ ಕಡಲಿನಲ್ಲಿ ಮೀನಿನ ಲಭ್ಯತೆ ಕಡಿಮೆಯಾಗಿತ್ತು. ಬಳಿಕ ಅತಿಯಾದ ಮಳೆಬಿದ್ದು ದೋಣಿಗಳು ಕಡಲಿಗಿಳಿಯಲು ಸಾಧ್ಯವಾಗಿರಲಿಲ್ಲ. ಇದೀಗ ಸಿಕ್ಕ ಕಾಲಾವಕಾಶದಲ್ಲಿ ಹೆಚ್ಚು ದುಡಿಮೆ ನಡೆಸುವ ಸವಾಲು ಮೀನುಗಾರರದ್ದು.
ಉಡುಪಿ ಜಿಲ್ಲೆಯ ಗಂಗೊಳ್ಳಿ ಒಂದು ಪ್ರಮುಖ ನಾಡದೋಣಿ ಮೀನುಗಾರಿಕಾ ಕೇಂದ್ರ. ಇಲ್ಲಿನ ಮಡಿ ಎಂಬಲ್ಲಿ ನೂರಾರು ಸಂಖ್ಯೆಯ ದೋಣಿಗಳು ಮೀನುಗಾರಿಕೆ ನಡೆಸುತ್ತವೆ. ಮಳೆಗಾಲದ ಮೀನುಗಾರಿಕೆಗೆ ಇಲ್ಲಿನ ಲೈಟ್ ಹೌಸ್ ಬಳಿಯ ಪರಿಸರ ತುಂಬಾ ಖ್ಯಾತಿ ಪಡೆದಿದೆ. ಇಲ್ಲಿಂದ ಹೊರ ಜಿಲ್ಲೆ ಹಾಗೂ ರಾಜ್ಯಗಳಿಗೂ ಮೀನು ಸರಬರಾಜಾಗುತ್ತದೆ.
ನಾಡ ದೋಣಿಗಳ ಮೂಲಕ ಬರುವ ಮೀನುಗಳಿಗೆ ಸಖತ್ ಡಿಮಾಂಡ್ ಇದೆ. ಆಯಾ ದಿನವೇ ಸಂಗ್ರಹಿಸುವ ಈ ತಾಜಾ ಮೀನಿಗೆ ಜನ ಮಾರು ಹೋಗುತ್ತಾರೆ. ಬಿಳಿ ಚಟ್ಲಿ, ಕೆಂಪು ಚಟ್ಲಿ, ಬಂಗುಡೆ ,ಪಾಂಪ್ಲೆಟ್ , ಬೈಗೆ ಮೀನು ಈ ಮಳೆಗಾಲದ ಸ್ಪೆಷಲ್. ಈ ಮೀನುಗಳು ತಾಜಾ ಸ್ವರೂಪದಲ್ಲಿ ಸಿಗುವುದರಿಂದ ಗ್ರಾಹಕರಿಗೂ ಅಚ್ಚುಮೆಚ್ಚು.
ಮಳೆಗಾಲದಲ್ಲಿ ಕಡಲಿಗೆ ಇಳಿಯುವುದು ಅತ್ಯಂತ ಸವಾಲಿನ ಕೆಲಸ. ಮೀನುಗಾರಿಕೆ ನಡೆಸುವ ಸಾಂಪ್ರದಾಯಿಕ ಮೀನುಗಾರರಿಗೆ ರಕ್ಷಣೆಗಾಗಿ ಲೈಫ್ ಜಾಕೆಟ್ ನೀಡಬೇಕೆಂಬುದು ಬಹುಕಾಲದ ಬೇಡಿಕೆ. ಮುಂದಿನ ವರ್ಷಕ್ಕಾದರೂ ಸರಕಾರ ಈ ಬಗ್ಗೆ ಗಮನ ಹರಿಸಬೇಕು. ಹಳೆ ಪದ್ಧತಿಯಂತೆ ಮೀನು ಹಿಡಿಯುವ ಸಾಂಪ್ರದಾಯಿಕ ಮೀನುಗಾರರ ರಕ್ಷಣೆ ಆಗಬೇಕು.