ವಿಜಯಪುರ(ಏ.27): ಜಿಲ್ಲೆಯಲ್ಲಿ ಮೊದಲು ಕೊರೋನಾ ವೈರಸ್‌ ಪಾಸಿಟಿವ್‌ ಕಾಣಿಸಿಕೊಂಡಿದ್ದ 60 ವರ್ಷದ ವೃದ್ಧೆ ಪಿ.221 ಭಾನುವಾರ ನಗರದ ಕೋವಿಡ್‌ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ.
ಈ ವೃದ್ಧೆ ಆಸ್ಪತ್ರೆಯಿಂದ ಬಿಡುಗಡೆಯಾದ ವಿಜಯಪುರದ ಮೊದಲ ರೋಗಿಯಾಗಿದ್ದಾರೆ. ಇದೇ ವೃದ್ಧೆಯಿಂದ 32 ಜನರಿಗೆ ಕೊರೋನಾ ಸೋಂಕು ಹರಡಿತ್ತು.

ನಗರದಲ್ಲಿ ಖಾಸಗಿ ಅಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ವೃದ್ಧೆಯನ್ನು ನಂತರ ಕೋವಿಡ್‌ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಏ. 12 ರಂದು ವೃದ್ಧೆಗೆ ಕೊರೋನಾ ಪಾಸಿಟಿವ್‌ ಕಂಡು ಬಂದಿತ್ತು. ಆಗ ವೃದ್ಧೆಗೆ ತೀವ್ರ ಉಸಿರಾಟ ತೊಂದರೆ ಕಾಣಿಸಿಕೊಂಡಿತ್ತು. ಭಾನುವಾರ ಕೋವಿಡ್‌ ಆಸ್ಪತ್ರೆಯಿಂದ ವೃದ್ಧೆ ಬಿಡುಗಡೆಯಾದರು.

ಬೆಂಗಳೂರಿಂದ ಉತ್ತರ ಪ್ರದೇಶಕ್ಕೆ 41 ಕಾರ್ಮಿಕರ ಸೈಕಲ್‌ ಸವಾರಿ: 2000 ಕಿ.ಮೀ. ಜರ್ನಿ

ಐಸಿಯು ಸೇರಿ ಇನ್ನಿತರ ನಿರಂತರ ಚಿಕಿತ್ಸೆ, ವೈದ್ಯರು ಮತ್ತು ವೈದ್ಯ ಸಿಬ್ಬಂದಿ, ತಜ್ಞರ ಕಾಳಜಿಯಿಂದಾಗಿ ಮತ್ತು ಜಿಲ್ಲಾಧಿಕಾರಿಗಳು ಹಾಗೂ ಜಿಪಂ ಸಿಇಒ ಅವರ ಸೂಕ್ತ ಮಾರ್ಗದರ್ಶನದಲ್ಲಿ ರೋಗಿ ಸಂಖ್ಯೆ ಪಿ-221 ಸಂಪೂರ್ಣ ಗುಣಮುಖ ಪಡಿಸಿದ ಶ್ರೇಯಸ್ಸು ಜಿಲ್ಲಾಡಳಿತ ಮತ್ತು ಜಿಲ್ಲೆಯ ವೈದ್ಯ ಸಿಬ್ಬಂದಿಗೆ ಸಲ್ಲುತ್ತದೆ. ಈ ಸಂದರ್ಭದಲ್ಲಿ ರೋಗಿ ಪಿ.221 ಎಲ್ಲ ವೈದ್ಯರಿಗೆ, ವೈದ್ಯ ಸಿಬ್ಬಂದಿಗಳಿಗೆ ಮತ್ತು ಶುಶ್ರೂ​ಷ​ಕಿ​ಯ​ರಿಗೆ ಭಾವುಕರಾಗಿ ಅಭಿನಂದನೆ ಸಲ್ಲಿಸಿದರು.

ಅತ್ಯಂತ ಕಠಿಣ ಪರಿಸ್ಥಿತಿಯಲ್ಲಿ ತಾವೂ ಈ ಆಸ್ಪತ್ರೆಗೆ ದಾಖಲಾಗಿದ್ದ ಬಗ್ಗೆ ಸ್ಮರಿಸಿದ ಅವರು ಅತ್ಯುತ್ತಮ ಉಪಚಾರದಿಂದ ಮತ್ತು ಸಿಬ್ಬಂದಿ ಸೇವೆಯಿಂದ ಗುಣಮುಖರಾಗಿರುವುದಾಗಿ ಸಂತಸ ವ್ಯಕ್ತಪಡಿಸಿದರು.
ಪಿ-221ಗೆ ಚಪ್ಪಾಳೆ ತಟ್ಟುವ ಮೂಲಕ ಮುಂದಿನ ಜೀವನಕ್ಕೆ ಶುಭ ಹಾರೈಸಲಾ​ಯಿತು. ಅತ್ಯಂತ ಸಂತಸದ ವಾತಾವರಣದಲ್ಲಿ ಆಂಬ್ಯುಲೆನ್ಸ್‌ ಮೂಲಕ ರೋಗಿ ಮನೆಗೆ ತೆರಳಲು ಅವಕಾಶ ಕಲ್ಪಿಸಲಾಯಿತು. ಅದರಂತೆ ರೋಗಿಗೆ ಜಿಲ್ಲಾಡಳಿತ ಪರವಾಗಿ ಡ್ರೈಫ್ರೂಟ್ಸ್‌ ಮತ್ತು ಸಸಿಯನ್ನು ನೀಡಿ ಶುಭ ಕೋರಲಾಯಿತು.

ಅಪರ ಜಿಲ್ಲಾಧಿಕಾರಿ ಡಾ.ಔದ್ರಾಮ, ಮಹಾನಗರ ಪಾಲಿಕೆ ಆಯುಕ್ತ ಹರ್ಷಾ ಶೆಟ್ಟಿ, ಡಾ.ಎಂ.ಬಿ ಬಿರಾದಾರ, ಡಾ.ಕವಿತಾ, ಡಾ.ಲಕ್ಕಣ್ಣನವರ, ಡಾ.ಧಾರವಾಡಕರ, ಡಾ.ಸಂಪತ್‌ ಕುಮಾರ ಗುಣಾರೆ ಸೇರಿದಂತೆ ಇತರ ವೈದ್ಯರು ಇದ್ದರು.

ಎಲ್ಲಾ ತಜ್ಞ ವೈದ್ಯರ, ನರ್ಸ್‌ಗಳ, ಲ್ಯಾಬ್‌ ಟೆಕ್ನಿಷಿಯನ್‌ಗಳ, ವೈದ್ಯ ಸಿಬ್ಬಂದಿ, ಸ್ವಚ್ಛತಾ ಸಿಬ್ಬಂದಿ ನೆರವಿನ ಮತ್ತು ಅತ್ಯುತ್ತಮ ಸೇವೆಯಿಂದಾಗಿ ಹಾಗೂ ರೋಗಿಯ ಸಹಕಾರದಿಂದ ಕೋವಿಡ್‌-19 ಸೋಂಕಿತ ರೋಗಿಯನ್ನು ಗುಣಪಡಿಸಲು ಸಾಧ್ಯವಾಗಿದೆ. ಡಿಸಿ, ಎಸ್ಪಿ, ಜಿಪಂ ಸಿಇಒ ಮಾರ್ಗದರ್ಶನ ಮತ್ತು ಎಲ್ಲರ ಸಹಕಾರದಿಂದ ಈ ಸಾಧನೆ ಸಾಧ್ಯವಾಗಿದೆ. 36 ರೋಗಿಗಳು ಸಹ ಗುಣಮುಖರಾಗುವ ಆಶಾಭಾವನೆ ಇದೆ ಎಂದು ಜಿಲ್ಲಾಸ್ಪತ್ರೆ ಸರ್ಜನ್‌ ಶರಣಪ್ಪ ಕಟ್ಟಿ ಅವರು ಹೇಳಿದ್ದಾರೆ. 

ರೋಗಿಯು ಆಸ್ಪತ್ರೆಗೆ ದಾಖಲಾತಿ ಸಂದರ್ಭದಲ್ಲಿ ಅತ್ಯಂತ ಗಂಭೀರ ಪರಿಸ್ಥಿತಿಯಲ್ಲಿದ್ದರು. ಐಸಿಯು ಸೇರಿದಂತೆ ಇತರೆ ಚಿಕಿತ್ಸೆಗಳನ್ನು ನೀಡಿದ ಫಲವಾಗಿ ರೋಗಿಯಲ್ಲಿ ಚೇತರಿಕೆ ಕಂಡುಬಂದು ಇಂದು ಗುಣಮುಖರಾಗಿದ್ದಾರೆ. ರೋಗಿಯಲ್ಲಿ ಸದ್ಯಕ್ಕೆ ಯಾವುದೇ ಕೊರೋನಾ ಲಕ್ಷಣ ಇಲ್ಲ. ಸ್ವಲ್ಪ ವಿಶ್ರಾಮದ ಅವಶ್ಯಕತೆಯಿದ್ದು, 14 ದಿನ ಹೋಂ ಕ್ವಾರಂಟೈನ್‌ ಮೂಲಕ ತೀವ್ರ ನಿಗಾ ಇಡಲಾಗುತ್ತದೆ ಎಂದು ಪಿ-221ಗೆ ಚಿಕಿತ್ಸೆ ನೀಡಿದ ವೈದ್ಯ ಡಾ.ಹರೀಶ್‌ ಪೂಜಾರ ಅವರು ಹೇಳಿದ್ದಾರೆ.  

ಪ್ರತಿನಿತ್ಯ ನಿರಂತರ ಚಿಕಿತ್ಸೆ ಮತ್ತು ನಿಗಾದಿಂದಾಗಿ, ನರ್ಸ್‌ ಶಾಂತಾ ಅವರು ರೋಗಿಗೆ ಚಿಕಿತ್ಸೆಯಲ್ಲಿ ನೆರವಾಗಲು ಮತ್ತು ವೈದ್ಯಾಧಿಕಾರಿಗಳಿಗೆ ಅವರ ಅವಶ್ಯಕತೆಗಳಿಗೆ ಅನುಗುಣವಾಗಿ ರೋಗಿಯ ರೋಗ ನಿವಾರಣೆಗೆ ಶ್ರಮಿಸಿದ್ದು, ಅಧಿಕಾರಿಗಳ ಸಹಾಯ ಮತ್ತು ಮಾರ್ಗದರ್ಶನ ನೆರವಾಯಿತು ಎಂದು ವೈದ್ಯಕೀಯ ಸಿಬ್ಬಂದಿ ಶರಣಬಸಪ್ಪ ಹಿಪ್ಪರಗಿ ಹೇಳಿದ್ದಾರೆ.