Asianet Suvarna News Asianet Suvarna News

ಬೆಂಗಳೂರು: ಹೋಟೆಲ್‌, ಗೇಮ್‌ ಝೋನ್‌ಗಳಿಗೆ ‘ಅಗ್ನಿ’ ಪರೀಕ್ಷೆ..!

ಗೇಮ್‌ ಝೋನ್‌ ಸೇರಿದಂತೆ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭೇಟಿ ನೀಡುವ ಚಿತ್ರಮಂದಿರ, ಪಬ್‌, ರೆಸ್ಟೋರೆಂಟ್‌, ಮಾಲ್‌, ಹೋಟೆಲ್‌ ಸೇರಿದಂತೆ ಮೊದಲಾದ ಸ್ಥಳಗಳಲ್ಲಿ ಸುರಕ್ಷತಾ ನಿಯಮ ಪರಿಶೀಲನೆಗೆ ಮುಂದಾದ ಬಿಬಿಎಂಪಿ 
 

Fire Test for Hotels and Game Zones in Bengaluru grg
Author
First Published May 31, 2024, 11:40 AM IST

ವಿಶ್ವನಾಥ ಮಲೇಬೆನ್ನೂರು

ಬೆಂಗಳೂರು(ಮೇ.31): ಗುಜರಾತ್‌ನ ಗೇಮ್‌ ಝೋನ್‌ನಲ್ಲಿ ಸಂಭವಿಸಿದ ಅಗ್ನಿ ದುರಂತದ ಹಿನ್ನೆಲೆಯಲ್ಲಿ ಬಿಬಿಎಂಪಿಯು, ಗೇಮ್‌ ಝೋನ್‌ ಸೇರಿದಂತೆ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭೇಟಿ ನೀಡುವ ಚಿತ್ರಮಂದಿರ, ಪಬ್‌, ರೆಸ್ಟೋರೆಂಟ್‌, ಮಾಲ್‌, ಹೋಟೆಲ್‌ ಸೇರಿದಂತೆ ಮೊದಲಾದ ಸ್ಥಳಗಳಲ್ಲಿ ಸುರಕ್ಷತಾ ನಿಯಮ ಪರಿಶೀಲನೆಗೆ ಮುಂದಾಗಿದೆ. ಗುಜರಾತ್‌ ದುರಂತದ ಹಿನ್ನೆಲೆಯಲ್ಲಿ ನಗರದ ಎಲ್ಲ ಗೇಮ್‌ ಝೋನ್‌ ಪರಿಶೀಲನೆ ನಡೆಸಿ ಈ ರೀತಿಯ ಘಟನೆಗಳು ನಗರದಲ್ಲಿ ಸಂಭವಿಸದಂತೆ ಕ್ರಮ ಕೈಗೊಳ್ಳುವಂತೆ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಬಿಬಿಎಂಪಿ ಅಧಿಕಾರಿಗಳಿಗೆ ಸೂಚನೆ ನೀಡಿದ್ದರು.

ಈ ಹಿನ್ನೆಲೆಯಲ್ಲಿ ನಗರದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಮಕ್ಕಳು, ಮಹಿಳೆಯರು ಸೇರಿದಂತೆ ಸಾರ್ವಜನಿಕರು ಭೇಟಿ ನೀಡಬಹುದಾದ ಸಾರ್ವಜನಿಕ ಕೇಂದ್ರಗಳಲ್ಲಿನ ಅಗ್ನಿ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳಲಾಗಿದೆಯೇ ಎಂಬುದನ್ನು ಪರಿಶೀಲನೆ ನಡೆಸುವಂತೆ ಪಾಲಿಕೆಯ ಅಧಿಕಾರಿಗಳಿಗೆ ಬಿಬಿಎಂಪಿ ಆರೋಗ್ಯ ವಿಭಾಗದ ಮುಖ್ಯ ಆರೋಗ್ಯಾಧಿಕಾರಿ ನಿರ್ದೇಶಿಸಿದ್ದಾರೆ.

25 ಮಕ್ಕಳ ಬಲಿ ಪಡೆದ ಗುಜರಾತ್ ಗೇಮಿಂಗ್ ಸೆಂಟರ್ ಅಗ್ನಿ ಅನಾಹುತ: ಮೃತರ ಸಂಖ್ಯೆ 35ಕ್ಕೆ ಏರಿಕೆ

ಪರಿಶೀಲಿಸುವ ಸ್ಥಳಗಳು:

ಪಬ್‌, ರೆಸ್ಟೋರೆಂಟ್‌, ಹೋಟೆಲ್‌, ಸ್ಟಾರ್‌ ಹೋಟೆಲ್‌, ಶಾಪಿಂಗ್‌ ಮಾಲ್‌, ಸೂಪರ್‌ ಮಾರ್ಕೆಟ್‌, ತಯಾರಿಕಾ ಘಟಕಗಳು, ಬೋರ್ಡಿಂಗ್‌ ಮತ್ತು ಲಾಡ್ಜಿಂಗ್‌, ಕಲ್ಯಾಣ ಮಂಟಪ, ಪಿ.ಜಿ.ಗಳು, ನರ್ಸಿಂಗ್‌ ಹೂಮ್ಸ್‌, ಡಯಾಗ್ನಸ್ಟಿಕ್ಸ್‌, ಲ್ಯಾಬ್‌, ಗಾರ್ಮೆಂಟ್‌, ಉಗ್ರಾಣ ಕೇಂದ್ರ, ಪೆಟ್ರೋಲ್‌ ಬಂಕ್‌, ಚಿತ್ರಮಂದಿರ, ಜಾತ್ರೆ, ಸರ್ಕಸ್‌ ನಡೆಸುವ ಸ್ಥಳಗಳನ್ನು ಪರಿಶೀಲನೆಗೆ ಪಟ್ಟಿ ಮಾಡಲಾಗಿದೆ.

ತಂಡ ರಚನೆ:

ಈ ಸ್ಥಳಗಳ ಪರಿಶೀಲನೆಗೆ ವಲಯ ಮಟ್ಟದಲ್ಲಿ ತಂಡ ರಚಿಸುವಂತೆ ನಿರ್ದೇಶಿಸಲಾಗಿದೆ. ತಂಡದಲ್ಲಿ ವಲಯ ಆರೋಗ್ಯ ವೈದ್ಯಾಧಿಕಾರಿ, ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿಗಳು, ಆರೋಗ್ಯ ಮೇಲ್ವಿಚಾರಕರು ಮತ್ತು ಸಂಬಂಧಪಟ್ಟ ಅಗ್ನಿ ಶಾಮಕ ಅಧಿಕಾರಿಗಳು ಇರಲಿದ್ದಾರೆ.

2 ದಿನದಲ್ಲಿ ವರದಿ ಸಲ್ಲಿಕೆಗೆ ಸೂಚನೆ

ವಲಯವಾರು ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಲಾದ ಸ್ಥಳಗಳ ಪಟ್ಟಿಯೊಂದಿಗೆ ಅಗ್ನಿ ಸುರಕ್ಷತಾ ಕ್ರಮಗಳ ಉಲ್ಲಂಘನೆ ಮಾಡಲಾಗಿದೆ ಎಂಬುದು ಸೇರಿದಂತೆ ಕೈಗೊಂಡ ಕ್ರಮದ ಮೇ 31ರೊಳಗೆ ವರದಿ ಸಿದ್ಧಪಡಿಸಿ ನೀಡುವಂತೆ ಸೂಚಿಸಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಗೇಮ್‌ ಝೋನ್‌ ಜತೆಗೆ ಇತರೆ ಸ್ಥಳದಲ್ಲಿನ ಅಗ್ನಿ ಸುರಕ್ಷತಾ ಕ್ರಮ ಪರಿಶೀಲನೆ ನಡೆಸಲಾಗುತ್ತಿದೆ. ನಿಯಮ ಉಲ್ಲಂಘನೆಯಾಗಿದ್ದರೆ, ಸುರಕ್ಷತಾ ಕ್ರಮ ಕೈಗೊಳ್ಳುವಂತೆ ನೋಟಿಸ್ ನೀಡಲಾಗುವುದು. ಸರಿಪಡಿಸಿಕೊಂಡ ಬಳಿಕ ಸಾರ್ವಜನಿಕರ ಭೇಟಿಗೆ ಅವಕಾಶ ನೀಡಲಾಗುವುದು ಎಂದು ಬಿಬಿಎಂಪಿ ಆರೋಗ್ಯ ವಿಭಾಗದ ವಿಶೇಷ ಆಯುಕ್ತ ಸುರಲ್ಕರ್ ವಿಕಾಸ್ ಕಿಶೋರ್ ತಿಳಿಸಿದ್ದಾರೆ. 

ದೆಹಲಿ ಮಕ್ಕಳ ಆಸ್ಪತ್ರೆಯಲ್ಲಿ ಅಗ್ನಿ ಅವಘಡ: 7 ನವಜಾತ ಶಿಶುಗಳ ದಾರುಣ ಸಾವು

3 ಗೇಮ್‌ ಝೋನ್‌ಗೆ ಬೀಗ

ನಗರದಲ್ಲಿ ಅಗ್ನಿ ಸುರಕ್ಷತಾ ನಿಯಮಗಳನ್ನು ಪಾಲಿಸದ ನಗರದ ಮೂರು ಗೇಮ್‌ ಝೋನ್‌ಗಳ ತಾತ್ಕಾಲಿಕವಾಗಿ ಸ್ಥಗಿತಗೊಳಿಸುವಂತೆ ಬಿಬಿಎಂಪಿ ಸೂಚಿಸಿದೆ. ಬೆಂಗಳೂರಿನಲ್ಲಿ ಇರುವ ಒಟ್ಟು 29 ಗೇಮ್‌ ಝೋನ್‌ ಪರಿಶೀಲಿಸಲಾಗಿದೆ. ಈ ಪೈಕಿ ಮೂರು ಗೇಮ್‌ ಝೋನ್‌ನಲ್ಲಿ ವಿದ್ಯುತ್‌ ದೀಪದ ವ್ಯವಸ್ಥೆ ಸರಿಯಾಗಿ ಇಲ್ಲ. ಸುರಕ್ಷತೆ ಕ್ರಮಗಳನ್ನು ಕೈಗೊಂಡಿಲ್ಲ. ಪ್ರತ್ಯೇಕವಾಗಿ ಅಗ್ನಿ ಶಾಮಕ ಇಲಾಖೆಯಿಂದ ಪರವಾನಗಿ ಪಡೆದುಕೊಂಡಿಲ್ಲ. ಈ ಕಾರಣದಿಂದ ಮೂರು ಗೇಮ್‌ ಝೋನ್‌ ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ. ಅಗತ್ಯ ಸುರಕ್ಷತಾ ಕ್ರಮಗಳನ್ನು ಕೈಗೊಂಡ ಬಳಿಕ ಪುನರ್ ಆರಂಭಕ್ಕೆ ಅವಕಾಶ ನೀಡಲಾಗುವುದು ಎಂದು ಬಿಬಿಎಂಪಿ ಆರೋಗ್ಯ ವಿಭಾಗದ ವಿಶೇಷ ಆಯುಕ್ತ ಸುರಲ್ಕರ್ ವಿಕಾಸ್ ಕಿಶೋರ್ ‘ಕನ್ನಡಪ್ರಭ’ಕ್ಕೆ ಮಾಹಿತಿ ನೀಡಿದ್ದಾರೆ.

ನಗರದ ಎಲ್ಲಿ ಎಷ್ಟು ಗೇಮ್‌ ಝೋನ್‌ : ವಲಯ ಗೇಮ್‌ ಝೋನ್‌ ಸಂಖ್ಯೆ
ದಕ್ಷಿಣ 3
ಪಶ್ಚಿಮ 5
ಪೂರ್ವ 5
ಬೊಮ್ಮನಹಳ್ಳಿ 3
ಮಹದೇವಪುರ 4
ಯಲಹಂಕ 6
ಆರ್‌.ಆರ್‌.ನಗರ 3
ಒಟ್ಟು 29

Latest Videos
Follow Us:
Download App:
  • android
  • ios