ಬೆಂಗಳೂರು(ನ.08): ಕೊರೋನಾ ಸೋಂಕಿತರಿಗೆ ಮಾರಕವಾಗಲಿದೆ ಎಂಬ ಕಾರಣಕ್ಕೆ ಸಾಂಪ್ರದಾಯಕ ಪಟಾಕಿ ಬದಲು ಹಸಿರು ಪಟಾಕಿ ಮಾರಾಟಕ್ಕೆ ರಾಜ್ಯ ಸರ್ಕಾರ ಅವಕಾಶ ನೀಡಿದ ಬೆನ್ನಲ್ಲೆ ಮಾರುಕಟ್ಟೆಯಲ್ಲಿ ಪಟಾಕಿ ಮಾರಾಟದ ಸದ್ದು ಜೋರಾಗಿದೆ.

ಪಟಾಕಿ ಸಂಬಂಧ ರಾಜ್ಯ ಸರ್ಕಾರ ನಿರ್ಧಾರ ತೆಗೆದುಕೊಳ್ಳುವ ಮುನ್ನವೇ ರಾಜ್ಯದಾದ್ಯಂತ ಸಗಟು ಪಟಾಕಿ ವ್ಯಾಪಾರಿಗಳು, ವಿತರಕರು ಶೇ.30ರಷ್ಟು ಪಟಾಕಿ ಖರೀದಿಸಿದ್ದರು. ಆದರೆ, ಕೊರೋನಾ ಹಾಗೂ ಸರ್ಕಾರದ ಗೊಂದಲದ ಹೇಳಿಕೆ ಹಿನ್ನೆಲೆ ಮಳಿಗೆ ತೆರೆಯಲು ಹಿಂದೇಟು ಹಾಕಿದ್ದರು. ಈಗ ಎಲ್ಲೆಡೆ ಪಟಾಕಿ ಮಾರಾಟ ನಡೆಯುತ್ತಿದ್ದು, ಗ್ರಾಹಕರು ರೋಗದ ಭೀತಿ ಬದಿಗಿಟ್ಟು ಉತ್ಸಾಹದಿಂದ ಖರೀದಿಸುತ್ತಿದ್ದಾರೆ. ಆದರೆ ಬೆಂಗಳೂರು ನಗರದಲ್ಲಿ ಪಟಾಕಿ ಮಳಿಗೆ ತೆರೆಯಲು ಇನ್ನೂ ಅನುಮತಿ ನೀಡಿಲ್ಲ. ಸದ್ಯ ಅಧಿಕೃತ ಮಾರಾಟಗಾರರು ಅಂಗಡಿಗಳಲ್ಲಿ ಮಾತ್ರ ಮಾರಾಟ ಮಾಡುತ್ತಿದ್ದಾರೆ.

ನಗರ ಹಾಗೂ ಹೊರ ವಲಯದಲ್ಲಿ ಪಟಾಕಿ ವ್ಯಾಪಾರ-ವಹಿವಾಟು ಕಳೆಗಟ್ಟಿದೆ. ಹಸಿರು ಪಟಾಕಿ ಮಾರಾಟ ನೆಪ ಮಾಡಿಕೊಂಡ ಮಾರಾಟಗಾರರು ಎಂದಿನಂತೆ ಪಟಾಕಿ ಮಾರಾಟ ಮಾಡುತ್ತಿದ್ದಾರೆ. ಕೆಲವರು ಮಾತ್ರ ಹಸಿರು ಪಟಾಕಿ ಖರೀದಿಗೆ ಆಸಕ್ತಿ ತೋರುತ್ತಿದ್ದರೆ, ಬಹುತೇಕರು ಸಾಂಪ್ರದಾಯಿಕ ಪಟಾಕಿಗಳಿಗೆ ಬೇಡಿಕೆ ಇಡುತ್ತಿದ್ದಾರೆ. ಹೀಗಾಗಿ ಕೆಲ ವ್ಯಾಪಾರಿಗಳು ಹಸಿರು ಪಟಾಕಿ ಜತೆಗೆ ಸಾಂಪ್ರದಾಯಕ ಪಟಾಕಿಗಳನ್ನು ಮಾರಾಟ ಮಾಡುತ್ತಿದ್ದಾರೆ. ಆದರೆ, ವ್ಯಾಪಾರಿಗಳು ಮಾತ್ರ ಸರ್ಕಾರದ ಆದೇಶವನ್ನು ಪಾಲಿಸುತ್ತಿರುವುದಾಗಿ ಹೇಳುತ್ತಿದ್ದಾರೆ. ಗ್ರಾಹಕರು ಹಸಿರು ಪಟಾಕಿಯೋ ಅಥವಾ ಸಾಂಪ್ರದಾಯಿಕ ಪಟಾಕಿಯೋ ಎಂಬುದನ್ನು ಅರಿಯದೆ ಖರೀದಿ ಮಾಡುತ್ತಿದ್ದಾರೆ.

ಕೊರೋನಾ ರೋಗಿಗಳ ಸುರಕ್ಷೆ: ಈ ಬಾರಿ ಪಟಾಕಿ ಸಿಡಿಸುವಂತಿಲ್ಲ

ಹಸಿರು ಪಟಾಕಿ ಮಾತ್ರ ಮಾರಾಟ:

2019ರಲ್ಲೇ ಸುಪ್ರೀಂಕೋರ್ಟ್‌ ಆದೇಶದಂತೆ ಮಾಲಿನ್ಯ ರಹಿತ ಹಸಿರು ಪಟಾಕಿಗಳನ್ನು ತಯಾರಿಸಲಾಗುತ್ತಿದೆ. ನಾವು ಸಹ ಅವುಗಳನ್ನೇ ಮಾರಾಟ ಮಾಡುತ್ತಿದ್ದೇವೆ. ಆದರೆ, ಹಸಿರು ಪಟಾಕಿಗಿಂತ ಇತರೆ ಪಟಾಕಿಗಳು ಕಡಿಮೆ ಬೆಲೆಗೆ ಸಿಗುತ್ತದೆ. ಬಡವರು ಹಸಿರು ಪಟಾಕಿ ಕೇಳುವುದಿಲ್ಲ. ಕಡಿಮೆ ಬೆಲೆಗೆ ಸಿಗುವ ಪಟಾಕಿಗಳ ಖರೀದಿಸುತ್ತಾರೆ. ಈ ಮಧ್ಯೆ ಮಾರಾಟಕ್ಕೆ ಪರವಾನಗಿ ಸಿಗುತ್ತದೋ ಇಲ್ಲವೋ ಅಂತ ಸಂಶಯದಿಂದ ಕೆಲವು ವ್ಯಾಪಾರಿಗಳೇ ಪಟಾಕಿಗಳ ಖರೀದಿಗೆ ಆಸಕ್ತಿ ತೋರುತ್ತಿಲ್ಲ ಎಂದು ಎಚ್‌ಎಸ್‌ಆರ್‌ ಲೇಔಟ್‌ನ ಕ್ರಾಕ​ರ್‍ಸ್ ಬಜಾರ್‌ನ ಸುದರ್ಶನ್‌ ಹೇಳಿದರು.

ಸರ್ಕಾರದ ನಡೆ ಈ ವರ್ಷ ವ್ಯಾಪಾರದ ಮೇಲೆ ವ್ಯತಿರಿಕ್ತ ಪರಿಣಾಮ ಬೀರಿದೆ. ಕಳೆದ ವರ್ಷ 30 ಲಕ್ಷಕ್ಕೂ ಹೆಚ್ಚು ವ್ಯಾಪಾರವಾಗಿತ್ತು. ಈ ಹಿಂದಿನ ವರ್ಷ ಇದೇ ಸಮಯದಲ್ಲಿ ದಿನಕ್ಕೆ ಒಂದು ಲಕ್ಷದವರೆಗೂ ಖರೀದಿಯಾಗುತ್ತಿತ್ತು. ಆದರೆ, ಈ ವರ್ಷ ಪ್ರತಿದಿನ 10 ಸಾವಿರದಿಂದ 15 ಸಾವಿರ ರು. ವ್ಯಾಪಾರವಾಗುತ್ತಿದೆ. ಈ ವರ್ಷ ಶೇ.50ರಿಂದ 60ರಷ್ಟುವ್ಯಾಪಾರವಾಗುವ ನಿರೀಕ್ಷೆಯಿದೆ ಎಂದು ಹೊಸೂರು ರಸ್ತೆಯ ಎಸ್‌ಎಲ್‌ವಿ ಪಟಾಕಿ ಅಂಗಡಿ ಮಾಲೀಕ ರಾಮಸ್ವಾಮಿ ‘ಕನ್ನಡಪ್ರಭ’ಕ್ಕೆ ಮಾಹಿತಿ ನೀಡಿದರು.

ಮಾರುಕಟ್ಟೆಯಲ್ಲಿ ಕನಿಷ್ಠ 50 ರು.ನಿಂದ ಎಂಟು ಸಾವಿರ ರು.ವರೆಗೆ ಪಟಾಕಿ ಬೆಲೆ ಇದೆ. ಗಿಫ್ಟ್‌ ಬಾಕ್ಸ್‌ಗಳನ್ನು ರಿಯಾಯಿತಿ ದರದಲ್ಲಿ ಮಾರುತ್ತಿದ್ದೇವೆ. ಗ್ರಾಹಕರು ಹಸಿರು ಪಟಾಕಿ, ವಿಷ್ಣುಚಕ್ರ, ಹೂಕುಂಡ, ಸ್ಕೈಶಾಟ್‌, ಮಕ್ಕಳು ಸಿಡಿಸುವ ಪಟಾಕಿಗಳನ್ನು ಹೆಚ್ಚಿನದಾಗಿ ಖರೀದಿಸುತ್ತಿದ್ದಾರೆ. ಪಟಾಕಿ ಮೇಲೆ ಹಸಿರು ಬಣ್ಣದ ಚಿಹ್ನೆಯ ಗುರುತು ಇರುತ್ತದೆ. ಪರವಾನಗಿ ಪಡೆದವರು ಹಸಿರು ಪಟಾಕಿ ಮಾರಾಟ ಮಾಡುತ್ತಿದ್ದಾರೆ. ಗ್ರಾಹಕರು ಚಿಹ್ನೆ ಪರಿಶೀಲಿಸಿ ಪಟಾಕಿ ಖರೀದಿಸಬೇಕು ಎಂದು ರಾಮಸ್ವಾಮಿ ಹೇಳಿದರು.

ಲಾಕ್‌ಡೌನ್‌ ಸಮಯದಲ್ಲೇ ಪಟಾಕಿ ಮಾರಾಟ ನಿಷೇಧ ಕುರಿತಂತೆ ನಿರ್ಧಾರ ತೆಗೆದುಕೊಳ್ಳಬೇಕಿತ್ತು. ಸರ್ಕಾರದ ದಿಢೀರ್‌ ನಿರ್ಧಾರ ವ್ಯಾಪಾರದ ಮೇಲೆ ಪರಿಣಾಮ ಬೀರಿದೆ. ಲಕ್ಷಾಂತರ ರು. ಸಾಲ ಮಾಡಿ ಸರಕುಗಳನ್ನು ತರಿಸಿರುತ್ತೇವೆ. ವ್ಯಾಪಾರ ನಡೆಯದಿದ್ದರೆ ಆರ್ಥಿಕ ನಷ್ಟಕ್ಕೆ ಗುರಿಯಾಗುತ್ತೇವೆ ಎಂದು ಅಳಲು ತೋಡಿಕೊಳ್ಳುತ್ತಿದ್ದಾರೆ ವ್ಯಾಪಾರಿಗಳು.

ಕೊರೋನಾ ಹಿನ್ನೆಲೆ ಸರ್ಕಾರದ ಕ್ರಮ ಒಪ್ಪಬಹುದು. ಆದರೆ, ಸರ್ಕಾರದ ದಿಢೀರ್‌ ನಿರ್ಧಾರ ಸರಿಯಲ್ಲ. ದೀಪಾವಳಿಯಲ್ಲಿ ಪಟಾಕಿ ಸಿಡಿಸುವುದು ನಮ್ಮ ಪದ್ಧತಿ. ನಾವು ಹಸಿರು ಪಟಾಕಿ ಕೇಳಿದರೂ ಅಂಗಡಿಯವರು ಯಾವುದಾದರೂ ನೀಡಬಹುದಲ್ಲವೇ? ಒಟ್ಟಿನಲ್ಲಿ ಹಸಿರು ಪಟಾಕಿ ಎಂಬ ಗುರುತು ಇರುವ ಪಟಾಕಿಗಳನ್ನು ಖರೀದಿ ಮಾಡುತ್ತಿದ್ದೇವೆ ಎಂದು ಗ್ರಾಹಕರೊಬ್ಬರು ಹೇಳಿದರು.