ಬೆಂಗಳೂರು(ಫೆ.19): ವರ್ತೂರು ಸಮೀಪದ ಗುಂಜೂರಿನ ಪ್ರೆಸ್ಟೀಜ್‌ ಅಪಾರ್ಟ್‌ಮೆಂಟ್‌ ಪಕ್ಕದ ನೀಲಗಿರಿ ತೋಪಿನಲ್ಲಿ ಕಿಡಿಗೇಡಿಗಳು ಹಚ್ಚಿದ ಬೆಂಕಿ ಜ್ವಾಲೆಯಾಗಿ ಹೊತ್ತಿ ಉರಿದ ಘಟನೆ ಮಂಗಳವಾರ ನಡೆದಿದೆ.

ಮಂಗಳವಾರ ಮಧ್ಯಾಹ್ನ 1 ಸುಮಾರಿಗೆ ಸಣ್ಣದಾಗಿ ಕಾಣಿಸಿಕೊಂಡ ಬೆಂಕಿ, ಕ್ಷಣಾರ್ಧದಲ್ಲಿ ದಟ್ಟವಾಗಿ ಹೊತ್ತಿ ಉರಿಯಿತು. ನೋಡು ನೋಡುತ್ತಿದ್ದಂತೆ ಇಡೀ ನೀಲಗಿರಿ ತೋಪಿನಲ್ಲಿ ಆವರಿಸಿ ಸ್ಥಳೀಯ ನಿವಾಸಿಗಳು ಹಾಗೂ ಅಕ್ಕಪಕ್ಕದ ಮನೆಯ ನಿವಾಸಿಗಳ ಆತಂಕಕ್ಕೆ ಎಡೆಮಾಡಿಕೊಟ್ಟಿತು. ಆಕಾಶದೆತ್ತರಕ್ಕೆ ಹೊಗೆ ಆವರಿಸಿದ್ದರಿಂದ ಸುತ್ತಲ ಬಡಾವಣೆ ನಾಗರಿಕರು ಬೆಂಕಿ ಹೊತ್ತಿಕೊಂಡ ಪ್ರದೇಶದ ಸುತ್ತ ಜಮಾಯಿಸಿದ್ದರು.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ವರ್ತೂರು ಕೆರೆಯಿಂದ ಗುಂಜೂರು ಕೆರೆಗೆ ಹರಿಯುವ ರಾಜಕಾಲುವೆಯ ಸುಮಾರು 200 ಮೀ. ವ್ಯಾಪ್ತಿಗೆ ಹರಡಿತ್ತು. ಮಧ್ಯಾಹ್ನದ ಉರಿ ಬಿಸಿಲಿದ್ದರಿಂದ ಬೆಂಕಿಯ ಜ್ವಾಲೆ ಧಗಧಗಿಸಿ ಶರವೇಗದಲ್ಲಿ ಆವರಿಸುತ್ತಿತ್ತು. ಕಾಲುವೆ ಪಕ್ಕದಲ್ಲಿರುವ ಹುಲ್ಲಿನ ಮೂಲಕ ವರ್ತೂರು ಕೆರೆಗೂ ಬೆಂಕಿ ಆವರಿಸಬಹುದೇನೋ ಎಂಬ ಆತಂಕ ಮನೆ ಮಾಡಿತ್ತು. ಅಷ್ಟರಲ್ಲಿ ಘಟನಾ ಸ್ಥಳಕ್ಕೆ ಅಗ್ನಿಶಾಮಕ ದಳ ಸಿಬ್ಬಂದಿ ಮತ್ತು ವರ್ತೂರು ಠಾಣೆ ಪೊಲೀಸರು ಆಗಮಿಸಿ ಬೆಂಕಿ ನಂದಿಸುವ ಕಾರ್ಯ ಕೈಗೊಂಡರು.

ಸುಮಾರು ಅರ್ಧ ಗಂಟೆಗೂ ಹೆಚ್ಚಿನ ಕಾಲ ಅಗ್ನಿಶಾಮಕ ದಳದ ಸಿಬ್ಬಂದಿ ನೀರು ಹಾಯಿಸುವ ಮೂಲಕ ಸಂಪೂರ್ಣವಾಗಿ ಬೆಂಕಿಯನ್ನು ಆರಿಸಿದರು. ಇದರಿಂದ ಸ್ಥಳೀಯ ನಿವಾಸಿಗಳು ಹೆಚ್ಚಿನ ಅನಾಹುತ ತಪ್ಪಿತು ಎಂದು ಧನ್ಯವಾದ ಹೇಳಿದರು.