ಖಾನಾಪುರ:(ಸೆ.25) ಗೋವಾದ ಪಣಜಿಯಿಂದ ಗದಗದತ್ತ ಹೊರಟಿದ್ದ ರಾಜ್ಯ ಸಾರಿಗೆ ಸಂಸ್ಥೆಯ ಬಸ್ ಮತ್ತು ಬೆಳಗಾವಿಯಿಂದ ಗೋವಾದ ವಾಸ್ಕೋದತ್ತ ಹೊರಟಿದ್ದ ಸರಕು ಸಾಗಣೆ ಲಾರಿಗಳ ನಡುವೆ ಸಂಭವಿಸಿದ ರಸ್ತೆ ಅಪಘಾತದಲ್ಲಿ ಬಸ್ ಚಾಲಕ, ನಿರ್ವಾಹಕ ಸೇರಿದಂತೆ ನಾಲ್ವರಿಗೆ ಸಣ್ಣ-ಪುಟ್ಟ ಗಾಯಗಳಾಗಿವೆ. 


ಅಲ್ಲದೆ, ಅಪಘಾತದ ರಭಸಕ್ಕೆ ಎರಡೂ ವಾಹನಗಳಿಗೆ ಬೆಂಕಿ ತಗುಲಿ ಸುಟ್ಟು ಕರಕಲಾದ ಘಟನೆ ಸೋಮವಾರ ಮಧ್ಯರಾತ್ರಿ ತಾಲೂಕಿನ ಬೆಳಗಾವಿ-ಚೋರ್ಲಾ ರಾಜ್ಯ ಹೆದ್ದಾರಿಯ ಕಾಲಮನಿ ಗ್ರಾಮದ ಬಳಿ ಸಂಭವಿಸಿದೆ.

ರಾತ್ರಿ 9ಕ್ಕೆ ಪಣಜಿಯಿಂದ ಹೊರಟಿದ್ದ ಮುಂಡರಗಿ ಘಟಕಕ್ಕೆ ಸೇರಿದ ಬಸ್ ಕಣಕುಂಬಿ, ಜಾಂಬೋಟಿ, ಖಾನಾಪುರ, ಹುಬ್ಬಳ್ಳಿ, ಗದಗ ಜಿಲ್ಲೆ ಮುಂಡರಗಿ ಪಟ್ಟಣದತ್ತ ಸಾಗುತ್ತಿತ್ತು. ಮ್ಯಾಂಗನೀಸ್ ಅದಿರು ಹೊತ್ತ ಲಾರಿ ಗೋವಾದತ್ತ ಹೊರಟಿತ್ತು. ಕಾಲಮನಿ ಗ್ರಾಮದ ಬಳಿಯ ಇಳಿಜಾರಿನಲ್ಲಿ ಮಧ್ಯರಾತ್ರಿ ರಸ್ತೆಯ ಒಂದು ಬದಿಯಲ್ಲಿ ಬಿದ್ದಿದ್ದ ಕಂದಕವನ್ನು ತಪ್ಪಿಸುವ ಭರದಲ್ಲಿ ಲಾರಿ ಚಾಲಕ ಲಾರಿಯನ್ನು ರಸ್ತೆಯ ಮಧ್ಯಕ್ಕೆ ತಂದಿದ್ದು, ಇದೇ ಸಂದರ್ಭದಲ್ಲಿ ಎದುರಿನಿಂದ ವೇಗವಾಗಿ ಬಂದ ಬಸ್ ಚಾಲಕನ ನಿಯಂತ್ರಣ ಕಳೆದುಕೊಂಡು ಲಾರಿಯ ಡಿಸೈಲ್ ಟ್ಯಾಂಕಿಗೆ ರಭಸದಿಂದ ಗುದ್ದಿದೆ. 

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ 


ಅಪಘಾತದ ರಭಸಕ್ಕೆ ಡಿಸೇಲ್ ಟ್ಯಾಂಕಿಗೆ ಕೂಡಲೇ ಬೆಂಕಿ ಹತ್ತಿಕೊಂಡು ಎರಡೂ ವಾಹನಗಳಿಗೆ ಆವರಿಸಿದೆ. ಕ್ಷಣಾರ್ಧದಲ್ಲಿ ನಡೆದ ಈ ಅಪಘಾತದಿಂದ ಗಾಬರಿಗೊಂಡ ಬಸ್ ಪ್ರಯಾಣಿಕರು, ಬಸ್ ಚಾಲಕ, ನಿರ್ವಾಹಕ ಬಸ್‌ನಿಂದ ಕೆಳಗೆ ಜಿಗಿದಿದ್ದು, ಅತ್ತ ಲಾರಿಯ ಚಾಲಕ, ಕ್ಲೀನರ್ ಸಹ ಲಾರಿಯಿಂದ ಹೊರಗೆ ಜಿಗಿದು ಪ್ರಾಣಾಪಾಯದಿಂದ ಪಾರಾಗಿದ್ದಾರೆ. 


ಈ ಅಪಘಾತದಲ್ಲಿ ಗಾಯಗೊಂಡ ಬಸ್ ಚಾಲಕ, ನಿರ್ವಾಹಕ ಹಾಗೂ ಇಬ್ಬರು ಪ್ರಯಾಣಿಕರು ಬೆಳಗಾವಿಯ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಮೂಲಗಳು ತಿಳಿಸಿವೆ. 
ಘಟನಾ ಸ್ಥಳಕ್ಕೆ ಅಗ್ನಿಶಾಮಕ ದಳದ ವಾಹನಗಳು ತೆರಳಿ ಬೆಂಕಿ ನಂದಿಸಿದ್ದು, ಖಾನಾಪುರ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಸಂಬಂಧ ಖಾನಾಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಘಟನೆಯಲ್ಲಿ ನಾಲ್ವರಿಗೆ ಸಣ್ಣಪುಟ್ಟ ಗಾಯಗಳಾಗಿವೆ. 


ಪ್ರಯಾಣಿಕರ ಪರದಾಟ 


ಅಪಘಾತದಿಂದಾಗಿ ಸೋಮವಾರ ರಾತ್ರಿಯಿಂದ ಮಂಗಳವಾರ ಬೆಳಗಿನ ಜಾವದವರೆಗೆ ಕರ್ನಾಟಕ-ಗೋವಾ ರಾಜ್ಯಗಳ ನಡುವೆ ಸಂಪರ್ಕ ಕಡಿತಗೊಂಡಿತ್ತು. ರಸ್ತೆಯ ಎರಡೂ ಬದಿಯಲ್ಲಿ ನೂರಾರು ವಾಹನಗಳು ಕಿಮೀ ಗಟ್ಟಲೇ ಸಾಲುಗಟ್ಟಿ ನಿಂತಿದ್ದವು. ಅನಿರೀಕ್ಷಿತವಾಗಿ ನಡೆದ ಈ ಘಟನೆಯಿಂದಾಗಿ ಪ್ರಯಾಣಿಕರು ಪರದಾಡಿದರು.

ಅಪಘಾತ ಏಲ್ಲಿ? ಹೇಗಾಯ್ತು?


ಖಾನಾಪುರ ತಾಲೂಕಿನ ಬೆಳಗಾವಿ-ಚೋರ್ಲಾ ರಾಜ್ಯ ಹೆದ್ದಾರಿಯ ಕಾಲಮನಿ ಗ್ರಾಮದ ಬಳಿ ಘಟನೆ ಸಂಭವಿಸಿದೆ. ಚಾಲಕನ ನಿಯಂತ್ರಣ ಕಳೆದುಕೊಂಡು ಲಾರಿಯ ಡಿಸೈಲ್ ಟ್ಯಾಂಕಿಗೆ ರಭಸದಿಂದ ಗುದ್ದಿದೆ. ಕೂಡಲೇ ಬೆಂಕಿ
ಹತ್ತಿಕೊಂಡು ಎರಡೂ ವಾಹನಗಳಿಗೆ ಆವರಿಸಿದೆ.