‘ಜನ ಸ್ನೇಹಿ ಆಡಳಿತ’ ಜಾರಿಗೆ ಪೊಲೀಸ್ ಇಲಾಖೆ ರೂಪಿಸಿರುವ ‘ಮನೆ-ಮನೆಗೆ ಪೊಲೀಸ್’ ಎಂಬ ಹೆಸರಿನ ವಿನೂತನ ಕಾರ್ಯಕ್ರಮಕ್ಕೆ ರಾಜ್ಯ ಗೃಹ ಸಚಿವ ಡಾ.ಜಿ.ಪರಮೇಶ್ವರ್ ಶುಕ್ರವಾರ ಚಾಲನೆ ನೀಡಿದರು.

ಬೆಂಗಳೂರು : ‘ಜನ ಸ್ನೇಹಿ ಆಡಳಿತ’ ಜಾರಿಗೆ ಪೊಲೀಸ್ ಇಲಾಖೆ ರೂಪಿಸಿರುವ ‘ಮನೆ-ಮನೆಗೆ ಪೊಲೀಸ್’ ಎಂಬ ಹೆಸರಿನ ವಿನೂತನ ಕಾರ್ಯಕ್ರಮಕ್ಕೆ ರಾಜ್ಯ ಗೃಹ ಸಚಿವ ಡಾ.ಜಿ.ಪರಮೇಶ್ವರ್ ಶುಕ್ರವಾರ ಚಾಲನೆ ನೀಡಿದರು.

ಗೋವಿಂದರಾಜನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಜನರ ದುಃಖ ದುಮ್ಮಾನ ಕೇಳಲು ಬರುವ ಪೊಲೀಸರ ಕಾರ್ಯಕ್ಕೆ ಹಸಿರು ಬಾವುಟ ತೋರಿಸಿ ಸಚಿವರು ಮಾತನಾಡಿದರು.

ದೇಶದಲ್ಲೇ ಪ್ರಥಮ ಬಾರಿಗೆ ಜನರ ಮನೆ ಬಾಗಿಲಿಗೆ ಅಹವಾಲು ಆಲಿಸಲು ಪೊಲೀಸರು ಬರುವ ಕಾರ್ಯಕ್ರಮವನ್ನು ರಾಜ್ಯದಲ್ಲಿ ಜಾರಿಗೊಳಿಸಲಾಗಿದೆ. ಈ ಕಾರ್ಯಕ್ರಮವು ಯಶಸ್ಸುಗೊಂಡರೆ ರಾಷ್ಟ್ರಮಟ್ಟದಲ್ಲಿ ಕಾರ್ಯಕ್ರಮ ಜಾರಿಗೆ ಬರುವ ವಿಶ್ವಾಸವಿದೆ ಎಂದು ಸಚಿವ ಶುಭ ಕೋರಿದರು.

ನಮ್ಮ ಪೊಲೀಸರು ಜನಸ್ನೇಹಿಯಾಗಬೇಕು. ಹಾಗೆಯೇ ಸಹೋದರತ್ವದ ಭಾವನೆಯಿಂದ ಪೊಲೀಸರನ್ನು ಜನರು ನೋಡಬೇಕು. ಈ ನಿಟ್ಟಿನಲ್ಲಿ ನಾವೇ ಜನರ ಮನೆ ಬಾಗಿಲಿಗೆ ಹೋಗೋಣ. ಅವರ ಕಷ್ಟಗಳನ್ನು ಆಲಿಸಿ, ಪರಿಹರಿಸಿದರೆ ಒಳ್ಳೆಯ ಅಭಿಪ್ರಾಯ ಮೂಡುತ್ತದೆ ಎಂದು ಕಿವಿಮಾತು ಹೇಳಿದರು.

ಪ್ರತಿ ದಿನ ಪೊಲೀಸರು ಗಸ್ತು ನಡೆಸುತ್ತಾರೆ. ಯಾವ ಮನೆಗೆ ಯಾರು ಬಂದಿದ್ದಾರೆ, ಏನು ಕೆಲಸ ಮಾಡುತ್ತಾರೆ, ಯಾವ ಸಮಸ್ಯೆಗಳಿವೆ ಎಂಬ ಮಾಹಿತಿಯನ್ನು ಪೊಲೀಸರು ಸಂಗ್ರಹಿಸುತ್ತಾರೆ. ಈ ಎಲ್ಲ ಡೇಟಾ ಪೊಲೀಸರ ಬಳಿ ಇರುತ್ತದೆ.

ನೆರೆಹೊರೆಯಲ್ಲಿ ಕಾನೂನುಬಾಹಿರ ಚಟುವಟಿಕೆ ನಡೆಯುತ್ತಿದ್ದರೆ, ಮಕ್ಕಳಿಗೆ ತೊಂದರೆಯಾಗುತ್ತಿದ್ದರೆ, ಡ್ರಗ್ಸ್ ಚಟುವಟಿಕೆ ಸೇರಿದಂತೆ ಎಲ್ಲ ಮಾಹಿತಿಯನ್ನು ಪೊಲೀಸರೊಂದಿಗೆ ಹಂಚಿಕೊಳ್ಳಬಹುದು. ಈ ಎಲ್ಲ ದತ್ತಾಂಶವನ್ನು ಡಿಜಿಟಲೈಸ್ ಮಾಡಿಕೊಳ್ಳಲಾಗುತ್ತದೆ. ಬೀಟ್‌ ಸಿಬ್ಬಂದಿಗೆ ಟ್ಯಾಬ್‌ಗಳನ್ನು ನೀಡಲಾಗುತ್ತದೆ ಎಂದು ಸಚಿವರು ತಿಳಿಸಿದರು.

ಸಮಾಜದಲ್ಲಿ ಕೆಲ ಬಾರಿ ಜನಪ್ರತಿನಿಧಿಗಳು, ಉದ್ಯಮಿಗಳು ಹಾಗೂ ಸಾಹಿತಿಗಳು ಟಾರ್ಗೆಟ್ ಆಗಿರುತ್ತಾರೆ. ಈ ಬಗ್ಗೆ ನಿಗಾವಹಿಸಲು ಸಹಾಯವಾಗುತ್ತದೆ. ನಮ್ಮದು ಕ್ರಿಯಾಶೀಲವಾಗಿ ಕೆಲಸ ಮಾಡುವ ಇಲಾಖೆ ಆಗಿದೆ ಎಂದು ಹೇಳಿದರು.

ಈ ಕಾರ್ಯಕ್ರಮದಲ್ಲಿ ಗೋವಿಂದರಾಜನಗರ ಕ್ಷೇತ್ರದ ಶಾಸಕ ಪ್ರಿಯಕೃಷ್ಣ, ರಾಜ್ಯ ಪೊಲೀಸ್ ಮಹಾನಿರ್ದೇಶಕ ಡಾ. ಎಂ.ಎ.ಸಲೀಂ, ಬಿಬಿಎಂಪಿ ಮುಖ್ಯ ಆಯುಕ್ತ ಮಹೇಶ್ವರ್ ರಾವ್, ನಗರ ಪೊಲೀಸ್ ಆಯುಕ್ತ ಸೀಮಂತ್ ಕುಮಾರ್ ಸಿಂಗ್ ಹಾಗೂ ಹಿರಿಯ ಪೊಲೀಸ್ ಅಧಿಕಾರಿಗಳು ಉಪಸ್ಥಿತರಿದ್ದರು.

 ವೀಡಿಯೋ ಕಾನ್ಫ್‌ರೆನ್ಸ್ ಮೂಲಕ ಸಂವಾದ

ಮನೆ ಮನೆಗೆ ಪೊಲೀಸ್ ಕಾರ್ಯಕ್ರಮದ ಕುರಿತು ವಿಡಿಯೋ ಕಾನ್ಫ್‌ರೆನ್ಸ್ ಮೂಲಕ ಸಂವಾದ ನಡೆಸಿ ಕಲುಬರಗಿ ನಗರ ಆಯುಕ್ತರು ಹಾಗೂ ಕೆಲ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಜತೆ ಸಚಿವರು ಮಾಹಿತಿ ಪಡೆದರು.

ಕಲಬುರಗಿ ನಗರ ಪೊಲೀಸ್ ಆಯುಕ್ತ ಡಾ.ಎಸ್.ಡಿ.ಶರಣಪ್ಪ ಅವರು, ಜನರೊಂದಿಗೆ ಸಮನ್ವಯತೆ ಸಾಧಿಸಲು ಉತ್ತಮ ಕಾರ್ಯಕ್ರಮವಾಗಿದೆ. ಸಮಾಜದಲ್ಲಿ ಪೊಲೀಸರ ಬಗ್ಗೆ ಇರುವ ಅಭಿಪ್ರಾಯವನ್ನು ಉತ್ತಮಗೊಳಿಸುತ್ತೇವೆ. ಈ ಜವಾಬ್ದಾರಿಯನ್ನು ಸಮರ್ಥವಾಗಿ ಜಾರಿಗೊಳಿಸುತ್ತೇವೆ ಎಂದರು.

ಅಧಿಕಾರಿಗಳ ಜತೆ ಸಂವಾದ ಬಳಿಕ ಗೃಹ ಸಚಿವ ಪರಮೇಶ್ವರ ಮಾತನಾಡಿ, ಈ ಕಾರ್ಯಕ್ರಮವು ನಿಗದಿತ ಕಾಲಮಿತಿಯೊಳಗೆ ಮುಗಿಸಬೇಕು. ಎಲ್ಲ ಮನೆಗಳ ಡೇಟಾ ಪೊಲೀಸರ ಬಳಿ ಇರಬೇಕು. ನಾನು ಠಾಣೆಗಳಿಗೆ ಭೇಟಿ ನೀಡಿದಾಗ ಮಾಹಿತಿ ಲಭ್ಯವಿರಬೇಕು. ಬೇರೆ ರಾಜ್ಯಗಳ ಪೊಲೀಸರಿಗೆ ಮಾದರಿಯಾಗಬೇಕು ಎಂದು ಸೂಚಿಸಿದರು.

ನಮ್ಮ ಜಿಲ್ಲೆಯಲ್ಲಿ ಮನೆ-ಮನೆ ಪೊಲೀಸ್ ಕಾರ್ಯಕ್ರಮಕ್ಕೆ ಉತ್ತಮ ಸ್ಪಂದನೆ ಸಿಕ್ಕಿದೆ ಎಂದು ದಕ್ಷಿಣ ಕನ್ನಡ ಜಿಲ್ಲೆ ಎಸ್ಪಿ ಡಾ.ಕೆ.ಅರುಣ್‌ ಹೇಳಿದರು.

ನಮ್ಮ ಜಿಲ್ಲೆಯಲ್ಲಿ 478 ಬೀಟ್‌ಗಳಿವೆ. ಮನೆ ಮನೆಗೆ ಪೊಲೀಸ್ ಕಾರ್ಯಕ್ರಮದ ಬಗ್ಗೆ ಜನರಿಗೆ ಒಂದು ರೀತಿಯ ಆತಂಕವಿತ್ತು. ಈಗ ಸರಿಯಾಗಿದೆ. ಮನೆಗಳಿಗೆ ಭೇಟಿ ನೀಡಿದಾಗ, ಮಹಿಳಾ ಮತ್ತು ಮಕ್ಕಳ ಮೇಲಿನ ದೌರ್ಜನ್ಯ, ಸೈಬರ್ ಕ್ರೈಂ, ಮಾದಕ ದ್ರವ್ಯ ಬಳಕೆಯ ದುಷ್ಪರಿಣಾಮ ಕುರಿತು ಜಾಗೃತಿ ಮೂಡಿಸಲು ಅನುಕೂಲವಾಗುತ್ತಿದೆ ಎಂದು ಶಿವಮೊಗ್ಗ ಜಿಲ್ಲೆ ಎಸ್ಪಿ ಮಿಥುನ್‌ ಮಾಹಿತಿ ಹಂಚಿಕೊಂಡರು.