ಬೆಳಗಾವಿ(ಮಾ.20): ಚಲಿಸುತ್ತಿದ್ದ ಕಾರಿಗೆ ಆಕಸ್ಮಿಕವಾಗಿ ಬೆಂಕಿ ತಗುಲಿದ ಪರಿಣಾಮ ಮಹಿಳೆಯೊಬ್ಬಳು ಸಜೀವವಾಗಿ ದಹನಗೊಂಡಿರುವ ಹೃದಯ ವಿದ್ರಾವಕ ಘಟನೆ ಮಹಾರಾಷ್ಟ್ರದ ಸಾವಂತವಾಡಿ ಜಿಲ್ಲೆಯ ಅಂಬೋಲಿ ಜಲಪಾತದ ಬಳಿ ಬುಧವಾರ ಸಂಭವಿಸಿದೆ. 

ಬೆಳಗಾವಿ ತಾಲೂಕಿನ ಪೀರನವಾಡಿಯ ಡಾ.ದುಂಡಪ್ಪ ಬಂಗಾರೆಪ್ಪ ಪದ್ಮಣ್ಣವರ (44) ಹಾಗೂ ರಿಝ್ವಾನಾ (41) ಎಂಬುವರು ಮಾ.16 ರಂದು ಅಂಬೋಲಿಗೆ ತೆರಳಿದ್ದರು. ಅಲ್ಲಿ ಹೋಟೆಲ್‌ವೊಂದರಲ್ಲಿ ವಾಸ್ತವ್ಯ ಹೂಡಿದ್ದರು. ಬುಧವಾರ ಸಂಜೆ ಇಬ್ಬರು ಕಾರಿನಲ್ಲಿ ಬೆಳಗಾವಿಯತ್ತ ಪ್ರಯಾಣ ಬೆಳೆಸಿದ್ದರು. ಅಂಬೋಲಿಯ ಮುಖ್ಯ ಜಲಪಾತದ ಬಳಿ ಏಕಾಏಕಿ ಕಾರಿನ ಎಂಜಿನ್‌ಗೆ ಬೆಂಕಿ ಕಾಣಿಸಿಕೊಂಡಿದೆ. ಕ್ಷಣಾರ್ಧದಲ್ಲಿ ಬೆಂಕಿ ಸಂಪೂರ್ಣ ಕಾರಿಗೆ ಆವರಿಸಿತು. ಕಾರು ಚಾಲನೆ ಮಾಡುತ್ತಿದ್ದ ದುಂಡಪ್ಪ ಕಾರಿನಿಂದ ಹೊರ ಜಿಗಿದಿದ್ದಾನೆ. ಆದರೆ, ಕಾರಿನ ಮುಂಭಾಗದ ಸೀಟ್‌ನಲ್ಲಿ ಸೀಟ್ ಬೆಲ್ಟ್ ಧರಿಸಿ ಕುಳಿತಿದ್ದ ರಿಝ್ವಾನಾಗೆ ಹೊರಬರಲು ಸಾಧ್ಯವಾಗಲೇ ಇಲ್ಲ. ನೋಡ ನೋಡುತ್ತಿದ್ದಂತೆಯೇ ಧಗ ಧಗನೇ ಬೆಂಕಿ ಹೊತ್ತಿ ಉರಿದು, ಮಹಿಳೆ ಸಜೀವ ದಹನಗೊಂಡು, ಬೆಂಕಿಗಾಹುತಿಯಾಗಿದ್ದಾರೆ. 

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ಕಾರು ಸಂಪೂರ್ಣವಾಗಿ ಸುಟ್ಟು ಹೋಗಿದೆ.ಪೊಲೀಸರು ಹಾಗೂ ಈ ಮಾರ್ಗದ ಮೂಲಕ ಸಂಚರಿಸುತ್ತಿದ್ದ ಇತರೇ ಪ್ರಯಾಣಿಕರು ಕಾರಿಗೆ ತಗುಲಿದ್ದ ಬೆಂಕಿಯನ್ನು ನಂದಿಸಲು ಪ್ರಯತ್ನಿಸಿದರೂ ಯಾವುದೇ ಪ್ರಯೋ ಜನವಾಗಿಲ್ಲ. ಈ ದುರ್ಘಟನೆಯಲ್ಲಿ ಗಂಭೀರವಾಗಿ ಸುಟ್ಟ ಗಾಯಗೊಂಡಿರುವ ದುಂಡಪ್ಪ ಪದ್ಮಣ್ಣ ವರ ಅವರನ್ನು ಸಾವಂತವಾಡಿಯ ಜಿಲ್ಲಾಸ್ಪತ್ರೆಯಲ್ಲಿ ದಾಖಲಿಸಲಾಗಿದೆ. ಈ ಕುರಿತು ಅಂಬೋಲಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.