ರಾಮನಗರ ಬಳಿ ಗೂಡ್ಸ್‌ ವಾಹನಕ್ಕೆ ಡಿಕ್ಕಿ, 25 ಮಂದಿಗೆ ಗಾಯ, ಬೊಲೆರೋ ಟೈರ್‌ ಸ್ಫೋಟದಿಂದ ಅಪಘಾತ, ಪ್ಲಾಸ್ಟಿಕ್‌ ಶೀಟ್‌ ಚುಚ್ಚಿ ಚಾಲಕ ಸಾವು

ಬೆಂಗಳೂರು/ರಾಮನಗರ(ಜೂ.29):  ಮೈಸೂರು-ಬೆಂಗಳೂರು ಹೆದ್ದಾರಿಯಲ್ಲಿ ಬುಧವಾರ ಕೆಎಸ್‌ಅರ್‌ಟಿಸಿಯ ಎಲೆಕ್ಟ್ರಿಕ್‌ ವಾಹನವಾದ ಇವಿ ಪವರ್‌ಪ್ಲಸ್‌ ಬಸ್‌ ಹಾಗೂ ಬೊಲೆರೋ ವಾಹನದ ನಡುವೆ ಅಪಘಾತ ಸಂಭವಿಸಿದೆ. ಎಲೆಕ್ಟ್ರಿಕ್‌ ಬಸ್‌ ಸೇವೆ ಆರಂಭವಾದ ಮೂರು ತಿಂಗಳಲ್ಲಿ ಇದು ಮೊದಲ ಅಪಘಾತವಾಗಿದೆ. ಘಟನೆಯಲ್ಲಿ ಬಸ್‌ ಚಾಲಕ ಜಿ. ರಮೇಶ್‌ (48) ಸಾವನ್ನಪ್ಪಿದ್ದಾರೆ. ಪ್ರಯಾ​ಣಿ​ಕರ ಪೈಕಿ 25 ಮಂದಿ ಗಾಯಗೊಂಡಿದ್ದು, ಈ ಪೈಕಿ ಐವರಿಗೆ ಗಂಭೀರ​ವಾಗಿ ಗಾಯ​ಗಳಾಗಿವೆ.

ರಾಮನಗರ ತಾಲೂ​ಕಿನ ಜಯ​ಪುರ ಬಳಿಯ ಬೆಂಗ​ಳೂರು-ಮೈಸೂರು ರಾಷ್ಟ್ರೀಯ ಹೆದ್ದಾ​ರಿ​ಯಲ್ಲಿ ಎಲೆಕ್ಟ್ರಿಕ್‌ ಬಸ್‌ ಮಡಿಕೇರಿಯಿಂದ ಬೆಂಗಳೂರಿಗೆ ಬರುತ್ತಿತ್ತು. ಬಸ್‌ನ ಎದುರು ಬೊಲೆರೋ ಗೂಸ್ಟ್‌ ವಾಹನ, ಒಳಭಾಗ ಹಾಗೂ ಮೇಲ್ಭಾಗದಲ್ಲಿ 17ಕ್ಕೂ ಹೆಚ್ಚಿನ 20 ಎಂಎಂ ಪಾಲಿ ಶೀಟ್‌ಗಳನ್ನು ತುಂಬಿಕೊಂಡು ಸಾಗುತ್ತಿತ್ತು. ಆಗ ಬೊಲೆರೋ ವಾಹನದ ಟೈರ್‌ ಬಸ್ಟ್‌ ಆಗಿದ್ದು, ಅದರ ವೇಗ ಕಡಿಮೆಯಾಗಿದೆ. ಹೀಗಾಗಿ ಎಲೆಕ್ಟ್ರಿಕ್‌ ಬಸ್‌ ಬೊಲೇರೋ ವಾಹನಕ್ಕೆ ಡಿಕ್ಕಿ ಹೊಡೆದಿದೆ. ಅದರ ಪರಿಣಾಮ ಪಾಲಿ ಶೀಟ್‌ಗಳು ಬಸ್‌ನ ಮುಂಭಾಗದ ಗಾಜು ಒಡೆದು ಒಳಗೆ ನುಗ್ಗಿದ್ದು, ಚಾಲಕ ಜಿ. ರಮೇಶ್‌ಗೆ ಚುಚ್ಚಿವೆ. ಅದರಿಂದ ರಮೇಶ್‌ ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾರೆ.

ಕಿಟಕಿಯಿಂದ ಬಸ್‌ ಹತ್ತುವಾಗ ಮಹಿಳೆ ಕೈ ತುಂಡು ಶುದ್ಧಸುಳ್ಳು: ಕೆಎಸ್‌ಆರ್‌ಟಿಸಿ ಸ್ಪಷ್ಟನೆ

ಬಳಿಕ ಬಸ್‌ ನಿಯಂತ್ರಣ ತಪ್ಪಿ ಡಿವೈಡರ್‌ಗೆ ಡಿಕ್ಕಿ ಹೊಡೆದು ಪಕ್ಕದ ಜಮೀನಿಗೆ ನುಗ್ಗಿದೆ. ಅಪಘಾತದಲ್ಲಿ ಪ್ರಯಾಣಿಕರಿಗೆ ಗಾಯಗಳಾಗಿವೆ. ಎಲ್ಲ​ರನ್ನು ರಾಮ​ನ​ಗರ ಸರ್ಕಾರಿ ಆಸ್ಪ​ತ್ರೆಗೆ ದಾಖ​ಲಿ​ಸಲಾಗಿದೆ. ಕಳೆದ ಮಾರ್ಚ್‌ನಿಂದ ಕೆಎಸ್‌ಅರ್‌ಟಿಸಿ ಎಲೆಕ್ಟ್ರಿಕ್‌ ಬಸ್‌ಗಳ ಮೂಲಕ ಸೇವೆ ನೀಡುತ್ತಿದ್ದು, ಇದೇ ಮೊದಲ ಅಪಘಾತವಾಗಿದೆ. ಎಲೆಕ್ಟ್ರಿಕ್‌ ಬಸ್‌ನಲ್ಲಿ ಯಾವುದೇ ದೋಷವಿಲ್ಲದಿದ್ದರೂ ಅಪಘಾತವಾಗಿದೆ.