ಡಂಬಳ(ಮಾ.27): ಡಂಬಳ ಹೋಬಳಿಯ ಹಾರೂಗೇರಿ ವ್ಯಾಪ್ತಿಯ ಕಪ್ಪತ್ತಗುಡ್ಡದಲ್ಲಿ ಶುಕ್ರವಾರ ಹಗಲು ಬೆಂಕಿ ಕಂಡು ಬಂದರೆ, ಚಿಕ್ಕವಡ್ಡಟ್ಟಿ ವ್ಯಾಪ್ತಿಯಲ್ಲಿ ಶುಕ್ರವಾರ ರಾತ್ರಿ ಸುಮಾರಿಗೆ ಬೆಂಕಿ ಕಾಣಿಸಿಕೊಂಡಿದೆ.

ಸತತ 25 ತಾಸಿಗೂ ಹೆಚ್ಚು ಕಾಲ ಕಪ್ಪತ್ತಗುಡ್ಡ ಉರಿಯುತ್ತಿದೆ. 150ಕ್ಕೂ ಹೆಚ್ಚು ಎಕರೆ ಪ್ರದೇಶ ಬೆಂಕಿಗೆ ಆಹುತಿಯಾಗಿದೆ. ವಿವಿಧ ಅಮೂಲ್ಯವಾದ ಸಸ್ಯ ಸಂಪತ್ತು, ದೊಡ್ಡ-ಸಣ್ಣ ವನ್ಯಜೀವಿಗಳು ಬೆಂಕಿಯ ಜ್ವಾಲೆಗೆ ಸಿಕ್ಕು ನಾಶವಾಗಿರುವ ಶಂಕೆ ಇದೆ. ಈ ವರ್ಷದ ಪ್ರಾರಂಭದಿಂದ ಇಲ್ಲಿಯವರೆಗೆ 2,500ಕ್ಕೂ ಅಧಿಕ ಎಕರೆ ಅರಣ್ಯ ಬೆಂಕಿಯ ಜ್ವಾಲೆಗೆ ಸಿಲುಕಿದೆ ಎಂದು ಅಂದಾಜಿಸಲಾಗುತ್ತಿದೆ. ಇತ್ತೀಚೆಗೆ ಕಿಡಿಗೇಡಿಗಳು ಪದೇ ಪದೇ ಬೆಂಕಿ ಹಚ್ಚುವ ದುಸ್ಸಾಹಸ ಮಾಡುತ್ತಿದ್ದಾರೆ. ಆದರೆ ಈ ವರೆಗೆ ಯಾರ ವಿರುದ್ಧವೂ ಪ್ರಕರಣ ದಾಖಲಾಗಿಲ್ಲ. ಅಲ್ಲದೆ ಇಲ್ಲಿಯವರೆಗೆ ನಾಶವಾದ ಅರಣ್ಯ ಸಂಪತ್ತಿನ ಮೌಲ್ಯದ ಸಮೀಕ್ಷೆ ಕೂಡ ನಡೆದಿಲ್ಲ.

ಗದಗ: ಕಪ್ಪತ್ತಗುಡ್ಡಕ್ಕೆ ಮತ್ತೆ ಬೆಂಕಿ, ಅಪಾರ ಹಾನಿ

ಇಲ್ಲಿಯವರೆಗೂ ಯಾವೊಬ್ಬ ಜನಪ್ರತಿನಿಧಿಯಾಗಲಿ, ಅಧಿಕಾರಿಯಾಗಲಿ ಈ ಕುರಿತು ಪ್ರತಿಕ್ರಿಯೆ ನೀಡಿಲ್ಲ. ಇದು ಈ ಭಾಗದ ಪರಿಸರ ಪ್ರೇಮಿಗಳ ಆಕ್ರೋಶಕ್ಕೆ ಕಾರಣವಾಗಿದೆ. ವೇಗವಾಗಿ ಬೀಸುತ್ತಿರುವ ಬಿಸಿಗಾಳಿಯ ಮಧ್ಯೆ ಬೆಂಕಿಯು ವಿವಿಧ ಪ್ರದೇಶಗಳಿಗೆ ವ್ಯಾಪಕವಾಗಿ ಹರಡಿಕೊಳ್ಳುತ್ತಿದೆ. ಕಲ್ಲುಮುಳ್ಳುಗಳ ಪ್ರದೇಶಗಳ ಮಧ್ಯೆ ವಿಪರೀತವಾಗಿ ಬೆಳೆದು ನಿಂತಿರುವ ಬಾದೆಹುಲ್ಲಿನ ಮಧ್ಯೆ ಸಿಬ್ಬಂದಿ ವರ್ಗ ಬೆಂಕಿ ನಂದಿಸುವ ಕೆಲಸವನ್ನು ಮಾಡುತ್ತಿದ್ದಾರೆ ಎಂದು ಮುಂಡರಗಿ ಅರಣ್ಯ ವಲಯ ಅಧಿಕಾರಿ ಪ್ರದೀಪ ಪವಾರ ಹೇಳಿದ್ದಾರೆ.